'ರಹಾನೆ ಆರಂಭಿಕರಾಗಿ ರೋಹಿತ್ ಸ್ಥಾನ ತುಂಬಲಿ'
ಕೋಲ್ಕತಾ: ಅಜಿಂಕ್ಯ ರಹಾನೆ ಅವರು ಆರಂಭಿಕರಾಗಿ, ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಬೇಕು ಎಂದು ಭಾರತ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ ಅವರು ಅಭಿಪ್ರಾಯಪಟ್ಟಿದ್ದಾರೆ.
ತುಣುಕು ಮಾದರಿಯ ಕ್ರಿಕೆಟ್ನಲ್ಲಿ ರಹಾನೆ ಅವರು ಆರಂಭಿಕರಾಗಿ ಯಶಸ್ವಿಯಾಗಿದ್ದಾರೆ. ಐಪಿಎಲ್ನಲ್ಲಿ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ ಎಂದು ಸಹ ಗಂಗೂಲಿ ತಿಳಿಸಿದರು. ಚಾಂಪಿಯನ್ಸ್ ಲೀಗ್ 2013ರಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಪರ ಆರಂಭಿಕರಾಗಿ ಯಶಸ್ವಿಯಾಗಿದ್ದ ರಹಾನೆ, ಅತಿ ಹೆಚ್ಚು ರನ್ ಗಳಿಸಿದ್ದಕ್ಕಾಗಿ ಚಿನ್ನದ ಬ್ಯಾಟ್ ಪಡೆದುಕೊಂಡಿದ್ದರು.
'ಬ್ಯಾಟಿಂಗ್ನಲ್ಲಿ ಧೋನಿ ಅವರು ರೋಹಿತ್ ಶರ್ಮಾ ಮತ್ತು ರಹಾನೆ ಅವರಲ್ಲಿ ಒಬ್ಬರನ್ನು ಶಿಖರ್ ಧವನ್ ಅವರೊಂದಿಗೆ ಜತೆಯಾಟಗಾರನಾಗಿ ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ಅವರು ರಹಾನೆಗೆ ಅವಕಾಶ ಬಿಟ್ಟುಕೊಡುವುದು ಸೂಕ್ತ. ಅಲ್ಲದೆ, ಈ ಮಾದರಿಯಲ್ಲಿ ರಹಾನೆ ಅವರಿಗೆ ಅವಕಾಶ ನೀಡದೇ, ಹೆಚ್ಚು ಕಾಲ ಬೆಂಚ್ ಕಾಯಿಸುವುದು ಸರಿಯಲ್ಲ' ಎಂದಿದ್ದಾರೆ. ಅಮಿತ್ ಮಿಶ್ರಾ ಮತ್ತು ರವಿಚಂದ್ರನ್ ಅಶ್ವಿನ್ ಅವರು ಶ್ರೀಲಂಕಾ ವಿರುದ್ಧ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ತಕ್ಕ ಪ್ರದರ್ಶನ ನೀಡಿದ್ದಾರೆ. ಆದರೆ, ರವಿಂದ್ರ ಜಡೇಜಾ ನೀಡಿದ ಪ್ರದರ್ಶನ ಕೊಂಚ ಆತಂಕ ಉಂಟುಮಾಡಿದೆ ಎಂದಿದ್ದಾರೆ. 'ಮೊದಲ ಅಭ್ಯಾಸ ಪಂದ್ಯದಲ್ಲಿ ಸೋಲನುಭವಿಸಿರುವುದು, ಭಾರತ ತಂಡಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ಅಲ್ಲದೆ, ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ' ಎಂದಿದ್ದಾರೆ.