ಐಪಿಎಲ್: ಯುಎಇಯಲ್ಲಿ 20 ಪಂದ್ಯ
ಚೆನ್ನೈ: ಕುತೂಹಲ ಕೆರಳಿಸಿದ್ದ ಐಪಿಎಲ್ ಏಳನೇ ಆವೃತ್ತಿಯ ಮೊದಲ ಹಂತದ ಪಂದ್ಯಗಳ ವೇಳಾಪಟ್ಟಿ ಬಿಡುಗಡೆಯಾಗಿದ್ದು, ಯುಎಇಯಲ್ಲಿ ಒಟ್ಟು 20 ಪಂದ್ಯಗಳನ್ನು ನಡೆಸಲು ಐಪಿಎಲ್ ಆಡಳಿತ ಮಂಡಳಿ ನಿರ್ಧರಿಸಿದೆ.
ಬುಧವಾರ ಐಪಿಎಲ್ ಆಡಳಿತ ಮಂಡಳಿ ಸಭೆನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಉದ್ಘಾಟನಾ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ವಿರುದ್ಧ ಸೆಣಸಲಿದೆ. ನಂತರ ಏ.30ರಂದು ಮುಂಬೈ ಇಂಡಿಯನ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ನಡುವೆ ಯುಎಇನಲ್ಲಿ ಕಡೇಯ ಪಂದ್ಯ ನಡೆಯಲಿದೆ.
ಐಪಿಎಲ್ ಆಡಳಿತ ಮಂಡಳಿ ಐಪಿಎಲ್ ಪಂದ್ಯಾವಳಿಯ ಮೊದಲ ಹಂತದ ಪಂದ್ಯಗಳನ್ನು ಯುಎಇನಲ್ಲಿ ಏ.16-30ರ ವರೆಗೆ ನಡೆಸುತ್ತಿದ್ದು, ಒಟ್ಟು 20 ಪಂದ್ಯಗಳನ್ನು ನಡೆಸಲು ನಿರ್ಧರಿಸಿದೆ. ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಕೋಲ್ಕತಾ ನೈಟ್ರೈಡರ್ಸ್ ತಂಡಗಳು ಸೆಣೆಸಾಟ ನಡೆಸುತ್ತಿದ್ದು, ಪಂದ್ಯ ಭಾರತೀಯ ಕಾಲಮಾನ ರಾತ್ರಿ 8ಕ್ಕೆ(ಸ್ಥಳೀಯ ಕಾಲಮಾನ ಸಂಜೆ 6.30ಕ್ಕೆ) ಆರಂಭವಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿ ಟ್ವಿಟರ್ ಮೂಲಕ ತಿಳಿಸಿದೆ. ಯುಎಇಯಲ್ಲಿನ 20 ಪಂದ್ಯಗಳನ್ನು 3 ಕ್ರೀಡಾಂಗಣದಲ್ಲಿ ನಡೆಸಲಾಗುವುದು. ಅಬುಧಾಬಿಯಲ್ಲಿನ ಶೇಕ್ ಜಯೆದ್ ಕ್ರೀಡಾಂಗಣ, ಶಾರ್ಜಾದಲ್ಲಿನ ಸಿಎ ಕ್ರೀಡಾಂಗಣ ಹಾಗೂ ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ನಡೆಸಲಾಗುವುದು ಎಂದು ತಿಳಿಸಿದೆ. ಇನ್ನು ಎರಡನೇ ಹಂತದ ಪಂದ್ಯಾವಳಿಯು ಮೇ 1ರಿಂದ ಮೇ 12ರವರೆಗೆ ನಡೆಯಲಿದ್ದು, ಈ ಹಂತದ ಪಂದ್ಯಗಳನ್ನು ಭಾರತದಲ್ಲಿ ನಡೆಸಲು ಪ್ರಯತ್ನಿಸುತ್ತಿದ್ದು, ಸಾಧ್ಯವಾಗದಿದ್ದರೆ ಬಾಂಗ್ಲಾದೇಶದಲ್ಲಿ ನಡೆಸಲಾಗುವುದು.
