ಹರಿಣಗಳ ನುಂಗಿದ ಸಿಂಹಳೀಯರು
ಆರಂಭಿಕ ಕುಶಾಲ್ ಪೆರೇರಾರ ಬಿರುಸಿನ ಅರ್ಧಶತಕ ಹಾಗೂ ಬೌಲರ್‌ಗಳ ಕರಾರುವಾಕ್ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ವಿಶ್ವಕಪ್ ಟಿ-20 ಕ್ರಿಕೆಟ್ ...
ಚಿತ್ತಗಾಂಗ್: ಆರಂಭಿಕ ಕುಶಾಲ್ ಪೆರೇರಾರ ಬಿರುಸಿನ ಅರ್ಧಶತಕ ಹಾಗೂ ಬೌಲರ್‌ಗಳ ಕರಾರುವಾಕ್ ದಾಳಿಯ ನೆರವಿನಿಂದ ಶ್ರೀಲಂಕಾ ತಂಡ ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಸೂಪರ್-10ರ ತನ್ನ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 5 ರನ್‌ಗಳಿಂದ ರೋಚಕ ಗೆಲವು ದಾಖಲಿಸಿದೆ.
ಶನಿವಾರ ಇಲ್ಲಿ ನಡೆದ ಪಂದ್ಯದಲ್ಲಿ ಗೆಲ್ಲಲು ಶ್ರೀಲಂಕಾ ನೀಡಿದ್ದ 166 ರನ್‌ಗಳ ಗುರಿ ಬೆಂಬತ್ತಿದ ದಕ್ಷಿಣ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 160 ರನ್‌ಗಳಿಸಿ ಗೆಲವಿನ ಹಾದಿಯಲ್ಲಿ ಮುಗ್ಗರಿಸಿದಂತಾಯಿತು.
ದಕ್ಷಿಣ ಆಫ್ರಿಕಾದ ಬ್ಯಾಟಿಂಗ್‌ನಲ್ಲಿ ಮಧ್ಯಮ ಕ್ರಮಾಂಕದ ಅನುಭವಿ ದಾಂಡಿಗ ಜೀನ್-ಪಾಲ್ ಡುಮಿನಿ 30 ಎಸೆತಗಳಲ್ಲಿ 3 ಬೌಂಡರಿ, 2 ಸಿಕ್ಸರ್‌ಗಳಿದ್ದ 39 ರನ್‌ಗಳಿಸಿ ಸ್ವಲ್ಪ ಪ್ರತಿರೋಧ ತೋರಿದ್ದು ಬಿಟ್ಟರೆ ಇತರೆ ದಾಂಡಿಗರು ಗರ್ಜಿಸುವಲ್ಲಿ ವಿಫಲರಾದರು.
ಲಂಕಾದ ಬೌಲರ್‌ಗಳು ಶಿಸ್ತುಬದ್ದ ದಾಳಿ ಸಂಘಟಿಸಿ ದಕ್ಷಿಣ ಆಫ್ರಿಕಾದ ಪ್ರಮುಖ ಬ್ಯಾಟ್ಸ್‌ಮನ್‌ಗಳಿಗೆ ಗುಡುಗಲು ಅವಕಾಶ ಮಾಡಿಕೊಡಲಿಲ್ಲ. ಪರಿಣಾಮವಾಗಿ ಅಗ್ರಕ್ರಮಾಂಕದ ದಾಂಡಿಗರಿಗೆ ವೈಯಕ್ತಿಕವಾಗಿ ಬೃಹತ್ ಮೊತ್ತ ಗಳಿಸಲು ಸಾಧ್ಯವಾಗಲಿಲ್ಲ.
ಶ್ರೀಲಂಕಾ ಪರ ಸಚಿತ್ರ ಸೇನಾನಾಯಕೆ 2 ಹಾಗೂ ಕುಲಸೇಕರ, ಮ್ಯಾಥ್ಯೂಸ್, ಮಾಲಿಂಗ ಮತ್ತು ಮೆಂಡಿಸ್ ತಲಾ 1 ವಿಕೆಟ್ ಕಬಳಿಸಿದರು.
ಶ್ರಿಲಂಕಾ ಸ್ಪರ್ಧಾತ್ಮಕ ಮೊತ್ತ: ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 20 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ 165 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಸಂಪಾದಿಸಿತು.
