ಸೈನಾಗೆ 8ನೇ ಶ್ರೇಯಾಂಕ
ನವದೆಹಲಿ: ವಿಶ್ವದ 8ನೇ ಕ್ರಮಾಂಕದ ಆಟಗಾರ್ತಿ ಸೈನಾ ನೆಹವಾಲ್ ಏಪ್ರಿಲ್ 1ರಿಂದ 6ರ ವರೆಗೆ ಇಲ್ಲಿ ನಡೆಯಲಿರುವ 2,50,000 ಡಾಲರ್ ಬಹುಮಾನ ಮೊತ್ತದ ಇಂಡಿಯನ್ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಶ್ರೇಯಾಂಕ ಪಡೆದಿರುವ ಏಕೈಕ ಭಾರತೀಯ ಆಟಗಾರ್ತಿಯಾಗಿದ್ದಾರೆ.
ಇಲ್ಲಿನ ಸಿರಿ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ಆರಂಭವಾಗಲಿರುವ ಈ ಚಾಂಪಿಯನ್ಶಿಪ್ನಲ್ಲಿ ಸೈನಾ ನೆಹವಾಲ್ಗೆ ಎಂಟನೇ ಶ್ರೇಯಾಂಕ ಲಭಿಸಿದೆ.
ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನಲ್ಲಿ ಸೈನಾಗೆ ಸುಲಭ ಸವಾಲು ಎದುರಾಗಿದ್ದು, ಆಸ್ಟ್ರಿಯಾದ ಸಿಮೋನ್ ಪ್ರುಶ್ ಅವರನ್ನು ಎದುರಿಸಲಿದ್ದಾರೆ.
ಈ ಮಧ್ಯೆ ವಿಶ್ವದ ನಂಬರ್ ಒನ್ ಹಾಗೂ ಹಾಲಿ ಒಲಿಂಪಿಕ್ಸ್ ಚಾಂಪಿಯನ್ ಚೀನಾದ ಲೀ ಜೆರುಯಿ ಇಂಡಿಯನ್ ಓಪನ್ ಟೂರ್ನಿಯಲ್ಲಿ ಅಗ್ರಶ್ರೇಯಾಂಕದ ಗೌರವ ಪಡೆದಿದ್ದಾರೆ. ಹಾಲಿ ಚಾಂಪಿಯನ್ ಮತ್ತು ವಿಶ್ವದ 4ನೇ ಕ್ರಮಾಂಕದ ಆಟಗಾರ್ತಿ ಥಾಯ್ಲೆಂಡ್ನ ರಾಚನಾಕ್ ಇಂಟಾನಾನ್ ಇಲ್ಲಿಯೂ ನಾಲ್ಕನೇ ಶ್ರೇಯಾಂಕ ಪಡೆದಿದ್ದಾರೆ.
ಸೈನಾ ಪ್ರತಿಸ್ಪರ್ಧಿ ವಿಶ್ವದ 9ನೇ ಶ್ರೇಯಾಂಕಿತೆ ಪಿ.ವಿ. ಸಿಂಧು, ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ವಿಶ್ವದ ಎರಡನೇ ಶ್ರೇಯಾಂಕಿತೆ ಚೀನಾದ ಶಿಜಿಯನ್ ವಾಂಗ್ರ ಕಠಿಣ ಸವಾಲನ್ನು ಎದುರಿಸಬೇಕಾಗಿದೆ. ಟೂರ್ನಿಯ ಎರಡನೇ ಶ್ರೇಯಾಂಕಿತ ಆಟಗಾರ್ತಿಯೂ ಆಗಿರುವ ವಾಂಗ್ ಎದುರು ಈ ಹಿಂದಿನ ಮುಖಾಬಲದಲ್ಲಿ ಸಿಂಧು ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗಿನ ಮುಖಾಮುಖಿಯಲ್ಲಿ 3-0 ಅಂತರದ ಗೆಲವಿನ ಮುನ್ನಡೆ ಸಾಧಿಸಿರುವುದೇ ಸಿಂಧು ಅವರಲ್ಲಿ ಆತ್ಮವಿಶ್ವಾಸ ಇಮ್ಮಡಿಗೊಳ್ಳುವಂತೆ ಮಾಡಿದೆ. ಕಳೆದವಾರವಷ್ಟೇ ಹೈದರಾಬಾದ್ ಆಟಗಾರ್ತಿಯು ಸ್ವಿಸ್ ಓಪನ್ ಕ್ವಾರ್ಟರ್ಫೈನಲ್ನಲ್ಲಿ ಚೀನಾ ಆಟಗಾರ್ತಿಗೆ ಸೋಲುಣಿಸಿದ್ದರು.
ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಧಾನ ಹಂತದ ಸ್ಪರ್ಧೆಯಲ್ಲಿರುವ ಭಾರತದ ಉಳಿದ ಆಟಗಾರ್ತಿಯರಾದ ತಾನ್ವಿ ಲಾಡ್, ರಾಷ್ಟ್ರೀಯ ಮಾಜಿ ಚಾಂಪಿಯನ್ ತೃಪ್ತಿ ಮುರಗುಂಡೆ, ಪಿ.ಸಿ. ತುಳಸಿ, ಸೈಲಿ ರಾಣೆ ಮತ್ತು ಅರುಂಧತಿ ಪಂಟ್ವಾನೆ ಸಹ ಉತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಇನ್ನು ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಮತ್ತು ವಿಶ್ವದ ನಂಬರ್ ಆಟಾಗರ ಮಲೇಷಿಯಾದ ಲೀ ಚಾಂಗ್ ಪ್ರಮುಖ ಆಕರ್ಷಣೆಯಾಗಿದ್ದಾರೆ.
ಭಾರತದ ಪರ ಪರುಪಳ್ಳಿ ಕಶ್ಯಪ್, ಸೌರಭ್ ವರ್ಮಾ, ಆರ್.ಎಂ.ವಿ. ಗುರುಸಾಯಿದತ್, ಬಿ. ಸಾಯಿ ಪ್ರಣೀತ್, ಕಿಡಂಬಿ ಶ್ರೀಕಾಂತ್, ಆನಂದ್ ಪವಾರ್ ಮತ್ತು ಎಚ್.ಎಸ್. ಪ್ರಣಯ್ ತಮ್ಮ ಸಾಮರ್ಥ್ಯವನ್ನು ಪರೀಕ್ಷೆಗೆ ಒಡ್ಡಿದ್ದಾರೆ.