ಸೂಪರ್10 ಹೊಸ್ತಿಲಲ್ಲಿ ಬಾಂಗ್ಲಾ
ಚಿತ್ತಗಾಂಗ್: ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ದಾಳಿ ನಡೆಸುವಲ್ಲಿ ಯಶಸ್ವಿಯಾದ ಆತಿಥೇಯ ಬಾಂಗ್ಲಾದೇಶದ ಆಟಗಾರರು ಟಿ20 ವಿಶ್ವಕಪ್ ಪಂದ್ಯಾವಳಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆಲವು ದಾಖಲಿಸಿದ್ದಾರೆ. ಮಂಗಳವಾರ ನಡೆದ ಎರಡನೇ ಅರ್ಹತಾ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 8 ವಿಕೆಟ್ಗಳ ಅಂತರದಲ್ಲಿ ನೇಪಾಳವನ್ನು ಮಣಿಸಿದೆ.
ಟಾಸ್ ಗೆದ್ದ ಬಾಂಗ್ಲಾದೇಶ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ನೇಪಾಳ 20 ಓವರ್ಗಳಲ್ಲಿ 5 ವಿಕೆಟ್ಗೆ 126 ರನ್ ಗಳಿಸಿತು. ನಂತರ ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾದೇಶ 15.3 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 132 ರನ್ ದಾಖಲಿಸಿ, ಗೆಲವಿನ ನಗೆ ಬೀರಿತು. ಈ ಮೂಲಕ ಬಾಂಗ್ಲಾದೇಶ ತಂಡ ತವರಿನ ಅಂಗಣದ ಲಾಭ ಪಡೆದು, ಸೂಪರ್ 10 ಹಂತದ ಹೊಸ್ತಿಲಿಗೆ ಬಂದು ನಿಂತಿದ್ದು, ಈ ಹಂತದಲ್ಲಿ ಬಹುತೇಕ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿದೆ.
ಆರಂಭಿಕ ಕುಸಿತ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ನೇಪಾಳಕ್ಕೆ ಉತ್ತಮ ಆರಂಭ ಸಿಗಲಿಲ್ಲ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಸುಭಾಷ್ ಕಾಕುರೆಲ್ ಹಾಗೂ ಸಾಗರ್ ಪುನ್ ಕೇವಲ 19 ರನ್ಗಳ ಅರಂಭ ನೀಡಿದರು. ಕಾಕುರಲ್ ಕೇವಲ 8 ರನ್ ಗಳಿಸಿ ಫರ್ಹಾದ್ ರೀಜಾ ಅವರಿಗೆ ವಿಕೆಟ್ ಒಪ್ಪಿಸಿದರು. ನಂತರ ಸಾಗರ್ 12 ರನ್ ಗಳಿಸಿ ಅಲ್ ಅಮೀನ್ ಹೊಸೈನ್ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಬಂದ ಜ್ಞಾನೇಂದ್ರ ಮಲ್ಲಾ 13 ರನ್ ದಾಖಲಿಸಿ ಅಲ್ ಅಮೀನ್ ಹುಸೇನ್ ಎಲ್ಬಿ ಬಲೆಗೆ ಬಿದ್ದರು.
ಈ ಮೂಲಕ ನೇಪಾಳ ತಂಡ 39 ರನ್ ಆಗುವಷ್ಟರಲ್ಲೇ ಆರಂಭಿಕ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಆಸರೆಯಾದ ಜತೆಯಾಟ: ಆರಂಭಿಕ ಬ್ಯಾಟ್ಸ್ಮನ್ಗಳು ಸತತವಾಗಿ ವಿಕೆಟ್ ಕೈಚೆಲ್ಲಿದ ಪರಿಣಾಮ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳ ಮೇಲೆ ಹೆಚ್ಚಿನ ಒತ್ತಡ ಬಿತ್ತು. ಈ ವೇಳೆ ನಾಲ್ಕನೇ ವಿಕೆಟ್ಗೆ ಜತೆಯಾದ ಪಾರಸ್ ಖಡ್ಕಾ ಹಾಗೂ ಶರದ್ ವೇಸವ್ಕರ್ 85 ರನ್ಗಳ ಜತೆಯಾಟ ನೀಡುವ ಮೂಲಕ ತಂಡವನ್ನು ಮೇಲೆತ್ತುವ ಪ್ರಯತ್ನ ನಡೆಸಿದರು.
ಪಾರಸ್ (41 ರನ್, 35 ಎಸೆತ, 5 ಬೌಂಡರಿ) ಹಾಗೂ ಶರದ್ (40 ರನ್, 43 ಎಸೆತ, 5 ಬೌಂಡರಿ) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸುವ ಮೂಲಕ ತಂಡದ ಮೊತ್ತವನ್ನು 120ರ ರನ್ ಗಡಿ ದಾಟುವಂತೆ ನೋಡಿಕೊಂಡರು. ಇನ್ನು ಬಾಂಗ್ಲಾದೇಶದ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಅಲ್ ಅಮೀನ್ ಹುಸೇನ್ 2 ವಿಕೆಟ್ ಪಡೆದರು. ಉಳಿದಂತೆ ಮೊರ್ತಜಾ, ಫರ್ಹಾದ್ ರೆಜಾ ತಲಾ 1 ವಿಕೆಟ್ ಪಡೆದರು.
ಸುಲಭ ಗೆಲವು: ನೇಪಾಳ ತಂಡವನ್ನು ಅಲ್ಪ ಮೊತ್ತಕ್ಕೆ ನಿಯಂತ್ರಿಸಿ ಬ್ಯಾಟಿಂಗ್ ಆರಂಭಿಸಿದ ಬಾಂಗ್ಲಾಗೆ ಗೆಲವಿನ ಹಾದಿ ಸುಲಭವಾಗಿತ್ತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ತಮೀಮ್ ಇಕ್ಬಾಲ್(30) ಹಾಗೂ ಅನಾಮುಲ್ ಹಕ್(42) ತಂಡಕ್ಕೆ 63 ರನ್ಗಳ ಭದ್ರ ಅಡಿಪಾಯ ಹಾಕಿಕೊಟ್ಟರು.
ನಂತರ ಬಂದ ಶಬ್ಬಿರ್ ರೆಹಮಾನ್ (ಅಜೇಯ 21) ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರೆ, ಶಕಿಬ್ ಅಲ್ ಹಸನ್ (ಅಜೇಯ 37 ರನ್, 18 ಎಸೆತ, 1 ಬೌಂಡರಿ ಹಾಗೂ 4 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಸಂಕ್ಷಿಪ್ತ ಸ್ಕೋರ್
ನೇಪಾಳ 20 ಓವರ್ಗಳಲ್ಲಿ 5 ವಿಕೆಟ್ಗೆ 126
(ಪಾರಸ್ ಖಡ್ಕಾ 41, ಶರದ್ ವೇಸವ್ಕರ್ 40, ಅಲ್ ಅಮೀನ್ 17ಕ್ಕೆ2)
ಬಾಂಗ್ಲಾದೇಶ 15.3 ಓವರ್ಗಳಲ್ಲಿ 2 ವಿಕೆಟ್ಗೆ 132
(ಅನಾಮುಲ್ ಹಕ್ 42, ಶಕಿಬ್ ಅಲ್ ಹಸನ್ ಅಜೇಯ 37, ತಮೀಮ್ ಇಕ್ಬಾಲ್ 30, ಬಸಂತ್ ರೆಗ್ಮಿ 14ಕ್ಕೆ1)