ಈ ಬಾರಿ ಪಂದ್ಯಾವಳಿಯಲ್ಲಿ ಕೇವಲ ಎಂಟು ತಂಡಗಳು ಭಾಗವಹಿಸುತ್ತಿರುವುದರಿಂದ ಪಂದ್ಯಾವಳಿಯ ಅವಧಿಯು ಕಡಿಮೆಯಾಗಿದ್ದು, ಒಟ್ಟು 45 ದಿನಗಳಲ್ಲಿ 60 ಪಂದ್ಯಗಳು ನಡೆಯಲಿವೆ. ಕಳೆದ ಬಾರಿ ಒಟ್ಟು 54 ದಿನಗಳಲ್ಲಿ 76 ಪಂದ್ಯಗಳು ನಡೆದಿದ್ದವು.
ಇನ್ನು ಎರಡನೇ ಹಾಗೂ ಮೂರನೇ ಹಂತದ ಪಂದ್ಯಾವಳಿಯ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು. ಎರಡನೇ ಹಂತ ಭಾರತದಲ್ಲೇ ಸಾಧ್ಯತೆ: ಐಪಿಎಲ್ ಪಂದ್ಯಾವಳಿಯ ಎರಡನೇ ಹಂತವನ್ನು ಭಾರತದಲ್ಲೇ ಆಯೋಜಿಸಲು ಐಪಿಎಲ್ ಆಡಳಿತ ಮಂಡಳಿ ಸತತ ಪ್ರಯತ್ನ ನಡೆಸಿದೆ. ಅಲ್ಲದೆ ಚುನಾವಣೆ ಮುಕ್ತಾಯದ ನಂತರ ಐಪಿಎಲ್ ಪಂದ್ಯಗಳನ್ನು ಆಯೋಜಿಸಲು ರಾಜ್ಯ ಸರ್ಕಾರಗಳು ಉತ್ಸುಕವಾಗಿದೆ ಎಂದು ಐಪಿಎಲ್ ಆಡಳಿತ ಮಂಡಳಿ ತಿಳಿಸಿದೆ.
ಕೇಂದ್ರ ಸರ್ಕಾರದ ಗೃಹ ಇಲಾಖೆಯ ಒಪ್ಪಿಗೆ ನಂತರ ಹಲವು ರಾಜ್ಯ ಸರ್ಕಾರಗಳು ಚುನಾವಣೆ ನಂತರ ಐಪಿಎಲ್ ಪಂದ್ಯಾವಳಿಯನ್ನು ಆಯೋಜಿಸಲು ಆಯೋಜಿಸಲು ಅನುಮತಿ ನೀಡುವ ಸೂಚನೆ ಸಿಕ್ಕಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ತಿಳಿಸಿದ್ದಾರೆ. ಇದುವರೆಗೂ ಸಿಕ್ಕಿರುವ ಸ್ಪಂದನೆ ಪ್ರಕಾರ, ಮೇ ಮೊದಲ ವಾರದಿಂದಲೇ ಐಪಿಎಲ್ ಪಂದ್ಯಗಳನ್ನು ಭಾರತದಲ್ಲಿ ಆಯೋಜಿಸುವ ಸಾಧ್ಯತೆಗಳಿವೆ ಎಂದು ಬಿಸಿಸಿಐ ತಿಳಿಸಿದೆ.