ಆರಂಭಿಕ ಕುಶಾಲ್ ಪೆರೇರಾ ಬಿರುಸಿನ ಅರ್ಧಶತಕ (61ರನ್, 40 ಎಸೆತ, 6 ಬೌಂಡರಿ, 3 ಸಿಕ್ಸರ್) ಹಾಗೂ ಮಧ್ಯಮ ಕ್ರಮಾಂಕದ ದಾಂಡಿಗ ಆ್ಯಂಜೆಲೊ ಮ್ಯಾಥ್ಯೂಸ್ ಉಪಯುಕ್ತ 43 ರನ್ (32 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸುವ ಮೂಲಕ ತಂಡ ಪೈಪೋಟಿ ಮೊತ್ತ ಕಲೆಹಾಕಲು ನೆರವಾದರು.
ಇನಿಂಗ್ಸ್‌ನ ಮೊದಲ ಓವರಿನಲ್ಲಿಯೇ ಶ್ರೀಲಂಕಾ 17 ರನ್ ಗಳಿಸಿ ಭರ್ಜರಿ ಆರಂಭ ಪಡೆದಂತಾಗಿತ್ತು. ಈ ಓವರಿನಲ್ಲಿ ಕುಶಾಲ್ ಪೆರೇರಾ ಎರಡು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ ಅಪಾಯಕಾರಿಯಾಗುವ ಸೂಚನೆ ನೀಡಿದರು.
ಆದರೆ, ಇದೇ ಓವರಿನಲ್ಲಿ ಮತ್ತೊಬ್ಬ ಆರಂಭಿಕ ತಿಲಕರತ್ನೆ ದಿಲ್ಶಾನ್ ತಾವು ಎದುರಿಸಿದ ಮೊದಲ ಎಸೆತದಲ್ಲಿಯೇ ವಿಕೆಟ್ ಒಪ್ಪಿಸಿ ಶೂನ್ಯಕ್ಕೆ ನಿರ್ಗಮಿಸಿದರು. ಇವರ ಬೆನ್ನಲ್ಲೇ ಮೂರನೇ ಕ್ರಮಾಂಕದ ಆಟಗಾರ ಮಹೇಲ ಜಯವರ್ದನೆ ಕೇವಲ 9 ರನ್‌ಗಳಿಸಿ ಔಟಾದರೆ, ಕುಮಾರ ಸಂಗಕ್ಕಾರ ಕೂಡ ಹೆಚ್ಚು ಹೊತ್ತು ನಿಲ್ಲದೇ 14 ರನ್‌ಗಳಿಸಲಷ್ಟೇ ಶಕ್ತರಾಗಿ ಕ್ರೀಸ್ ತೊರೆದರು. ಹೀಗೆ ಒಂದರ ಮೇಲೊಂದರಂತೆ ಮೂರು ಆಘಾತಗಳು ಉಂಟಾದ ಪರಿಣಾಮ ಲಂಕಾದ ರನ್ ವೇಗಕ್ಕೆ ಕೊಂಚ ಕಡಿವಾಣ ಬಿದ್ದಿತು. ಆದರೂ ಸಹ ಪೆರೇರಾ ಮತ್ತು ಮ್ಯಾಥ್ಯೂಸ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವುದರೊಂದಿಗೆ ತಂಡವನ್ನು ಅಲ್ಪ ಮೊತಕ್ಕೆ ಕುಸಿಯುವ ಭೀತಿಯಿಂದ ಪಾರು ಮಾಡಿದರು.
ದಕ್ಷಿಣ ಆಫ್ರಿಕಾ ಬೌಲರ್‌ಗಳ ಪೈಕಿ ಗಮನ ಸೆಳೆದ ಇಮ್ರಾನ್ ತಾಹಿರ್ 3 ವಿಕೆಟ್ ಉರುಳಿಸಿದರೆ, ಡೇಲ್ ಸ್ಟೇಯ್ನ್ ಮತ್ತು ಮೊರ್ನ್ ಮಾರ್ಕೆಲ್ ತಲಾ 2 ವಿಕೆಟ್ ಕಬಳಿಸಿದರು.
