ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡಚ್‌ಗೆ ಜಿಂಬಾಬ್ವೆ ಡಿಚ್ಚಿ

Mainashree
Updated On : 19 Mar 2014, 10:02 am

ಸೈಲ್ಹೆಟ್: ಆಟದ ಎಲ್ಲ ವಿಭಾಗಗಳಲ್ಲೂ ಶಿಸ್ತುಬದ್ಧ ಪ್ರದರ್ಶನ ನೀಡಿದ ಜಿಂಬಾಬ್ವೆ ಆಟಗಾರರು ಟಿ-20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅಧಿಕಾರಯುತ ಗೆಲವು ದಾಖಲಿಸಿದ್ದಾರೆ.
ಬುಧವಾರ ನಡೆದ 'ಬಿ' ಗುಂಪಿನ ಪಂದ್ಯದಲ್ಲಿ ಜಿಂಬಾಬ್ವೆ ತಂಡ 5 ವಿಕೆಟ್‌ಗಳಿಂದ ನೆದರ್‌ಲ್ಯಾಂಡ್ಸ್ ತಂಡವನ್ನು ಪರಾಭವಗೊಳಿಸಿತು.
ನೆದರ್‌ಲ್ಯಾಂಡ್ಸ್ ತಂಡ ಗೆಲ್ಲಲು ನೀಡಿದ್ದ 141 ರನ್‌ಗಳ ಗುರಿಯನ್ನು ಸಮರ್ಥವಾಗಿ ಬೆಂಬತ್ತಿದ ಜಿಂಬಾಬ್ವೆ ಕೊನೆಯ ಎಸೆತದಲ್ಲಿ ಗೆಲವಿನ ಕೇಕೆ ಹಾಕಿತು. ಅಂತಿಮವಾಗಿ ಜಿಂಬಾಬ್ವೆ ಪಡೆ 5 ವಿಕೆಟ್ ನಷ್ಟಕ್ಕೆ 146 ರನ್‌ಗಳಿಸಿ ಗೆಲವಿನ ಸಂಭ್ರಮ ಆಚರಿಸಿತು. ಈ ಜಯದೊಂದಿಗೆ ಜಿಂಬಾಬ್ವೆ 2 ಅಂಕಗಳನ್ನು ತನ್ನ ಖಾತೆಗೆ ಹಾಕಿಕೊಂಡಿತು.   ಜಿಂಬಾಬ್ವೆ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ನಾಯಕ ಮತ್ತು ವಿಕೆಟ್ ಕೀಪರ್ ಬ್ರೆಂಡನ್ ಮೆಕಲಂ 49 (39 ಎಸೆತ, 2 ಬೌಂಡರಿ, 1 ಸಿಕ್ಸರ್) ಮತ್ತು ಆರಂಭಿಕ ಹ್ಯಾಮಿಲ್ಟನ್ ಮಸಕಜ 43 ರನ್ (45 ಎಸೆತ, 3 ಬೌಂಡರಿ, 1 ಸಿಕ್ಸರ್) ಗಳಿಸುವುದರೊಂದಿಗೆ ತಮ್ಮ ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಕೊನೆಯ ಎಸೆತದಲ್ಲಿ ಜಿಂಬಾಬ್ವೆಗೆ ಗೆಲ್ಲಲು 1 ರನ್ ಬೇಕಿತ್ತು. ಆಗ ಬೌಲಿಂಗ್ ಮಾಡಿದ ಜಮೀಲ್ ಎಸೆತವನ್ನು ಸಿಬಾಂಡ ಸಿಕ್ಸರ್ ಆಗಿ ಪರಿವರ್ತಿಸುವ ಮೂಲಕ ತಮ್ಮ ತಂಡಕ್ಕೆ ರೋಚಕ ಗೆಲವು ತಂದುಕೊಟ್ಟರು.
ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು ಸೋಲನುಭವಿಸಿದ್ದ ಜಿಂಬಾಬ್ವೆಗೆ ಈ ಪಂದ್ಯ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ಒಂದು ವೇಳೆ ಈ ಪಂದ್ಯದಲ್ಲಿ ಜಿಂಬಾಬ್ವೆ ಸೋಲನುಭವಿಸಿದ್ದರೆ, ಸೂಪರ್-10 ಹಂತ ಪ್ರವೇಶಿಸುವ ಆಸೆ ಕೈಬಿಡಬೇಕಿತ್ತು. ಆದರೆ, ಜಿಂಬಾಬ್ವೆ ಆಟಗಾರರು ಉತ್ತಮ ಪ್ರದರ್ಶನ ನೀಡುವ ಮೂಲಕ ನಿರೀಕ್ಷಿತ ಗೆಲವು ದಕ್ಕಿಸಿಕೊಂಡು ಮುಂದಿನ ಸುತ್ತಿನ ಆಸೆ ಜೀವಂತವಾಗಿರಿಸಿಕೊಂಡರು.
