ಹೊರಬಿದ್ದ ಹಾಂಕಾಂಗ್
ಚಿತ್ತಗಾಂಗ್: ಆರಂಭಿಕ ಆಟಗಾರ ಮೊಹ್ಮದ್ ಶಹಜಾದ್ ಮತ್ತು ಶಫಿವುಲ್ಲಾ ಅವರ ಅರ್ಧ ಶತಕದ ನೆರವಿನೊಂದಿಗೆ ಅಫ್ಘಾನಿಸ್ತಾನ ತಂಡ, ಐಸಿಸಿ ವಿಶ್ವ ಟಿ20 ಪಂದ್ಯಾವಳಿಯ 'ಬಿ' ಗುಂಪಿನ ಅರ್ಹತಾ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್ ವಿರುದ್ಧ 7 ವಿಕೆಟ್ ಅಂತರದಿಂದ ಜಯ ಸಾಧಿಸುವ ಮೂಲಕ ಪ್ರಮುಖ ಸುತ್ತಿಗೆ ಅರ್ಹತೆ ಪಡೆಯುವ ಆಸೆಯನ್ನು ಜೀವಂತವಾಗಿ ಉಳಿಸಿಕೊಂಡಿದೆ.
ಹಾಂಕಾಂಗ್ ನೀಡಿದ 154 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಅಫ್ಘಾನಿಸ್ತಾನ, ಇನ್ನೂ ಎರಡು ಓವರ್‌ಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು ಸುಲಭವಾಗಿ ಗುರಿ ಸೇರಿತು. ಕೇವಲ 24 ಎಸೆತಗಳಲ್ಲಿ ಅಜೇಯ 51 ರನ್ ದಾಖಲಿಸಿದ ಶಫಿವುಲ್ಲಾ ಅವರು ಅಫ್ಘಾನಿಸ್ತಾನ ತಂಡದ ಜಯದ ರೂವಾರಿ ಎನಿಸಿದರು. ಇನ್ನು ಶಫಿವುಲ್ಲಾ ಜತೆ ತಕ್ಕ ಸಾಥ್ ನೀಡಿದ ಶಹಜಾದ್ 53 ಎಸೆತಗಳಲ್ಲಿ 68 ರನ್‌ದಾಖಲಿಸಿದರು. ಇಬ್ಬರ ಜತೆಯಾಟದಲ್ಲಿ 3ನೇ ವಿಕೆಟ್‌ಗೆ 47 ರನ್ ದಾಖಲಿಸಿದರು. ಶಹಜಾದ್ ಅರ್ಧ ಶತಕದಲ್ಲಿ 3 ಸಿಕ್ಸರ್ ಮತ್ತು 6 ಬೌಂಡರಿಗಳು ಸೇರಿದ್ದರೆ, ಶಫಿವುಲ್ಲಾ ಅರ್ಧ ಶತಕದಲ್ಲಿ 3 ಸಿಕ್ಸರ್ ಮತ್ತು 5 ಬೌಂಡರಿಗಳು ಸೇರಿದ್ದವು.
ಶಫಿವುಲ್ಲಾ ಸಮರ್ಥ ಬ್ಯಾಟಿಂಗ್ ನೆರವಿನೊಂದಿಗೆ, ಆಫ್ಘನ್ ತಂಡ 17ನೇ ಓವರ್‌ನಲ್ಲಿ 24 ರನ್ ಗಳಿಸಿಕೊಂಡಿತು. ಈ ಓವರ್‌ನಲ್ಲಿ ಬೌಲಿಂಗ್ ಮಾಡಿದ ಹಾಂಕಾಂಗ್‌ನ ಐಜಾಜ್ ಖಾನ್ ತಂಡಕ್ಕೆ ದುಬಾರಿಯಾಗಿ ಪರಿಣಮಿಸಿದರು. ಈ ಓವರ್‌ನಲ್ಲೇ ಹಾಂಕಾಂಗ್ ಪ್ರಮುಖ ಸುತ್ತಿಗೆ ಪ್ರವೇಶಿಸುವ ಕನಸು ಭಗ್ನಗೊಂಡಿತು.
