ಹೈಕೋರ್ಟ್ ಮೆಟ್ಟಿಲೇರಿದ ಧೋನಿ
ಚೆನ್ನೈ: ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದು, ನ್ಯಾಯಾಲಯ ಜೀ ನ್ಯೂಸ್ ಹಾಗೂ ನ್ಯೂಸ್ ನೇಷನ್ ವಾಹಿನಿಗಳು ಈ ಪ್ರಕರಣದಲ್ಲಿ ಧೋನಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.
ನ್ಯ. ಎಸ್ ತಮಿಳ್‌ವನನ್ ಅವರ ಪೀಠ ಧೋನಿಯ ಅರ್ಜಿ ವಿಚಾರಣೆಯನ್ನು ನಡೆಸಿದ್ದು, 2 ವಾರಗಳ ಕಾಲದವರೆಗೆ ಈ ಆದೇಶ ಹೊರಡಿಸಿದೆ.
ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಾನು ಭಾಗಿಯಾಗಿದ್ದೇನೆ ಎಂದು ಜೀ ವಾಹಿನಿ ಸುಳ್ಳು ಸುದ್ದಿ ಪ್ರಸಾರ ಮಾಡಿದೆ ಎಂದು ಧೋನಿ, ಜೀ ಮಿಡಿಯಾ ಕಾರ್ಪೊರೇಷನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಅಲ್ಲದೆ 100 ಸಾವಿರ ಕೋಟಿಯನ್ನು ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ.
ವಿಶ್ವ ಸ್ಕ್ವಾಷ್: ಸೋತ ಜೋಶ್ನಾ
ಪೆನಾಂಗ್ (ಮಲೇಷ್ಯಾ): ವಿಶ್ವದ ನಂಬರ್ 19ನೇ ಆಟಗಾರ್ತಿ ಭಾರತದ ಜೋಶ್ನಾ ಚಿನ್ನಪ್ಪ ಅವರು, ಮಹಿಳಾ ವಿಶ್ವ ಸ್ಕ್ವಾಷ್ ಚಾಂಪಿಯನ್‌ಶಿಪ್‌ನ ಆರಂಭಿಕ ಸುತ್ತಿನಲ್ಲಿ ಸೋಲನುಭವಿಸಿದ್ದಾರೆ.
ವಿಶ್ವದ ನಾಲ್ಕನೇ ನಂಬರ್ ಆಟಗಾರ್ತಿ ಇಂಗ್ಲೆಂಡ್‌ನ ಅಲಿಸನ್ ವಾಟರ್ ಅವರ ವಿರುದ್ಧ, ಚಿನ್ನಪ್ಪ 7-11 7-11 11-9 2-11 ಅಂಕಗಳ ಅಂತರದಿಂದ ಪರಾಭವ ಹೊಂದಿದರು.ಇದಕ್ಕೂ ಮುನ್ನ ಕಳೆದ ತಿಂಗಳು ನಡೆದ ವಿಂಟರ್ ಕ್ಲಬ್ ಸ್ಕ್ವಾಷ್ ಪಂದ್ಯಾವಳಿಯಲ್ಲಿ ಈಜಿಪ್ಟ್‌ನ ಹೇಬಾ ಎಲ್ ಟೋರ್ಕಿ ವಿರುದ್ಧ ಜಯ ಸಾಧಿಸಿದ್ದ ಚಿನ್ನಪ್ಪ ಅವರು, ತಮ್ಮ 8ನೇ ಮಹಿಳಾ ಡಬ್ಲ್ಯೂಎಸ್‌ಎ ಟೂರ್ ಪ್ರಶಸ್ತಿ ಗೆದ್ದುಕೊಂಡಿದ್ದರು.
ವಿಶ್ವದ ನಂಬರ್ 11 ಆಟಗಾರ್ತಿ ಭಾರತದ ದೀಪಿಕಾ ಪಳ್ಳಿಕಾಲ್ ಅವರು ಬುಧವಾರ ನಡೆಯಲಿರುವ, ಪಂದ್ಯಾವಳಿಯ ಮೊದಲ ಸುತ್ತಿನಿ ಇಂಗ್ಲೆಂಡ್‌ನ ಲೀಸಾ ಐತ್ಕೆನ್ ಅವರನ್ನು ಎದುರಿಸಲಿದ್ದಾರೆ.