ಮತ್ತೊಂದೆಡೆ ಯುಎಇ ವಿರುದ್ಧದ ತನ್ನ ಮೊದಲ ಪಂದ್ಯದಲ್ಲಿ ಗೆಲವು ದಾಖಲಿಸಿ ಶುಭಾರಂಭ ಮಾಡಿದ್ದ ನೆದರ್‌ಲ್ಯಾಂಡ್ಸ್ ಇಲ್ಲಿ ಗೆಲವು ದಾಖಲಿಸಿದ್ದರೆ, ಮುಂದಿನ ಸುತ್ತಿನ ಹಾದಿ ಸರಳಗೊಳಿಸಿಕೊಳ್ಳಲಿತ್ತು. ಆದರೆ, ಬ್ಯಾಟಿಂಗ್ ವೈಫಲ್ಯದಿಂದಾಗಿ ಗೆಲವಿನ ಆಸೆ ಈಡೇರಲಿಲ್ಲ.
ನೆದರ್‌ಲ್ಯಾಂಡ್ಸ್‌ಗೆ ಕೂಪರ್ ನೆರವು: ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ನೆದರ್‌ಲ್ಯಾಂಡ್ಸ್ 5 ವಿಕೆಟ್ ನಷ್ಟಕ್ಕೆ 140 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಗಳಿಸಿತು.   ಐದನೇ ಕ್ರಮಾಂಕದಲ್ಲಿ ಆಡಲಿಳಿದ ಟಾಮ್ ಕೂಪರ್ ಅರ್ಧಶತಕ ಬಾರಿಸಿ ನೆದರ್‌ಲ್ಯಾಂಡ್ಸ್ ತಂಡವನ್ನು ಭಾರಿ ಕುಸಿತದಿಂದ ಪಾರು ಮಾಡಿದರು. ಅವರು ಕೇವಲ 58 ಎಸೆತಗಳಲ್ಲಿ 9 ಬೌಂಡರಿ ಮತ್ತು 1 ಸಿಕ್ಸರ್ ಸೇರಿದಂತೆ 72 ರನ್‌ಗಳಿಸಿ ಅಜೇಯರಾಗುಳಿದರು.  ನೆದರ್‌ಲ್ಯಾಂಡ್ಸ್ ತಂಡ ತೀರ ಕಳಪೆ ಆರಂಭ ಪಡೆದಿತ್ತು. ತಂಡದ ಮೊತ್ತ 35 ರನ್‌ಗಳಾಗುವಷ್ಟರಲ್ಲಿಯೇ 4 ವಿಕೆಟ್ ಕಳೆದುಕೊಂಡು ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿತ್ತು. ಆದರೆ ಟಾಮ್ ಕೂಪರ್ ಮತ್ತು ಬೆನ್ ಕೂಪರ್ ಐದನೇ ವಿಕೆಟ್‌ಗೆ 52 ರನ್ ಸೇರಿಸಿ ತಂಡದ ಕುಸಿತ ತಡೆದು ಉತ್ತಮ ಮೊತ್ತ ಪೇರಿಸಲು ನೆರವಾದರು. ಬೆನ್ ಕೂಪರ್ 24 ಎಸೆತಗಳಲ್ಲಿ 1 ಬೌಂಡರಿ ಹೊಂದಿದ್ದ 20 ರನ್‌ಗಳಿಸಿದರು.
ಜಿಂಬಾಬ್ವೆ ಪರ ಉತ್ತಮ ದಾಳಿ ನಡೆಸಿದ ಪ್ರಾಸ್ಪರ್ ಉತ್ಸೆಯ್ 2 ಹಾಗೂ ನತ್ಸಾಯಿ ಮುಶಂಗ್ವೆ ಮತ್ತು ಟಿನಾಶೆ ಪಣ್ಯಂಗರ ತಲಾ 1 ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್
ನೆದರ್‌ಲ್ಯಾಂಡ್ಸ್ 20 ಓವರುಗಳಲ್ಲಿ 5 ವಿಕೆಟ್‌ಗೆ 140 (ಟಾಮ್ ಕೂಪರ್ ಅಜೇಯ 72, ಬೆನ್ ಕೂಪರ್ 20, ಮುದಾಸ್ಸರ್ ಬುಖಾರಿ ಅಜೇಯ 14, ವೆಸ್ಲೆ ಬ್ಯಾರೆಸಿ 12, ಪ್ರಾಸ್ಪರ್ ಉತ್ಸೇಯ್ 24ಕ್ಕೆ2, ನತ್ಸಾಯಿ ಮುಶಂಗ್ವೆ 24ಕ್ಕೆ1, ಟಿನಾಶೆ ಪಣ್ಯಂಗರ 38ಕ್ಕೆ1). ಜಿಂಬಾಬ್ವೆ 20 ಓವರುಗಳಲ್ಲಿ 5 ವಿಕೆಟ್‌ಗೆ 146 (ಬ್ರೆಂಡನ್ ಟೇಲರ್ 49, ಹ್ಯಾಮಿಲ್ಟನ್ ಮಸಕಜ 43, ಸೀನ್ ವಿಲಿಯಮ್ಸನ್ 26, ಪೀಟರ್ ಸೀಲಾರ್ 9ಕ್ಕೆ2, ಗುಗ್ಟೆನ್ 22ಕ್ಕೆ1, ಜಮೀಲ್ 30ಕ್ಕೆ1).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement