ಗೆಲವಿನ ಹಳಿಗೆ ಕರ್ನಾಟಕ
ಮೈಸೂರು: ಮೊದಲ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ್ದ ಕರ್ನಾಟಕ ತಂಡ ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ತನ್ನ ದ್ವಿತೀಯ ಪಂದ್ಯದಲ್ಲಿ, ಭೂಪಾಲ್ ವಿರುದ್ಧ 4-1 ಅಂತರದಿಂದ ಅದ್ವಿತೀಯ ಗೆಲುವು ಸಾಧಿಸಿತು. ಈ ಮೂಲಕ ಆತಿಥೇಯರು ಗೆಲವಿನ ಲಯ ಕಂಡುಕೊಂಡಿದ್ದಾರೆ.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಎ ಗುಂಪಿನ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡವು ಒಂದು ಪೆನಾಲ್ಟಿ ಕಾರ್ನರ್‌ನ ನೆರವು ಸೇರಿ ನಾಲ್ಕು ಗೋಲು ಬಾರಿಸಿದರೆ, ಭೂಪಾಲ್ ತಂಡ 1 ಗೋಲು ಬಾರಿಸಿ ಸಮಾಧಾನಪಟ್ಟಿತು. ಪಂದ್ಯದ ಮೊದಲಾರ್ಧದ ಅಂತ್ಯದಲ್ಲಿ ಕರ್ನಾಟಕ ತಂಡದ ಎನ್. ರಮ್ಯ ಮೊದಲ ಗೋಲು ಬಾರಿಸಿ ತಂಡದ ಖಾತೆ ತೆರೆದರು. ನಂತರ ಸಿ.ಜಿ. ಸುಷ್ಮಾ, ನಾಯಕಿ ಎಚ್.ಪಿ. ಸಂಧ್ಯಾ ಮತ್ತು ನಿಹಾ ತಲಾ ಒಂದು ಗೋಲು ಬಾರಿಸಿದರು.
ಸತತ ಹೋರಾಟ ನಡೆಸಿದ ಉಭಯ ತಂಡಗಳ ಆಟಗಾರ್ತಿಯರು ಆರಂಭದಲ್ಲಿ ಗೋಲು ಬಾರಿಸಲು ತಿಣುಕಾಡಿದರೂ. ಈ ನಡುವೆ ಪೆನಾಲ್ಟಿ ಕಾರ್ನರ್‌ನಲ್ಲಿ ಸುಷ್ಮ ತಮಗೆ ದೊರೆತ ಅವಕಾಶ ಸದುಪಯೋಗ ಪಡಿಸಿಕೊಂಡು ಎರಡನೇ ಗೋಲು ಬಾರಿಸಿ ತಂಡಕ್ಕೆ ಚೇತರಿಕೆ ನೀಡಿದರು. ಪಂದ್ಯದ 47ನೇ ನಿಮಿಷದಲ್ಲಿ ಸಂಧ್ಯಾ ಮತ್ತು 50ನೇ ನಿಮಿಷದಲ್ಲಿ ನಿಹಾ ಮತ್ತೊಂದು ಗೋಲು ದಾಖಲಿಸಿದರು. ನಿನ್ನೆ ಕಳೆದ ಬಾರಿಯ ರನ್ನರ್ ಆಗಿದ್ದ ಮಧ್ಯಪ್ರದೇಶ ತಂಡದ ವಿರುದ್ಧ ಸೋಲು ಅನುಭವಿಸಿದ್ದ ಕರ್ನಾಟಕ ಇಂದು ಚೇತರಿಕೆಯ ಆಟವಾಡಿತು.
