ಗೆದ್ದು ನಲಿದ ನೆದರ್ಲೆಂಡ್
ಸೈಲೆಟ್: ಟಿ20 ಪಂದ್ಯದಲ್ಲಿ ಯಾವುದೇ ತಂಡಗಳು ಆಡಲಿ ಅಭಿಮಾನಿಗಳಿಗೆ ಮನರಂಜನೆಯ ಕೊರತೆಯಾಗುವುದಿಲ್ಲ. ಅದೇ ರೀತಿ ಇತ್ತು ನೆದರ್ಲೆಂಡ್ ಹಾಗೂ ಐರ್ಲೆಂಡ್ ನಡುವಣ ಟಿ20 ವಿಶ್ವಕಪ್ನ ಕಡೇಯ ಅರ್ಹತ ಪಂದ್ಯ.
ಈ ಪಂದ್ಯದ ವೇಳೆ ಬೌಂಡರಿ ಹಾಗೂ ಸಿಕ್ಸರ್ಗಳ ಮಳೆ ಸುರಿದವು. ಅಂತಿಮವಾಗಿ ಅಬ್ಬರದ ಆಟ ಪ್ರದರ್ಶಿಸಿದ ನೆದರ್ಲೆಂಡ್ ರೋಚಕ ಗೆಲವು ದಾಖಲಿಸಿತು. ಈ ಮೂಲಕ ಸೂಪರ್ 10 ಹಂತಕ್ಕೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾಯಿತು.
ಶುಕ್ರವಾರ ನಡೆದ ಬಿ ಗುಂಪಿನ ಎರಡನೇ ಹಾಗೂ ಅಂತಿಮ ಅರ್ಹತಾ ಸುತ್ತಿನ ಪಂದ್ಯ ಹೆಚ್ಚು ಮಹತ್ವ ಪಡೆದು ಕೊಂಡಿತ್ತು. ಏಕೆಂದರೆ, ಈ ಪಂದ್ಯದ ಫಲಿತಾಂಶ ನೆದರ್ಲೆಂಡ್, ಐರ್ಲೆಂಡ್ ಹಾಗೂ ಜಿಂಬಾಬ್ವೆ ತಂಡಗಳ ಸೂಪರ್ 10 ಹಂತದ ಪ್ರವೇಶವನ್ನು ನಿರ್ಧರಿಸುವ ಪಂದ್ಯವಾಗಿತ್ತು.
ಮೊದಲು ಟಾಸ್ ಗೆದ್ದ ನೆದರ್ಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಲು ಕಣಕ್ಕಿಳಿದ ಐರ್ಲೆಂಡ್ ತಂಡ 20 ಓವರ್ಗಳಲ್ಲಿ 4 ವಿಕೆಟ್ಗೆ 189 ರನ್ ದಾಖಲಿಸಿತು. ನಂತರ ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ ಕೇವಲ 13.5 ಓವರ್ಗಳಲ್ಲಿ 4 ವಿಕೆಟ್ಗೆ 193 ರನ್ ದಾಖಲಿಸಿತು.
ನೆದರ್ಲೆಂಡ್ ಸೂಪರ್ 10 ಹಂತಕ್ಕೆ ಪ್ರವೇಶಿಸಲು 190 ರನ್ಗಳ ಗುರಿಯನ್ನು ಕೇವಲ 14.2 ಓವರ್ ಒಳಗಾಗಿ ತಲುಪಬೇಕಿತ್ತು. ಇನ್ನು ಐರ್ಲೆಂಡ್ ಕೇವಲ ಗೆಲವು ದಾಖಲಿಸಿದ್ದರೆ ಸೂಪರ್ 10ಕ್ಕೆ ಪ್ರವೇಶಿಸುತ್ತಿತ್ತು. ಒಂದು ವೇಳೆ ನೆದರ್ಲೆಂಡ್ ತಂಡ 14.2 ಓವರ್ಗಳ ನಂತರ ಗೆಲವು ದಾಖಲಿಸಿದ್ದರೆ, ಜಿಂಬಾಬ್ವೆ ತಂಡ ಸೂಪರ್ 10ಕ್ಕೆ ಪ್ರವೇಶಿಸುತ್ತಿತ್ತು. ಹಾಗಾಗಿ ಈ ಪಂದ್ಯ ಹೆಚ್ಚು ಮಹತ್ವವನ್ನು ಪಡೆದುಕೊಂಡಿತ್ತು.
ಅಬ್ಬರಿಸಿದ ಡಚ್ಚರು: ಬೃಹತ್ ಗುರಿಯನ್ನು ಬೆಂಬತ್ತಲು ಒತ್ತಡದಿಂದಲೇ ಕಣಕ್ಕಿಳಿದ ನೆದರ್ಲೆಂಡ್ ತಂಡದ ಆಟಗಾರರು, ಯಾವುದೇ ಹಂತದಲ್ಲೂ ಸಮಯ ವ್ಯರ್ಥ ಮಾಡಲಿಲ್ಲ. ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿ ಪಂದ್ಯವನ್ನು ನಿಗದಿತ ಓವರ್ನಲ್ಲಿ ಗೆದ್ದುಕೊಂಡರು. ನೆದರ್ಲೆಂಡ್ ತಮ್ಮ ಇನಿಂಗ್ಸ್ನಲ್ಲಿ ಒಟ್ಟು, 19 ಸಿಕ್ಸರ್ ಹಾಗೂ 12 ಬೌಂಡರಿಗಳನ್ನು ದಾಖಲಿಸಿತು.
ನೆದರ್ಲೆಂಡ್ ಪರ ಸ್ಟೀಫನ್ ಮೈಬರ್ಗ್ (63 ರನ್, 23 ಎಸೆತ, 4 ಬೌಂಡರಿ 7 ಸಿಕ್ಸರ್) ಹಾಗೂ ಟಾಮ್ ಕೂಪರ್ (45 ರನ್, 15 ಎಸೆತ, 1 ಬೌಂಡರಿ, 6 ಸಿಕ್ಸರ್) ಸ್ಫೋಟಕ ಬ್ಯಾಟಿಂಗ್ ನಡೆಸಿ ತಂಡದ ಗೆಲವಿನ ರೂವಾರಿಯಾದರು.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ಆ್ಯಂಡ್ರೂ ಪಾಯಿಂಟರ್ (57 ರನ್, 38 ಎಸೆತ, 4 ಬೌಂಡರಿ, 4 ಸಿಕ್ಸರ್) ಹಾಗೂ ವಿಲಿಯಮ್ ಪೋಟರ್ಫೀಲ್ಡ್(47 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಅವರ ಜವಾಬ್ದಾರಿಯುತ ಬ್ಯಾಟಿಂಗ್ನಿಂದ ಬೃಹತ್ ಮೊತ್ತ ದಾಖಲಿಸಿತು. ನಂತರ ಬೌಲಿಂಗ್ನಲ್ಲಿ ನಿಯಂತ್ರಣ ಸಾಧಿಸದ ಪರಿಣಾಮ ಸೋಲನುಭವಿಸಬೇಕಾಯಿತು.
ಸಂಕ್ಷಿಪ್ತ ಸ್ಕೋರ್
ಐರ್ಲೆಂಡ್ 20 ಓವರ್ಗಳಲ್ಲಿ
4 ವಿಕೆಟ್ಗೆ 189
(ಪಾಯಿಂಟರ್ 57, ಪೋಟರ್ಫೀಲ್ಡ್ 47, ಜಮಿಲ್ 26ಕ್ಕೆ2)
ನೆದರ್ಲೆಂಡ್ 13.5 ಓವರ್ಗಳಲ್ಲಿ
4 ವಿಕೆಟ್ಗೆ 193 (ಸ್ಟೀಫನ್ ಮೈಬರ್ಗ್ 63, ಟಾಮ್ ಕೂಪರ್ 45, ಒಬ್ರಿಯಾನ್ 29ಕ್ಕೆ2)