ಈ ಓವರ್‌ನಲ್ಲಿ ಐಜಾಜ್ ಎಸೆತದಲ್ಲಿ 3 ಸಿಕ್ಸರ್ ಸಿಡಿಸಿದ ಶಫಿವುಲ್ಲಾ ಅವರು ನಂತರದ ಓವರ್‌ನಲ್ಲಿ ಹಸೀಬ್ ಅಜ್ಮದ್ ಬೌಲಿಂಗ್‌ನಲ್ಲಿ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸುವ ಮೂಲಕ ತಮ್ಮ ಅರ್ಧ ಶತಕ ಪೂರೈಸಿ ಸಂಭ್ರಮಿಸಿದರು. ಇದು ತಂಡಕ್ಕೆ ಜಯ ತಂದುಕೊಟ್ಟಿತು.
'ಕಳೆದ ಎರಡು ಪಂದ್ಯಗಳಲ್ಲಿ ನಾನು ಸೂಕ್ತ ಬ್ಯಾಟಿಂಗ್ ಪ್ರದರ್ಶಿಸಿರಲಿಲ್ಲ. ಆಗ ಸಮಯ ತೆಗೆದುಕೊಂಡು ಆಡುವಂತೆ ನಮ್ಮ ಕೋಚ್ ನನಗೆ ಸಲಹೆ ನೀಡಿದ್ದರು. ಅಲ್ಲದೆ, ಪಂದ್ಯದಲ್ಲಿ ಎಲ್ಲರೂ ನನಗೆ ಬೆಂಬಲ ನೀಡಿದರು. ಇದು ನನ್ನ ಶ್ರೇಷ್ಠ ಅರ್ಧ ಶತಕ ಮತ್ತು ನಮ್ಮ ತಂಡದ ಶ್ರೇಷ್ಠ ಜಯವೂ ಹೌದು. ಮುಂದಿನ ಪಂದ್ಯವನ್ನು ನಾವು ಎದುರು ನೋಡುತ್ತಿದ್ದು, ಪ್ರಮುಖ ಸುತ್ತಿಗೆ ಪ್ರವೇಶಿಸುವ ವಿಶ್ವಾಸ ಹೊಂದಿದ್ದೇವೆ' ಎಂದು ಪಂದ್ಯದಲ್ಲಿ ಜಯ ಸಾಧಿಸಿದ ನಂತರ ಶಹಜಾದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಹಾಂಕಾಂಗ್ ತಂಡ, ತಮ್ಮ ಮಧ್ಯಮ ಮತ್ತು ಕೆಳ ಕ್ರಮಾಂಕ ವೈಫಲ್ಯ ಕಂಡರೂ, 8 ವಿಕೆಟ್ ನಷ್ಟಕ್ಕೆ 153 ರನ್‌ಗಳ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಿತ್ತು. ವಖಸ್ ಬರ್ಕತ್ (32), ನಾಯಕ ಜಾಮೀ ಅತ್ಕಿನ್ಸನ್ (31) ಹಾಗೂ ಮಾರ್ಕ್ ಚಾಂಪ್‌ಮ್ಯಾನ್ (38) ಅವರು ಹಾಂಕಾಂಗ್ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಸಂಕ್ಷಿಪ್ತ ಸ್ಕೋರ್
ಹಾಂಕಾಂಗ್ 8 ವಿಕೆಟ್‌ಗೆ 153ಚಾಂಪ್‌ಮನ್ 38, ಬರ್ಕಾತ್ 32
ಶಾಪೂರ್ 27ಕ್ಕೆ2, ನಬಿ 27ಕ್ಕೆ2
ಅಫ್ಘಾನಿಸ್ತಾನ 3 ವಿಕೆಟ್‌ಗೆ 154ಶಹಜಾದ್ 68, ಶಫಿವುಲ್ಲಾ 51
ತನ್ವಿರ್ 19ಕ್ಕೆ1, ಹಸೀಬ್ 35ಕ್ಕೆ1