ಸಾಧ್ಯವಾದರೆ ನಮ್ಮನ್ನು ಕಟ್ಟಿಹಾಕಲಿ
ಮಿರ್ಪುರ: ನಮ್ಮ ಬ್ಯಾಟ್ಸ್ಮನ್ಗಳು ಬರೀ ಸಿಕ್ಸರ್ ಬಾರಿಸುತ್ತಾರೆ ಮತ್ತು ಸ್ಪಿನ್ನರ್ಗಳಿಗೆ ಭಯಪಡುತ್ತಾರೆ ಎಂದು ಸುರೇಶ್ ರೈನಾ ಅಭಿಪ್ರಾಯಪಡುವುದಾದರೆ, ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಭಾರತ ನಮ್ಮ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲಿ ಎಂದು ವೆಸ್ಟ್ ಇಂಡೀಸ್ ನಾಯಕ ಡಾರೆನ್ ಸಾಮಿ ಸವಾಲು ನೀಡಿದ್ದಾರೆ. 'ರೈನಾ ಹೇಳಿಕೆಯಂತೆ ನಮಗೆ ಯಾವುದೇ ರೀತಿಯ ಭೀತಿಯಿಲ್ಲ. ನಾವು ಬರೀ ಸಿಕ್ಸರ್ ಬಾರಿಸುವ ಬ್ಯಾಟ್ಸ್ಮನ್ಗಳು ಎಂಬದು ಅವರ ಅನಿಸಿಕೆಯಾದರೆ, ನಮ್ಮ ಬ್ಯಾಟಿಂಗ್ ವಿಭಾಗವನ್ನು ತಡೆಯಲಿ' ಎಂದು ರೈನಾ ಹೇಳಿಕೆ ಬಗ್ಗೆ ಕೇಳಿ ಪ್ರಶ್ನೆಗೆ ಸಾಮಿ ಉತ್ತರಿಸಿದರು. ಪಂದ್ಯದ ಮುನ್ನ ದಿನ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಾಮಿ ಅವರು ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ರೀತಿ ಹಾಸ್ಯ ಮತ್ತು ತುಂಬಾ ಗಂಭೀರತೆಯಿಂದ ಕೂಡಿತ್ತು. 'ನಾನು ಜೀಸಸ್ ಅಲ್ಲ. ಹಾಗಾಗಿ ಕ್ರಿಸ್ ಗೇಯ್ಲ್ ಮನಸಿನಲ್ಲಿ ಏನಿದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ' ಎಂದು ಗೇಯ್ಲ್ ಮನಸಲ್ಲಿ ಏನಿದೆ ಎಂದು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. 'ಆದರೆ, ಗೇಯ್ಲ್ ಸ್ಫೋಟಕ ಬ್ಯಾಟಿಂಗ್ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ. ವೆಸ್ಟ್ ಇಂಡೀಸ್ ಪರ ಆಡುವಾಗ ಮತ್ತಷ್ಟು ಉತ್ಸುಕರಾಗಿ ಬ್ಯಾಟ್ ಬೀಸುತ್ತಾರೆ ಎಂದರು.