ಕಾಂಗರೂ ಮೇಲೆ ಉಮರ್ ಜಾಲಿ ರೈಡ್
ಮೀರ್‌ಪುರ್: ಮಧ್ಯಮ ಕ್ರಮಾಂಕದಲ್ಲಿ ಸಿಡಿದ ಉಮರ್ ಅಕ್ಮಲ್‌ರ ಸ್ಫೋಟಕ ಬ್ಯಾಟಿಂಗ್ ಹಾಗೂ ದಾಳಿಕಾರರ ಚುರುಕಿನ ಪ್ರದರ್ಶನದ ನೆರವಿನಿಂದ ಪಾಕಿಸ್ತಾನ ಆಟಗಾರರು ವಿಶ್ವಕಪ್ ಟಿ-20 ಕ್ರಿಕೆಟ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸವಾಲನ್ನು ಸಮರ್ಥವಾಗಿ ಮೆಟ್ಟಿ ನಿಂತಿದ್ದಾರೆ.
ಶೇರ್-ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಎರಡನೇ ಗುಂಪಿನ ಪಂದ್ಯದಲ್ಲಿ ಪಾಕಿಸ್ತಾನ ತಂಡ 16 ರನ್‌ಗಳಿಂದ ಆಸ್ಟ್ರೇಲಿಯಾ ವಿರುದ್ಧ ಜಯಭೇರಿ ಬಾರಿಸಿತು.
ಗೆಲ್ಲಲು ಪಾಕಿಸ್ತಾನ ಒಡ್ಡಿದ್ದ 192 ರನ್‌ಗಳ ಕಠಿಣ ಲಕ್ಷ್ಯದತ್ತ ಸಾಗಬೇಕಿದ್ದ ಆಸ್ಟ್ರೇಲಿಯಾ 175 ರನ್‌ಗಳಿಗೆ ಪತನಗೊಂಡಿತು.
ಏರಾನ್ ಫಿಂಚ್ (65ರನ್, 54 ಎಸೆತ, 7 ಬೌಂಡರಿ, 2 ಸಿಕ್ಸರ್) ಮತ್ತು ಮಧ್ಯಮ ಕ್ರಮಾಂಕದ ಗ್ಲೆನ್ ಮ್ಯಾಕ್ಸ್‌ವೆಲ್ (74ರನ್, 33 ಎಸೆತ, 7 ಬೌಂಡರಿ, 6 ಸಿಕ್ಸರ್) ಗರ್ಜಿಸುವುದರೊಂದಿಗೆ ಆಸ್ಟ್ರೇಲಿಯಾ ಪಾಳಯದಲ್ಲಿ ಒಂದು ಹಂತದಲ್ಲಿ ಗೆಲವಿನ ಆಸೆ ಚಿಗುರಿಸಿದ್ದರು. ಆದರೆ, ಈ ಇಬ್ಬರ ಪತನದ ನಂತರ ಉಳಿದ ದಾಂಡಿಗರು ಸ್ಫೋಟಿಸುವಲ್ಲಿ ವಿಫಲರಾಗಿದ್ದರಿಂದ ಅಂತಿಮವಾಗಿ ಆಸ್ಟ್ರೇಲಿಯಾಕ್ಕೆ ಸೋಲೇಗತಿಯಾಯಿತು.
