ಹಾಕಿ ಪಂದ್ಯ ಇನ್ನು ಕೇವಲ 60 ನಿಮಿಷ ಮಾತ್ರ
ಲಾವುಸನ್ನೆ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ (ಎಫ್ಐಎಚ್) ಹಾಕಿ ಪಂದ್ಯದ ಸ್ವರೂಪದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಹೀಗಾಗಿ ಇದುವರೆಗೂ 70 ನಿಮಿಷಗಳ ಕಾಲ ನಡೆಯುತ್ತಿದ್ದ ಪಂದ್ಯ ಈಗ ಕೇವಲ 60 ನಿಮಿಷಗಳ ಕಾಲ ನಡೆಯಲಿದೆ. ಅಲ್ಲದೆ, ಈ ಮುನ್ನ 35 ನಿಮಿಷಗಳ ಕಾಲ ಮೊದಲಾರ್ಧ ಮತ್ತು ದ್ವಿತೀಯಾರ್ಧ ನಡೆಯುತ್ತಿದ್ದ ಪಂದ್ಯವನ್ನು ಈಗ ನಾಲ್ಕು ಭಾಗಗಳನ್ನಾಗಿಸಲಾಗಿದೆ.
ಪ್ರತಿಯೊಂದು ಭಾಗ 15 ನಿಮಿಷಗಳ ಕಾಲಾವಕಾಶವನ್ನು ಹೊಂದಿದೆ. ಇದು ಬರುವ ಸೆಪ್ಟೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಮೊದಲ 15 ನಿಮಿಷ ಮತ್ತು ಮೂರನೇ 15 ನಿಮಿಷದ ನಂತರ 2 ನಿಮಿಷಗಳ ಕಾಲ ವಿರಾಮ ಇರಲಿದೆ. ಆದರೆ, ಮೊದಲಾರ್ಧ ಪಂದ್ಯದ ನಂತರ ನೀಡಲಾಗುತ್ತಿದ್ದ 10 ನಿಮಿಷಗಳ ವಿರಾಮದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಬಾಸ್ಕೆಟ್ಬಾಲ್, ಅಮೆರಿಕನ್ ಫುಟ್ಬಾಲ್ ಹಾಗೂ ನೆಟ್ಬಾಲ್ ಮಾದರಿಯ ಹಿನ್ನೆಲೆಯಲ್ಲಿ ಎಫ್ಐಎಚ್ ಆಡಳಿತ ಮಂಡಳಿ ಈ ತೀರ್ಮಾನ ತೆಗೆದುಕೊಂಡಿದೆ.
ಹಾಕಿಯ ಅಭಿವೃದ್ಧಿ ಮತ್ತು ತೀವ್ರತೆಯನ್ನು ಸುಧಾರಿಸಲು, ಅಭಿಮಾನಿಗಳ ಉತ್ಸಾಹ ಹೆಚ್ಚಿಸಲು ಹಾಗೂ ಪಂದ್ಯದ ಕುರಿತು ವಿಶ್ಲೇಷಣೆ ಮಾಡಲು ಹೆಚ್ಚಿನ ಸಮಯ ನೀಡಲು ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ತಿಳಿಸಿದೆ.