ಇದಕ್ಕೆ ಪ್ರತಿಯಾಗಿ ಭೂಪಾಲ್ ತಂಡವು ಸಮರ್ಥ ಪ್ರತಿರೋಧ ಒಡ್ಡಿತಾದರೂ ಆತಿಥೇಯ ತಂಡದ ಆಟಗಾರ್ತಿಯರು ಅದಕ್ಕೆ ಅವಕಾಶ ನೀಡಲಿಲ್ಲ. ಪಂದ್ಯದ 56ನೇ ನಿಮಿಷದಲ್ಲಿ ಭೂಪಾಲ್‌ನ ಪೂಜಾ ಯಾದವ್ ಒಂದು ಗೋಲು ಬಾರಿಸಿದರು. ಮಂಗಳವಾರ ದೆಹಲಿ ತಂಡವನ್ನು 4-0 ಅಂತರದಿಂದ ಸೋಲಿಸಿದ್ದ ಭೂಪಾಲ್ ಇಂದು ಕರ್ನಾಟಕ ವಿರುದ್ಧ 4-1 ಅಂತರದಿಂದ ಸೋತಿತು. ಇದಕ್ಕೂ ಮುನ್ನ ನಡೆದ ಪಂದ್ಯಾವಳಿಯಲ್ಲಿ ಒಡಿಶಾ ತಂಡವು, ಪಂಜಾಬ್ ತಂಡವನ್ನು 3-0 ಅಂತರದಿಂದ ಮಣಿಸಿತು. ಎರಡು ಪೆನಾಲ್ಟಿ ಕಾರ್ನರ್ ಸದುಪಯೋಗ ಮಾಡಿಕೊಂಡ ಒಡಿಶಾ ನಾಯಕಿ ಅಂಬಿಕ ಟೊಪ್ಪೊ ಮತ್ತು ಅಶ್ಮಿತ ಬಾರ್ಲಾ ಅವರು ಎರಡು ಗೋಲು, ಸರೋಜಿನಿ ಎಕ್ಕ ಒಂದು ಗೋಲು ದಾಖಲಿಸಿದರು. ಪಂದ್ಯದ ಮೊದಲ ಅವಧಿಯಲ್ಲಿ 2-0 ಅಂತರ, ದ್ವಿತೀಯಾರ್ಧದಲ್ಲಿ 3-0 ಅಂತರ ಕಾಯ್ದುಕೊಂಡಿತು. ಬಳಿಕ ನಡೆದ ಪಂದ್ಯದಲ್ಲಿ ಮಧ್ಯಪ್ರದೇಶ ತಂಡವು ಹಾಕಿ ದೆಹಲಿಯನ್ನು 5-0 ಅಂತರದಿಂದ ಪರಾಭವಗೊಳಿಸಿತು. ತಂಡದ ರಕ್ಷಿ ಪ್ರಜಾಪತಿ ಮತ್ತು ಅನುಜ ಸಿಂಗ್ ತಲಾ ಎರಡು ಗೋಲು ಬಾರಿಸಿದರೆ, ಪ್ರೀತಿ ದುಬೆ ಒಂದು ಗೋಲು ದಾಖಲಿಸಿದರು. ಪಂದ್ಯದ 8 ಮತ್ತು 25ನೇ ನಿಮಿಷದಲ್ಲಿ ರಕ್ಷಿ ಪ್ರಜಾಪತಿ ಗೋಲು ಬಾರಿಸಿ ಪಂದ್ಯಕ್ಕೆ ಉತ್ತಮ ಆರಂಭ ನೀಡಿದರು. ಬಳಿಕ ಅನುಜ ಸಿಂಗ್ ಪಂದ್ಯದ 54 ಮತ್ತು 66ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಪಂದ್ಯದ ಮೊದಲಾರ್ಧಕ್ಕೆ ಮಧ್ಯಪ್ರದೇಶ 2-0 ಮತ್ತು ದ್ವಿತೀಯಾರ್ಧಕ್ಕೆ 5-0 ಅಂತರ ಕಾಯ್ದುಕೊಂಡಿತು.
ಪಂದ್ಯ ಹತ್ತೊಂಬತ್ತು- ಭೂಪಾಲ್ ವಿರುದ್ಧ ಕರ್ನಾಟಕಕ್ಕೆ ಜಯ 4-1
ಕರ್ನಾಟಕ ಗೋಲು ಸ್ಕೋರ್
ಎನ್. ರಮ್ಯ- 34ನಿ.
ಸಿ.ಜಿ. ಸುಷ್ಮ- 43ನಿ.
ಎಚ್.ಪಿ. ಸಂಧ್ಯಾ- 47ನಿ.
ನಿಹಾ- 50ನಿ.
ಭೂಪಾಲ್ ಗೋಲು ಸ್ಕೋರ್
ಪೂಜಾ ಯಾದವ್- 56ನಿ.
ಪಂದ್ಯ ಹದಿನೆಂಟು- ದೆಹಲಿ ಮಣಿಸಿದ ಮಧ್ಯಪ್ರದೇಶ 5-0
ಮಧ್ಯಪ್ರದೇಶ ಗೋಲು ಸ್ಕೋರ್
ರಕ್ಷಿ ಪ್ರಜಾಪತಿ- 8, 25ನಿ.
ಅನುಜ ಸಿಂಗ್- 54, 66ನಿ.
ಪ್ರೀತಿ ದುಬೆ- 61ನಿ.
ಪಂದ್ಯ ಇಪ್ಪತ್ತು- ಪಂಜಾಬ್ ಮಣಿಸಿದ ಒಡಿಶಾ 3-0
ಅಂಬಿಕ ಟೊಪ್ಪೊ- 9ನಿ.
ಅಶ್ಮಿತ ಬಾರ್ಲಾ- 33ನಿ.
ಸರೋಜಿನಿ ಎಕ್ಕ- 54ನಿ.
ಡಿ.ಎನ್. ಮಹೇಂದ್ರ