ಪಾಕಿಸ್ತಾನ ಬೌಲರ್‌ಗಳು ನಿಖರ ದಾಳಿ ನಡೆಸಿ ಕಾಂಗರೂ ಪಡೆಯನ್ನು ಹಿಡಿದಿಡುವಲ್ಲಿ ಸಫಲರಾದರು. ಈ ಗೆಲವಿನೊಂದಿಗೆ ಪಾಕಿಸ್ತಾನ ಅಂಕದ ಖಾತೆ ತೆರೆಯಿತು. ತನ್ನ ಮೊದಲ ಪಂದ್ಯದಲ್ಲಿ ಅದು ಭಾರತದ ಎದುರು ಆಘಾತ ಅನುಭವಿಸಿತ್ತು. ಉಮರ್ ಶತಕ ವಂಚಿತ, ಪಾಕಿಸ್ತಾನ ಬೃಹತ್ ಮೊತ್ತ ಟಾಸ್ ಗೆದ್ದ ಆಸ್ಟ್ರೇಲಿಯಾ, ಪಾಕಿಸ್ತಾನವನ್ನು ಬ್ಯಾಟಿಂಗ್‌ಗೆ ಆಮಂತ್ರಿಸಿತು. ಈ ಅವಕಾಶವನ್ನು ಸದ್ಭಳಕೆ ಮಾಡಿಕೊಂಡ ಪಾಕಿಸ್ತಾನ 20 ಓವರುಗಳಲ್ಲಿ 5 ವಿಕೆಟ್ ನಷ್ಟಕ್ಕೆ 191 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಉಮರ್ ಅಕ್ಮಲ್ ಕೇವಲ 54 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಒಳಗೊಂಡ ಅಮೋಘ 94 ರನ್ ಸಿಡಿಸಿದರು. ಆದರೆ, ಅವರು ಕೇವಲ 6 ರನ್‌ಗಳಿಂದ ಶತಕ ವಂಚಿತವಾಗಿ ಭಾರಿ ನಿರಾಸೆಯಿಂದ ಪೆವಿಲಿಯನ್‌ಗೆ ಮರಳಿದರು.
ಉಳಿದಂತೆ, ಆರಂಭಿಕ ಕಮ್ರನ್ ಅಕ್ಮಲ್ 31 ಎಸೆತಗಳಲ್ಲಿ 4 ಬೌಂಡರಿಗಳಿದ್ದ 31 ರನ್‌ಗಳಿಸಿದರು. ಕೆಳಕ್ರಮಾಂಕದಲ್ಲಿ ಶಾಹಿದ್ ಅಫ್ರಿದಿ 11 ಎಸೆತಗಳಲ್ಲಿ 2 ಬೌಂಡರಿ, 1 ಸಿಕ್ಸರ್ ಸೇರಿದಂತೆ ಅಜೇಯ 20 ರನ್‌ಗಳಿಸಿದರು.
ಪಾಕಿಸ್ತಾನ ಕೇವಲ 25 ರನ್‌ಗಳ ಮೊತ್ತದಲ್ಲೇ ಅಹ್ಮದ್ ಶಹಜಾದ್ (5) ಮತ್ತು ನಾಯಕ ಮೊಹಮ್ಮದ್ ಹಫೀಜ್ (13) ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅಕ್ಮಲ್ ಸಹೋದರರಾದ ಕಮ್ರನ್ ಮತ್ತು ಉಮರ್ ಜೋಡಿ ಆಸ್ಟ್ರೇಲಿಯಾ ದಾಳಿಕಾರರಿಗೆ ತೀಕ್ಷ್ಣ ಉತ್ತರ ನೀಡಿ ಮೂರನೇ ವಿಕೆಟ್‌ಗೆ ಕೇವಲ 51 ಎಸೆತಗಳಿಂದ 96 ರನ್ ಪೇರಿಸುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.
ಏರಾನ್ ಫಿಂಚ್‌ರ ಓವರ್‌ವೊಂದರಲ್ಲಿ ಉಮರ್ ಎರಡು ಸಿಕ್ಸರ್ ಮತ್ತು 1 ಬೌಂಡರಿ ಸಿಡಿಸಿದ್ದು ಗಮನಾರ್ಹವಾಗಿತ್ತು.
ಮತ್ತೊಂದೆಡೆ ಆರಂಭದಲ್ಲಿ ಪಾಕಿಸ್ತಾನದ ಮೇಲೆ ಪ್ರಭುತ್ವ ಸ್ಥಾಪಿಸಿದ್ದ ಆಸ್ಟ್ರೇಲಿಯಾದ ಬೌಲರ್‌ಗಳು ನಂತರದಲ್ಲಿ ಉಮರ್ ಅವರಿಂದ ಕಠಿಣ ಶಿಕ್ಷೆಗೊಳಗಾದರು. ಅಲ್ಲದೆ, ಆಸ್ಟ್ರೇಲಿಯಾದ ಕ್ಷೇತ್ರರಕ್ಷಣೆ ಕೂಡ ಕಳಪೆಯಾಗಿತ್ತು. ಉಮರ್, ಕಮ್ರನ್ ಮತ್ತು ಅಫ್ರಿದಿಗೆ ತಲಾ ಒಂದು ಜೀವದಾನ ನೀಡಿ ಕೈಸುಟ್ಟುಕೊಂಡಿತು.