ಮೊದಲ ಹಂತದ ವೇಳಾಪಟ್ಟಿ
ದಿನಾಂಕ ಪಂದ್ಯ ಸ್ಥಳ
ಏ. 16 ಮುಂಬೈ ಇಂಡಿಯನ್ಸ್-ಕೋಲ್ಕತಾ ನೈಟ್ ರೈಡರ್ಸ್ ಅಬುಧಾಬಿ
ಏ. 17 ಡೆಲ್ಲಿ ಡೇರ್ಡೆವಿಲ್ಸ್-ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಾರ್ಜಾ
ಏ. 18 ಚೆನ್ನೈ ಸೂಪರ್ ಕಿಂಗ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಅಬುಧಾಬಿ
ಏ. 18 ಸನ್ರೈಸರ್ಸ್ ಹೈದರಾಬಾದ್-ರಾಜಸ್ಥಾನ ರಾಯಲ್ಸ್ ಅಬುಧಾಬಿ
ಏ. 19 ರಾಯಲ್ ಚಾಲೆಂಜರ್ಸ್ ಬೆಂಗಳೂರು-ಮುಂಬೈ ಇಂಡಿಯನ್ಸ್ ದುಬೈ
ಏ. 19 ಕೋಲ್ಕತಾ ನೈಟ್ ರೈಡರ್ಸ್-ಡೆಲ್ಲಿ ಡೇರ್ಡೆವಿಲ್ಸ್ ದುಬೈ
ಏ. 20 ರಾಜಸ್ಥಾನ ರಾಯಲ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ಶಾರ್ಜಾ
ಏ. 21 ಚೆನ್ನೈ ಸೂಪರ್ ಕಿಂಗ್ಸ್-ಡೆಲ್ಲಿ ಡೇರ್ಡೆವಿಲ್ಸ್ ಅಬುಧಾಬಿ
ಏ. 22 ಕಿಂಗ್ಸ್ ಇಲೆವೆನ್ ಪಂಜಾಬ್-ಸನ್ರೈಸರ್ಸ್ ಹೈದರಾಬಾದ್ ಶಾರ್ಜಾ
ಏ. 23 ರಾಜಸ್ಥಾನ ರಾಯಲ್ಸ್-ಚೆನ್ನೈ ಸೂಪರ್ ಕಿಂಗ್ಸ್ ದುಬೈ
ಏ. 24 ರಾಯಲ್ ಚಾಲೆಂಜರ್ಸ್ ಬೆಂಗಳೂರು- ನೈಟ್ರೈಡರ್ಸ್ ಶಾರ್ಜಾ
ಏ. 25 ಸನ್ರೈಸರ್ಸ್ ಹೈದರಾಬಾದ್-ಡೆಲ್ಲಿ ಡೇರ್ಡೆವಿಲ್ಸ್ ದುಬೈ
ಏ. 25 ಚೆನ್ನೈ ಸೂಪರ್ ಕಿಂಗ್ಸ್-ಮುಂಬೈ ಇಂಡಿಯನ್ಸ್ ದುಬೈ
ಏ. 26 ರಾಜಸ್ಥಾನ ರಾಯಲ್ಸ್-ರಾಯಲ್ ಚಾಲೆಂಜರ್ಸ್ ಅಬುಧಾಬಿ
ಏ. 26 ಕಿಂಗ್ಸ್ ಇಲೆವೆನ್ ಪಂಜಾಬ್-ಕೋಲ್ಕತಾ ನೈಟ್ ರೈಡರ್ಸ್ ಅಬುಧಾಬಿ
ಏ. 27 ಡೆಲ್ಲಿ ಡೇರ್ಡೆವಿಲ್ಸ್-ಮುಂಬೈ ಇಂಡಿಯನ್ಸ್ ಶಾರ್ಜಾ
ಏ. 27 ಸನ್ರೈಸರ್ಸ್ ಹೈದರಾಬಾದ್-ಚೆನ್ನೈ ಸೂಪರ್ ಕಿಂಗ್ಸ್ ಶಾರ್ಜಾ
ಏ. 28 ರಾಯಲ್ ಚಾಲೆಂಜರ್ಸ್-ಕಿಂಗ್ಸ್ ಇಲೆವೆನ್ ಪಂಜಾಬ್ ದುಬೈ
ಏ. 29 ಕೋಲ್ಕತಾ ನೈಟ್ ರೈಡರ್ಸ್-ರಾಜಸ್ಥಾನ ರಾಯಲ್ಸ್ ಅಬುಧಾಬಿ
ಏ. 30 ಮುಂಬೈ ಇಂಡಿಯನ್ಸ್-ಸನ್ರೈಸರ್ಸ್ ಹೈದರಾಬಾದ್ ದುಬೈ