ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಆಫ್ರಿಕನ್ ಸಫಾರಿಗೆ ಕಿವೀಸ್ ಹೊಂಚು

Mainashree
Updated On : 23 Mar 2014, 9:50 am

ಚಿತ್ತಗಾಂಗ್: ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳಲ್ಲೊಂದಾದರೂ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸೋಲನುಭವಿಸಿರುವ ದಕ್ಷಿಣ ಆಫ್ರಿಕಾ ಮತ್ತು ಮಳೆ ಅಡ್ಡಿಯಾದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಜಯ ಕಂಡು ವಿಶ್ವಾಸದಲ್ಲಿರುವ ನ್ಯೂಜಿಲೆಂಡ್ ತಂಡಗಳು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಪರಸ್ಪರ ಹೋರಾಟ ನಡೆಸಲಿವೆ.
ಲಂಕಾ ವಿರುದ್ಧ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ತಕ್ಕ ಬ್ಯಾಟಿಂಗ್ ನಡೆಸಿದ್ದರಾದರೂ, ದೊಡ್ಡ ಮೊತ್ತ ಪೇರಿಸುವಲ್ಲಿ ವೈಫಲ್ಯ ಕಂಡಿದ್ದರು. ಅಲ್ಲದೆ ಕೆಳಕ್ರಮಾಂಕದಲ್ಲಿ ಯಾರೂ ಎರಡಂಕಿ ತಲುಪದಿದ್ದದ್ದು, ಸೋಲಿಗೆ ಪ್ರಮುಖ ಕಾರಣವಾಗಿತ್ತು.
ಟಿ20 ಕ್ರಿಕೆಟ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸುವ ನಾಯಕ ಡುಪ್ಲೆಸಿಸ್ ಗಾಯಗೊಂಡು ತಂಡದಿಂದ ಹೊರಗುಳಿದಿರುವುದು ಬ್ಯಾಟಿಂಗ್ ವಿಭಾಗಕ್ಕೆ ಕೊಂಚ ಆತಂಕವಾಗಿ ಪರಿಣಮಿಸಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮೂರು ವಿಕೆಟ್ ಪಡೆದಿದ್ದ ಇಮ್ರಾನ್ ತಾಹೀರ್ ತಂಡಕ್ಕೆ ಆಸರೆಯಾಗಿದ್ದರು. ಆದರೆ, ಪ್ರಮುಖ ಬೌಲರ್‌ಗಳಾದ ಡೇಲ್ ಸ್ಟೇಯ್ನ್ ಮತ್ತು ಮಾರ್ನ್ ಮಾರ್ಕೆಲ್ ಅವರು ತಲಾ ಎರಡು ವಿಕೆಟ್ ಪಡೆದರೂ ಹೆಚ್ಚಿನ ರನ್ ಸೋರಿಕೆ ಮಾಡುವ ಮೂಲಕ ದುಬಾರಿ ಎನಿಸಿದ್ದರು.
ಇನ್ನು ಇಂಗ್ಲೆಂಡ್ ವಿರುದ್ಧ ಸೆಣಸಲಿರುವ ಕಿವೀಸ್ ತಂಡ ತನ್ನ ಬ್ಯಾಟಿಂಗ್ ಶಕ್ತಿ ಪರೀಕ್ಷಿಸಿಕೊಳ್ಳುವ ಮುನ್ನವೇ ವರುಣ ಅಡ್ಡಿಯಾದ ಹಿನ್ನೆಲೆಯಲ್ಲಿ, ಡಕ್ವರ್ತ್ ಲೂಯಿಸ್ ನಿಯಮದನ್ವಯ ಜಯ ಕಂಡುಕೊಂಡಿರುವ ನ್ಯೂಜಿಲೆಂಡ್ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಕಾಣುವ ಕಾತರದಲ್ಲಿದೆ.
ಹಾಲೆಂಡ್‌ಗೆ ಸಿಂಹಳೀಯರ ಸವಾಲು: ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸುವ ಮೂಲಕ ವಿಶ್ವಾಸದಲ್ಲಿರುವ ಬಲಿಷ್ಠ ಶ್ರೀಲಂಕಾ ತಂಡ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋಮವಾರ ನಡೆಯಲಿರುವ 2ನೇ ಪಂದ್ಯದಲ್ಲಿ ದುರ್ಬಲ ಹಾಲೆಂಡ್ ವಿರುದ್ಧ ಸೆಣಸಲಿದೆ.
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗಗಳಲ್ಲೂ ಬಲಿಷ್ಠವಾಗಿರುವ ಶ್ರೀಲಂಕಾ ತಂಡಕ್ಕೆ ಹಾಲೆಂಡ್ ಸುಲಭ ತುತ್ತಾಗುವ ಸಾಧ್ಯತೆಗಳಿವೆ. ಅಲ್ಲದೆ, ಹಾಲೆಂಡ್ ತಂಡ ಪಂದ್ಯಾವಳಿಯಲ್ಲಿ ತನ್ನ ಮೊದಲ ಪಂದ್ಯದಲ್ಲಿ ಅಂಗಣಕ್ಕಿಳಿಯುತ್ತಿದೆ. ಹೀಗಾಗಿ ಅದು ಶ್ರೀಲಂಕಾ ವಿರುದ್ಧ ತಕ್ಕಮಟ್ಟಿಗಾದರೂ ಹೋರಾಟ ನಡೆಸುವ ಮನಸ್ಥಿತಿಯಲ್ಲೇ ಅಂಗಣಕ್ಕಿಳಿಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement