ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಗೇಯ್ಲ್ ಹಿಡಿದಿಡಲು ಮಹೀ ತಂತ್ರ

Mainashree
Updated On : 22 Mar 2014, 10:50 am

ಇಂದು ವೆಸ್ಟ್ ಇಂಡೀಸ್-ಟೀಂ ಇಂಡಿಯಾ ಸಮರ
ಮಿರ್‌ಫುರ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಜಯ ಸಾಧಿಸಿ ವಿಶ್ವಾಸಕ್ಕೆ ಮರಳಿರುವ ಭಾರತ ಕ್ರಿಕೆಟ್ ತಂಡ, ವಿಶ್ವ ಟಿ20 ಪಂದ್ಯಾವಳಿಯಲ್ಲಿ ಭಾನುವಾರ ನಡಯಲಿರುವ ತನ್ನ 2ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೆಣಸಲು ಸಿದ್ಧವಾಗಿದೆ.
ಆದರೆ, ಎದುರಾಳಿ ತಂಡದಲ್ಲಿರುವ ಅಪಾಯಕಾರಿ ಸ್ಫೋಟಕ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ ಟೀಂ ಇಂಡಿಯಾಕ್ಕೆ ಸವಾಲಾಗಿ ಪರಿಣಮಿಸಿದ್ದಾರೆ. ಅಲ್ಲದೆ, ಹಾಲಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ತಂಡವನ್ನು ಸುಲಭವಾಗಿ ಪರಿಗಣಿಸುವಂತಿಲ್ಲ.ಸ್ಫೂರ್ತಿ ತುಂಬಿರುವ ಪಾಕ್ ವಿರುದ್ಧದ ಗೆಲವು: ನಿರಂತರ ಸೋಲಿನಿಂದ ಕಂಗೆಟ್ಟಿದ್ದ ಟೀಂ ಇಂಡಿಯಾ, ಪಂದ್ಯಾವಳಿಯ ತನ್ನ ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಜಯ ಸಾಧಿಸಿರುವುದು ತಂಡದ ಆಟಗಾರರಲ್ಲಿ ಎಲ್ಲಿಲ್ಲದ ಉತ್ಸಾಹ ತುಂಬಿದೆ. ಹೀಗಾಗಿ ಈಗ ವಿಂಡೀಸ್ ವಿರುದ್ಧ ಗೆಲ್ಲುವ ಹುರುಪಿನಲ್ಲಿರುವ ಭಾರತ ತಂಡಕ್ಕೆ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ ಮಾತ್ರ ಆತಂಕವಾಗಿ ಪರಿಣಮಿಸಿದ್ದಾರೆ.
ಗೇಯ್ಲ್‌ಗೆ ಇದೆ ಮದ್ದು: ವಿಶ್ವದ ಶ್ರೇಷ್ಠ ಟಿ20 ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿರುವ ಕ್ರಿಸ್ ಗೇಯ್ಲ್ ಅವರನ್ನು ಕಟ್ಟಿಹಾಕಲು ಭಾರತ ತಂಡ ಸೂಕ್ತ ತಯಾರಿಯನ್ನೇ ಮಾಡಿಕೊಂಡಿದೆ. ಭಾರತದ ಸ್ಪಿನ್ ತ್ರಿಮೂರ್ತಿಗಳಾದ ರವಿಚಂದ್ರನ್ ಅಶ್ವಿನ್, ಅಮಿತ್ ಮಿಶ್ರಾ ಹಾಗೂ ರವಿಂದ್ರ ಜಡೇಜಾ ಅವರು ಗೇಯ್ಲ್ ಕಟ್ಟಿಹಾಕಲು ಸೂಕ್ತ ತಯಾರಿ ಮಾಡಿಕೊಂಡಿದ್ದಾರೆ. ಗೇಯ್ಲ್ ಉತ್ತಮ ಬ್ಯಾಟಿಂಗ್ ನಡೆಸುವ ತಮ್ಮ ಸಾಮರ್ಥ್ಯದ ಬಗ್ಗೆ ಸಂಪೂರ್ಣ ವಿಶ್ವಾಸ ಹೊಂದಿದ್ದಾರೆ. ಆದರೆ, ಉತ್ತಮ ಫಾರ್ಮ್‌ನಲ್ಲಿರು ಅಶ್ವಿನ್ ಮತ್ತು ಅಮಿತ್ ಮಿಶ್ರಾ ಅವರು ಗೇಯ್ಲ್ ಕಟ್ಟಿಹಾಕುವ ವಿಶ್ವಾಸ ಹೊಂದಿದ್ದಾರೆ. ಅಲ್ಲದೆ, ಗೇಯ್ಲ್ ಅವರಿಗೂ ಈ ಬೌಲರ್‌ಗಳನ್ನು ಎದರಿಸುವುದು ಸುಲಭದ ಮಾತಲ್ಲ.
ಆದರೆ, ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಪ್ರತಿನಿಧಿಸಿರುವ ಭುವನೇಶ್ವರ ಕುಮಾರ್ ಮತ್ತು ಮೊಹ್ಮದ್ ಶಮಿ ಅವರು ಗೇಯ್ಲ್ ಕಟ್ಟಿಹಾಕುವಂತಹ ಲೆಂತ್ ಬೌಲಿಂಗ್ ಪ್ರದರ್ಶಿಸುತ್ತಿಲ್ಲ. ಹೀಗಾಗಿ ಇದು ಗೇಯ್ಲ್ ಅವರಿಗೆ ವರವಾಗಿ ಪರಿಣಮಿಸಲಿದೆ. ಗೇಯ್ಲ್ ಅವರೊಂದಿಗೆ, ಡ್ವೈನ್ ಸ್ಮಿತ್ ಅವರು ಭಾರತಕ್ಕೆ ಕಾಡಬಲ್ಲ ಬ್ಯಾಟ್ಸ್‌ಮನ್ ಎನಿಸಿದ್ದಾರೆ. ಡ್ವೈನ್ ಬ್ರಾವೋ ಹಾಗೂ ಮರ್ಲಾನ್ ಸ್ಯಾಮುಯಲ್ಸ್ ಅವರು ಸಹ ಕೆರಿಬಿಯನ್ ಬ್ಯಾಟಿಂಗ್ ವಿಭಾಗದ ಪ್ರಮುಖ ಹುರಿಯಾಳಾಗಿದ್ದಾರೆ.ಆರಂಭಿಕರು ಫಾರ್ಮ್‌ಗೆ: ಪಾಕಿಸ್ತಾನದ ವಿರುದ್ಧ ಗೆದ್ದ ಪಂದ್ಯದಲ್ಲಿ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಶಿಖರ್ ಧವನ್ ಮತ್ತು ರೋಹಿತ್ ಶರ್ಮಾ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. ಆದರೆ, ಆರಂಭಿಕರು ಇನ್ನೂ ಕೊಂಚ ಕ್ರೀಸ್‌ಗೆ ಕಚ್ಚಿ ನಿಂತುಕೊಂಡು ದೊಡ್ಡ ಮೊತ್ತ ಗಳಿಸುವ ಅಗತ್ಯವಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ ಮತ್ತು ವಿರಾಟ್ ಕೊಹ್ಲಿ ಆಕರ್ಷಕ ಜೊತೆಯಾಟ ಪ್ರದರ್ಶಿಸಿರುವುದು ತಂಡಕ್ಕೆ ಮತ್ತೊಂದು ಖುಷಿ ಸುದ್ದಿಯಾಗಿದೆ. ಪಾಕ್ ವಿರುದ್ಧ ಸಿಡಿದೆದ್ದ ಈ ಇಬ್ಬರು ಆಟಗಾರರು ಅಜೇಯವಾಗಿ ತಂಡವನ್ನು ಗೆಲವಿನ ದಡ ಸೇರಿದ್ದರು. ಹೀಗಾಗಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇದಕ್ಕಿಂತ ಖುಷಿಯ ವಿಚಾರ ಮತ್ತೊಂದು ಬೇಕಾಗಿರಲಿಲ್ಲ.
ಫಾರ್ಮ್‌ಗೆ ಮರಳಿರುವ ಸುರೇಶ್ ರೈನಾ ಪಂದ್ಯಾವಳಿಗೂ ಮುನ್ನ ತಮಗೆ ಬ್ಯಾಟಿಂಗ್ ಸಲಹೆ ನೀಡಿದ ಸೌರವ್ ಗಂಗೂಲಿ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.ಫಾರ್ಮ್ ಕಳೆದುಕೊಂಡಿರುವ ಯುವಿ: ಆಲ್ರೌಂಡ್ ಆಟಗಾರ ಯುವರಾಜ್ ಸಿಂಗ್ ಫಾರ್ಮ್ ಕಳೆದುಕೊಂಡಿರುವುದು ತಂಡಕ್ಕೆ ಕೊಂಚ ಆತಂಕವಾಗಿ ಪರಿಣಮಿಸಿದೆ. ಪಾಕ್ ವಿರುದ್ಧ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ವೈಫಲ್ಯ ಕಂಡಿರುವ ಯುವರಾಜ್ ವಿಂಡೀಸ್ ವಿರುದ್ಧ ಫಾರ್ಮ್‌ಗೆ ಮರಳುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಕಳೆದ ವಿಶ್ವಕಪ್ ಪಂದ್ಯಾವಳಿಗಳಲ್ಲಿ ತಂಡದ ಪರ ಪ್ರಮುಖ ಪಾತ್ರ ವಹಿಸಿರುವ ಯುವಿ. ಈ ಪಂದ್ಯಾವಳಿಯಲ್ಲೂ ಯಾವುದೇ ತಂಡದ ವಿರುದ್ಧ ಸ್ಪೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.
ನಾರಾಯಣ ಭೀತಿ: ವೆಸ್ಟ್ ಇಂಡೀಸ್ ಬೌಲಿಂಗ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸುತ್ತಿರುವ ಸುನಿಲ್ ನಾರಾಯಣ ಭಾರತ ತಂಡಕ್ಕೆ ಕೊಂಚ ಆತಂಕವಾಗಿ ಪರಿಣಮಿಸಿದ್ದಾರೆ. ಭಾರತದ ಬ್ಯಾಟ್ಸ್‌ಮನ್‌ಗಳು ನಾರಾಯಣ ಅವರನ್ನು ಹೇಗೆ ಎದುರಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.
ನಾರಾಯಣ ಅವರೊಂದಿಗೆ ರವಿ ರಾಮ್‌ಪಾಲ್, ಕ್ರಿಷ್ಮಾರ್ ಸ್ಯಾಂಟೋಕಿ,ಬ್ರಾವೋ ಅವರು ಸಹ ವಿಂಡೀಸ್ ಪರ ತಕ್ಕ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.
ತಂಡಗಳು
ಭಾರತ
ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.
ವೆಸ್ಟ್ ಇಂಡೀಸ್
ಡಾರೆನ್ ಸಾಮಿ (ನಾಯಕ), ಸ್ಯಾಮುಯಲ್ ಬದ್ರೀ, ಡ್ವೈನ್ ಬ್ರಾವೊ, ಜಾನ್ಸನ್ ಚಾರ್ಲೆಸ್, ಶೆಲ್ಡಾನ್ ಕಾಟ್ರೆಲ್, ಆ್ಯಂಡ್ರೆ ಫ್ಲೆಚರ್, ಕ್ರಿಸ್ ಗೇಯ್ಲ್, ಸುನಿಲ್ ನಾರಾಯಣ, ದಿನೇಶ್ ರಾಮ್ದಿನ್, ರವಿ ರಾಮ್‌ಪಾಲ್, ಆ್ಯಂಡ್ರೆ ರಸೆಲ್, ಮರ್ಲಾನ್ ಸ್ಯಾಮುಯಲ್ಸ್, ಕ್ರಿಷ್ಮರ್ ಸ್ಯಾಂಟೋಕೀ, ಲೆಂಡ್ಲ್ ಸಿಮನ್ಸ್, ಡ್ವೈನ್ ಸ್ಮಿತ್.
ಇಂದಿನ ಪಂದ್ಯಗಳು
ಆಸ್ಟ್ರೇಲಿಯಾ- ಪಾಕಿಸ್ತಾನ
ಪಂದ್ಯ ಆರಂಭ
ಮಧ್ಯಾಹ್ನ3 ಗಂಟೆಯಿಂದ
ಭಾರತ-ವೆಸ್ಟ್ ಇಂಡೀಸ್
ಪಂದ್ಯ ಆರಂಭ
ಸಂಜೆ 7 ಗಂಟೆಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement