ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೆದ್ದರೂ ಜಿಂಬಾಬ್ವೆ ಕೈಗೆಟುಕದ ಫಲ

Vishwanath S
Updated On : 22 Mar 2014, 12:59 pm

ಸೈಲ್ಹೆಟ್: ಸಾಂಘಿಕ ಪ್ರದರ್ಶನ ನೀಡುವ ಮೂಲಕ ನಿರೀಕ್ಷೆಯಂತೆ ಗಲವು ದಕ್ಕಿಸಿಕೊಂಡು ಸೂಪರ್-10ರ ಕನಸು ಕಟ್ಟಿಕೊಂಡಿದ್ದ ಜಿಂಬಾಬ್ವೆಗೆ ಅಂತಿಮವಾಗಿ ಅದು ಈಡೇರದೇ ಇದ್ದುದಕ್ಕೆ ಭಾರಿ ನಿರಾಸೆಗೊಂಡಿದೆ.
ಶುಕ್ರವಾರ ಇಲ್ಲಿ ನಡೆದ 'ಬಿ' ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಜಿಂಬಾಬ್ವೆ ತಂಡ 5 ವಿಕೆಟ್‌ಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತಂಡವನ್ನು ಸೋಲಿಸಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿತ್ತು.
ಆದರೆ, ನಂತರ ನಡೆದ ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ತಂಡ ಅಚ್ಚರಿಯ ರೀತಿಯಲ್ಲಿ ಐರ್ಲೆಂಡ್ ತಂಡದ ಸವಾಲನ್ನು ಹತ್ತಿಕ್ಕುವ ಮೂಲಕ ಗುಂಪಿನಲ್ಲಿ ಅಗ್ರಪಟ್ಟಕ್ಕೇರಿದ ಪರಿಣಾಮ ಜಿಂಬಾಬ್ವೆಯ ಕನಸು ನುಚ್ಚುನೂರಾಯಿತು.
ಈ ಗುಂಪಿನಲ್ಲಿ ನೆದರ್‌ಲ್ಯಾಂಡ್ಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಲಾ 4 ಅಂಕಗಳಿಸಿ ಸಮಗೌರವ ಹೊಂದಿದ್ದವು. ಆದರೆ, ರನ್‌ರೇಟ್ ಆಧಾರದಲ್ಲಿ ನೆದರ್‌ಲ್ಯಾಂಡ್ಸ್‌ಗೆ ಮೊದಲ ಸ್ಥಾನ ದೊರೆತರೆ, ಜಿಂಬಾಬ್ವೆ ಮತ್ತು ಐರ್ಲೆಂಡ್ ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಹಂಚಿಕೊಂಡವು. ಯುಎಇ ಆಡಿದ ಮೂರೂ ಪಂದ್ಯಗಳಲ್ಲಿ ಸೋಲನುಭವಿಸಿದ ಪರಿಣಾಮ ಅಂಕದ ಖಾತೆ ಕೂಡ ತೆರೆಯಲಾಗದೇ ಕೊನೆಯ ನಾಲ್ಕನೇ ಸ್ಥಾನದಲ್ಲಿ ಉಳಿಯಿತು.
ಇಂದು ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಯುಎಇ 20 ಓವರುಗಳಲ್ಲಿ 9 ವಿಕೆಟ್ ನಷ್ಟಕ್ಕೆ 116 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.
ಮಧ್ಯಮ ಕ್ರಮಾಂಕದ ಆಟಗಾರ ಸ್ವಪ್ನಿಲ್ ಪಾಟೀಲ್ 26 ಎಸೆತಗಳಲ್ಲಿ 5 ಬೌಂಡರಿಗಳಿದ್ದ 30 ರನ್‌ಗಳಿಸಿದ್ದೇ ತಂಡದ ಪರ ಉತ್ತಮ ಸಾಧನೆಯಾಯಿತು. ಜಿಂಬಾಬ್ವೆ ಪರ ಶಿಸ್ತಿನ ದಾಳಿ ಸಂಘಟಿಸಿದ ಸೀನ್ ವಿಲಿಯಮ್ಸ್ 3 ಹಾಗೂ ಶಿಕಂದರ್ ರಾಜಾ ಮತ್ತು ಟೆಂಡಾಯಿ ಚಾಟರಾ ತಲಾ 2 ವಿಕೆಟ್ ಉರುಳಿಸಿದರು.
ಸಾಧಾರಣ ಗುರಿ ಬೆಂಬತ್ತಿದ ಜಿಂಬಾಬ್ವೆ ಕೇವಲ 13.4 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 118 ರನ್‌ಗಳಿಸಿ ಗೆಲವಿನ ಕೇಕೆ ಹಾಕಿತು.
ಆರಂಭದ ಒಂದು ಹಂತದಲ್ಲಿ ಜಿಂಬಾಬ್ವೆ ಕೂಡ ಒತ್ತಡಕ್ಕೆ ಸಿಲುಕಿತ್ತು. ಆದರೆ, ಕೆಳಕ್ರಮಾಂಕದಲ್ಲಿ ಸಿಡಿದ ಎಲ್ಟನ್ ಚಿಗುಂಬುರಾ ಕೇವಲ 21 ಎಸೆತಗಳಲ್ಲಿ 6 ಬೌಂಡರಿ ಮತ್ತು 3 ಸಿಕ್ಸರ್ ಸೇರಿದಂತೆ ಅಜೇಯ 53 ರನ್‌ಗಳಿಸಿವುದರೊಂದಿಗೆ ತಮ್ಮ ತಂಡದ ಗೆಲವಿನಲ್ಲಿ ವಿಜೃಂಭಿಸಿದರು.
ಸಂಕ್ಷಿಪ್ತ ಸ್ಕೋರ್
ಯುನೈಟೆಡ್ ಅರಬ್ ಎಮಿರೇಟ್ಸ್ 20 ಓವರುಗಳಲ್ಲಿ 9 ವಿಕೆಟ್‌ಗೆ 116
 (ಸ್ವಪ್ನಿಲ್ ಪಾಟೀಲ್ 30, ಖುರ್ರಂ ಖಾನ್ 26, ಕಮ್ರಾನ್ ಶಹಜಾದ್ 21, ಸೀನ್ ವಿಲಿಯಮ್ಸ್ 15ಕ್ಕೆ3, ಶಿಕಂದರ್ ರಾಜಾ 15ಕ್ಕೆ2, ಟೆಂಡಾಯಿ ಚಾಟರಾ 21ಕ್ಕೆ2).
ಜಿಂಬಾಬ್ವೆ 13.4 ಓವರುಗಳಲ್ಲಿ 5 ವಿಕೆಟ್‌ಗೆ 118 (ಎಲ್ಟನ್ ಚಿಗುಂಬುರಾ ಅಜೇಯ 53, ಟಿಮೈಸೇನ್ ಮರುಮಾ ಅಜೇಯ 22, ವುಸಿ ಸಿಬಾಂಡಾ 16, ಮಂಜುಲ್ ಗುರುಗೆ 18ಕ್ಕೆ2).

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement