ಎಎಫ್‌ಸಿ: ಲಂಕಾ ಮಣಿಸಿದ ಭಾರತ ವನಿತೆಯರು
ಕೊಲಂಬೊ: ಸುಮನ್ ಮೋಹಾಪತ್ರಾಸ್ ಅವರು ಹ್ಯಾಟ್ರಿಕ್ ದಾಖಲಿಸುವುದರೊಂದಿಗೆ, ಭಾರತದ ವನಿತೆಯರ ತಂಡ, 14 ವರ್ಷದೊಳಗಿನ ಪ್ರಾದೇಶಿಕ ಎಎಫ್‌ಸಿ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಶ್ರೀಲಂಕಾ ವಿರುದ್ಧ 7-1 ಗೋಲುಗಳ ಅಂತರದಿಂದ ಭರ್ಜರಿ ಜಯ ಕಂಡುಕೊಂಡಿದೆ.
ಪಂದ್ಯದ 19ನೇ ನಿಮಿಷದಲ್ಲಿ ರೋಜಾ ದೇವಿ ಅವರು ಗೋಲು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಭಾರತ ತಂಡ 1-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ನಂತರ 28ನೇ ನಿಮಿಷದಲ್ಲಿ ಗೋಲು ಗಳಿಸಿದ ಲೀಫಾ ಗಾಮಾ ಅವರು ಪ್ರವಾಸಿ ತಂಡಕ್ಕೆ 2-0 ಅಂತರದಿಂದ ಮುನ್ನಡೆ ತಂದುಕೊಟ್ಟರು. ಆಗ ಎರಡು ನಿಮಿಷ ಕಳೆಯುತ್ತಿದ್ದಂತೆಯೇ ಶ್ರೀಜಾನಾ ತಮಾಂಗ್ ಅವರು ಭಾರತ ತಂಡಕ್ಕೆ ಮೂರನೇ ಗೋಲು ಗಳಿಸಿಕೊಟ್ಟರು.
ನಂತರ ದ್ವಿತೀಯಾರ್ಧ ಪಂದ್ಯದಲ್ಲಿ ಪಾರಮ್ಯ ಮೆರೆದ ಭಾರತ ತಂಡದ ಸುಮನ್ ಮೋಹಪತ್ರಾ ಅವರು 53 ಮತ್ತು 60ನೇ ನಿಮಿಷದಲ್ಲಿ ಎರಡು ಗೋಲು ದಾಖಲಿಸಿದರು. ನಂತರ 69ನೇ ನಿಮಿಷದಲ್ಲಿ ಕರೆನ್ ಪೈಸ್ ಅವರು ಮತ್ತೊಂದು ಗೋಲು ದಾಖಲಿಸಿದರು. ಆಗಲೇ ಸುಮನ್ ಅವರು ತಮ್ಮ ಹ್ಯಾಟ್ರಿಕ್ ಪೂರೈಸಿದರು.
ಪಂದ್ಯಾವಳಿಯಲ್ಲಿ ಎಲ್ಲ ಪಂದ್ಯಗಳಿಗೆ 70 ನಿಮಿಷ ನಿಗದಿಗೊಳಿಸಲಾಗಿದ್ದು, ಮೊದಲಾರ್ಧ ಮತ್ತು ದ್ವಿತೀಯಾರ್ಧ ಪಂದ್ಯ ತಲಾ 35 ನಿಮಿಷ ತೆಗೆದುಕೊಳ್ಳಲಿದೆ.