ಇಂದು ಹಾಕಿ ಸೆಮಿ ಕದನ
ಕ.ಪ್ರ. ವಾರ್ತೆ, ಮೈಸೂರು, ಮಾ.21
ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಸೆಮಿಫೈನಲ್ ಪಂದ್ಯಗಳು ಶನಿವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್ನಲ್ಲಿ ನಡೆಯಲಿವೆ.
ಹಾಕಿ ಕರ್ನಾಟಕ ಆಯೋಜಿಸಿರುವ ಈ ಪಂದ್ಯಾವಳಿಯ ಎ ವಿಭಾಗದ ಸೆಮಿಫೈನಲ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಹರಿಯಾಣ ಮತ್ತು ಜಾರ್ಖಂಡ್ ಮುಖಾಮುಖಿ ಆಗಲಿವೆ. ದ್ವಿತೀಯ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಮಧ್ಯಪ್ರದೇಶ ತಂಡವನ್ನು ಒಡಿಶಾ ಎದುರಾಗಲಿದೆ.
ಎ ಗುಂಪಿನ ಹರಿಯಾಣ, ಸಾಯ್ ತಂಡವನ್ನು 6-0, ತಮಿಳುನಾಡು ತಂಡವನ್ನು 14-0 ಮತ್ತು ರಾಜಸ್ಥಾನ ತಂಡವನ್ನು 14-0ಯಿಂದ ಮಣಿಸಿ ಸೆಮಿಫೈನಲ್ ಪ್ರವೇಶಿಸಿ, ಈ ಬಾರಿಯೂ ಪ್ರಬಲ ತಂಡವಾಗಿ ಹೊರಹೊಮ್ಮಿದೆ. ಇದರ ಎದುರಾಳಿ ಸಿ ಗುಂಪಿನ ಜಾರ್ಖಂಡ್ ಬೆಂಗಾಲ ವಿರುದ್ಧ 19-0, ಮಹಾರಾಷ್ಟ್ರ ವಿರುದ್ಧ 6-2 ಅಂತರದಿಂದ ಜಯಗಳಿಸಿ, ಉತ್ತರಪ್ರದೇಶ ವಿರುದ್ಧದ ಪಂದ್ಯ ಡ್ರಾ ಮಾಡಿಕೊಂಡು ಸಮಾನ ಅಂಕ ಗಳಿಸಿದೆ. ಬಿ ಗುಂಪಿನ ಮಧ್ಯಪ್ರದೇಶ ತಂಡವು ಕರ್ನಾಟಕವನ್ನು 8-1, ದೆಹಲಿಯನ್ನು 5-0 ಮತ್ತು ಭೂಪಾಲ್ ತಂಡವನ್ನು 4-0 ಅಂತರದಿಂದ ಮಣಿಸಿ ಸೆಮೀಸ್ ಪ್ರವೇಶಿಸಿದೆ. ಇದರ ಎದುರಾಳಿ ಡಿ ಗುಂಪಿನ ಒಡಿಶಾ ತಂಡ ಬಿಹಾರ್ ವಿರುದ್ಧ 15-0, ಪಂಜಾಬ್ ವಿರುದ್ಧ 3-0 ಮತ್ತು ಮುಂಬೈ ವಿರುದ್ಧ 4-0 ಅಂತರದಿಂದ ಮಣಿಸಿದೆ.
ಮೊದಲ ಸೆಮಿಫೈನಲ್ ಪಂದ್ಯ ಮಧ್ಯಾಹ್ನ 2 ಮತ್ತು ದ್ವಿತೀಯ ಸೆಮಿಫೈನಲ್ 4ಕ್ಕೆ ನಡೆಯುವುದು. ಈ ಪಂದ್ಯದಲ್ಲಿ ಗೆದ್ದ ಎರಡು ತಂಡಗಳು ಮಾ.23ಕ್ಕೆ ನಡೆಯುವ ಫೈನಲ್ಗೆ ಪ್ರವೇಶ ಪಡೆದರೆ, ಸೋತ ಎರಡು ತಂಡಗಳು ಮೂರನೆ ಸ್ಥಾನಕ್ಕೆ ಹೋರಾಟ ನಡೆಸಲಿವೆ.