ಸ್ಕೋರ್ ವಿವರ
ಪಾಕಿಸ್ತಾನ 20 ಓವರುಗಳಲ್ಲಿ 5 ವಿಕೆಟ್‌ಗೆ 191
ಶೆಹಜಾದ್ ಸಿ ಅಂಡ್ ಬಿ ಬೋಲಿಂಗರ್ 5, ಕಮ್ರನ್ ಸಿ ವಾರ್ನರ್ ಬಿ ಕೌಲ್ಟರ್ 31, ಹಫೀಜ್ ಬಿ ವ್ಯಾಟ್ಸನ್ 13, ಉಮರ್ ಸಿ ಮ್ಯಾಕ್ಸ್‌ವೆಲ್ ಬಿ ಸ್ಟಾರ್ಕ್ 94, ಮಕ್ಸೂದ್ ಬಿ ಕೌಲ್ಟರ್ 5, ಅಫ್ರಿದಿ ಅಜೇಯ 20, ಶೋಯೆಬ್ ಅಜೇಯ 6. ಇತರೆ: (ಬೈ-4, ಲೆಗ್‌ಬೈ-3, ವೈ-9, ನೋಬಾಲ್-1) 17.
ವಿಕೆಟ್ ಪತನ: 1-7, 2-25, 3-121, 4-147, 5-180.
ಬೌಲಿಂಗ್ ವಿವರ: ಸ್ಟಾರ್ಕ್ 4-0-35-1, ಬೋಲಿಂಗರ್ 4-0-28-1, ವ್ಯಾಟ್ಸನ್ 4-0-38-1, ನಾಥನ್ ಕೌಲ್ಟರ್-ನೀಲ್ 4-0-36-2, ಬ್ರಾಡ್ ಹಾಗ್ 3-0-29-0, ಏರಾನ್ ಫಿಂಚ್ 1-0-18-0.
ಆಸ್ಟ್ರೇಲಿಯಾ 20 ಓವರುಗಳಲ್ಲಿ 175
ವಾರ್ನರ್ ಬಿ ಜುಲ್ಫೀಕರ್ 4, ಫಿಂಚ್ ಬಿ ಅಜ್ಮಲ್ 65, ವ್ಯಾಟ್ಸನ್ ಸಿ ಕಮ್ರನ್ ಬಿ ಜುಲ್ಫೀಕರ್ 4, ಮ್ಯಾಕ್ಸ್‌ವೆಲ್ ಸಿ ಅಹ್ಮದ್ ಬಿ ಅಫ್ರಿದಿ 74, ಬೇಯ್ಲಿ ಬಿ ಅಫ್ರಿದಿ 4, ಬ್ರಾಡ್ ಹಾಡ್ಜ್ ಸಿ ಅಜ್ಮಲ್ ಬಿ ಗುಲ್ 2, ಬ್ರಾಡ್ ಹಡಿನ್ ಸಿ ಶೋಯೆಬ್ ಬಿ ಭಟ್ಟಿ 8, ನಾಥನ್ ಕೌಲ್ಟರ್-ನೀಲ್ ಬಿ ಗುಲ್ 0, ಸ್ಟಾರ್ಕ್ ರನೌಟ್ 3, ಬ್ರಾಡ್ ಹಾಗ್ ಬಿ ಭಟ್ಟಿ 3, ಡಗ್ ಬೋಲಿಂಗರ್ ಅಜೇಯ 0. ಇತರೆ: (ಲೆಗ್‌ಬೈ-3, ನೋಬಾಲ್-5) 8.
ವಿಕೆಟ್ ಪತನ: 1-4, 2-8, 3-126, 4-146, 5-155, 6-162, 7-163, 8-172, 9-173, 10-175.
ಬೌಲಿಂಗ್ ವಿವರ: ಜುಲ್ಫೀಕರ್ ಬಬರ್ 4-0-26-2, ಹಫೀಜ್ 2-0-18-0, ಗುಲ್ 4-0-29-2, ಅಜ್ಮಲ್ 4-0-33-1, ಅಫ್ರಿದಿ 4-0-30-2, ಬಿಲ್ವಾಲ್ 2-0-36-2. ಪಂದ್ಯಶ್ರೇಷ್ಠ- ಉಮರ್ ಅಕ್ಮಲ್