ಸ್ಕೋರ್ ವಿವರ
ಶ್ರೀಲಂಕಾ 20 ಓವರುಗಳಲ್ಲಿ 7 ವಿಕೆಟ್‌ಗೆ 165
ಕುಶಾಲ್ ಪೆರೇರಾ ಸಿ ಡಿವಿಲಿಯರ್ಸ್ ಬಿ ತಾಹಿರ್ 61
ತಿಲಕರತ್ನೆ ದಿಲ್ಶಾನ್ ಬಿ ಸ್ಟೇಯ್ನ್ 0
ಮಹೇಲ ಜಯವರ್ದನೆ ಸಿ ಸ್ಟೇಯ್ನ್ ಬಿ ಮೊರ್ನ್ ಮಾರ್ಕೆಲ್ 9
ಕುಮಾರ ಸಂಗಕ್ಕಾರ ಸಿ ಸೊಸೊಬೆ ಬಿ ತಾಹಿರ್ 14
ಆ್ಯಂಜೆಲೊ ಮ್ಯಾಥ್ಯೂಸ್ ಬಿ ಸ್ಟೇಯ್ನ್ 43
ದಿನೇಶ್ ಚಂಡಿಮಲ್ ಸ್ಟಂಪ್ ಕಾಕ್ ಬಿ ತಾಹಿರ್ 12
ತಿಸಾರ ಪೆರೇರಾ ಬಿ ಮೊರ್ನ್ ಮಾರ್ಕೆಲ್ 8
ನುವಾನ್ ಕುಲಸೇಕರ ಅಜೇಯ 7
ಸಚಿತ್ರ ಸೇನಾನಾಯಕೆ ಅಜೇಯ 1.
ಇತರೆ: (ಲೆಗ್‌ಬೈ-3, ವೈ-7) 10.
ವಿಕೆಟ್ ಪತನ
1-17, 2-42, 3-83, 4-106, 5-137, 6-152, 7-160
ಬೌಲಿಂಗ್ ವಿವರ
ಡೇಲ್ ಸ್ಟೇಯ್ನ್ 4-0-37-2, ಲೊನ್ವಾಬೊ ಸೊಸೊಬೆ 4-0-31-0, ಮೊರ್ನ್ ಮೊರ್ಕೆಲ್ 4-0-31-2, ಜೀನ್-ಪಾಲ್ ಡುಮಿನಿ 2-0-13-0, ಅಲ್ಬಿ ಮಾರ್ಕೆಲ್ 2-0-24-0, ಇಮ್ರಾನ್ ತಾಹಿರ್ 4-0-26-3.
ಪಂದ್ಯಶ್ರೇಷ್ಠ- ಕುಶಾಲ್ ಪೆರೇರಾ
ದಕ್ಷಿಣ ಆಫ್ರಿಕಾ 20 ಓವರುಗಳಲ್ಲಿ 8 ವಿಕೆಟ್‌ಗೆ 160
ಕಿಂಟಾನ್ ಡಿ ಕಾಕ್ ಬಿ ಮಾಲಿಂಗ 25
ಹಶೀಂ ಆಮ್ಲಾ ಸಿ ದಿಲ್ಶಾನ್ ಬಿ ಸೇನಾನಾಯಕೆ 23
ಜೀನ್-ಪಾಲ್ ಡುಮಿನಿ ಸಿ ದಿಲ್ಶಾನ್ ಬಿ ಸೇನಾನಾಯಕೆ 39
ಎಬಿ ಡಿವಿಲಿಯರ್ಸ್ ಸಿ ಸಂಗಕ್ಕಾರ ಬಿ ಮ್ಯಾಥ್ಯೂಸ್ 24
ಡೇವಿಡ್ ಮಿಲ್ಲರ್ ರನೌಟ್ 19
ಅಲ್ಬಿ ಮಾರ್ಕೆಲ್ ಸಿ ಚಂಡಿಮಲ್ ಬಿ ಮೆಂಡಿಸ್ 12
ಫರ್ಹಾನ್ ಬೆಹರ್ಡಿಯನ್ ಸಿ ಜಯವರ್ದನೆ ಬಿ ಕುಲಸೇಕರ 5
ಡೇಲ್ ಸ್ಟೇಯ್ನ್ ರನೌಟ್ 0
ಮೊರ್ನ್ ಮಾರ್ಕೆಲ್ ಅಜೇಯ 0.
ಇತರೆ: (ಲೆಗ್‌ಬೈ-3, ವೈ-2) 5.
ವಿಕೆಟ್ ಪತನ
1-32, 2-82, 3-110, 4-119, 5-133, 6-148, 7-151, 8-152.
ಬೌಲಿಂಗ್ ವಿವರ
ನುವಾನ್ ಕುಲಸೇಕರ 3-0-23-1, ಆ್ಯಂಜೆಲೊ ಮ್ಯಾಥ್ಯೂಸ್ 3-0-21-1, ಸಚಿತ್ರ ಸೇನಾನಾಯಕೆ 4-0-22-2, ಲಸಿತ್ ಮಾಲಿಂಗ 4-0-29-1, ತಿಸಾರ ಪೆರೇರಾ 2-0-18-0, ಅಜಂತಾ ಮೆಂಡಿಸ್ 4-0-14-1.