ತವರಿನಲ್ಲೇ 100ನೇ ಟೆಸ್ಟ್ ಪಂದ್ಯ ಆಡಲು ಕ್ರಿಸ್ ಗೇಯ್ಲ್ ಕಾತರ
ಪೋರ್ಟ್ ಆಫ್ ಸ್ಪೇನ್: ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟ್ಸ್‌ಮನ್ ಕ್ರಿಸ್ ಗೇಯ್ಲ್ ಜೀವನದ 100ನೇ ಟೆಸ್ಟ್ ಪಂದ್ಯವಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಜೂನ್ ತಿಂಗಳಿನಲ್ಲಿ ತಮ್ಮ ನೆಲದಲ್ಲಿಯೇ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಗೇಯ್ಲ್ ಈ ಮೈಲುಗಲ್ಲು ಸ್ಥಾಪಿಸುವ ಉತ್ಸಾಹದಲ್ಲಿದ್ದಾರೆ. ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ, ಭಾನುವಾರ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿ ಮತ್ತು ಎರಡು ಪಂದ್ಯಗಳ ಟಿ-20 ಸರಣಿಯಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಜಮೈಕಾದಲ್ಲಿ ಜೂ. 8ರಿಂದ 12ರ ವರೆಗೆ ನಡೆಯಲಿರುವ ಮೊದಲ ಟೆಸ್ಟ್ ಗೇಯ್ಲ್ ಪಾಲಿಗೆ 100ನೇ ಪಂದ್ಯವಾಗಲಿದೆ. ಉಳಿದಂತೆ, ಜೂ. 16ರಿಂದ ಟ್ರಿನಿಡಾಡ್ ಹಾಗೂ ಜೂ. 26ರಿಂದ ಗಯಾನದಲ್ಲಿ ಕ್ರಮವಾಗಿ ಎರಡು-ಮೂರನೇ ಟೆಸ್ಟ್ ಪಂದ್ಯಗಳು ಜರುಗಲಿವೆ. ಎರಡು ಟಿ-20 ಪಂದ್ಯಗಳು ಡಾಮಿನಿಕಾದಲ್ಲಿ ನಡೆಯಲಿವೆ. ಪ್ರಸ್ತುತ ಗೇಯ್ಲ್ 99 ಟೆಸ್ಟ್ ಪಂದ್ಯಗಳನ್ನಾಡಿದ್ದು, 42.01ರ ಸರಾಸರಿಯಲ್ಲಿ 15 ಶತಕ ಮತ್ತು 34 ಅರ್ಧಶತಕ ಒಳಗೊಂಡಂತೆ 6,933 ರನ್ ಸಂಪಾದಿಸಿದ್ದಾರೆ. ಈ ಸರಣಿ ನಂತರ ವೆಸ್ಟ್ ಇಂಡೀಸ್ ತಂಡ ಬಾಂಗ್ಲಾದೇಶ ವಿರುದ್ಧ ತವರಿನಲ್ಲಿಯೇ ಎರಡು ಟೆಸ್ಟ್, ಮೂರು ಏಕದಿನ ಹಾಗೂ ಒಂದು ಟಿ-20 ಪಂದ್ಯಗಳನ್ನಾಡಲಿದೆ. ಮೊದಲಿಗೆ ಏಕದಿನ ಸರಣಿ ಆರಂಭವಾಗಲಿದ್ದು, ಆಗಸ್ಟ್ 20ರಂದು ಗ್ರೆನಡಾ, ಆ. 22ರಂದು ಗ್ರೆನಡಾ ಮತ್ತು ಆ. 25ರಂದು ಸೇಂಟ್ ಕಿಟ್ಸ್‌ನಲ್ಲಿ ಕ್ರಮವಾಗಿ 3 ಪಂದ್ಯಗಳು ಜರುಗಲಿವೆ. ಬಳಿಕ ಆ. 27ರಂದು ಸೇಂಟ್ ಕಿಟ್ಸ್‌ನಲ್ಲಿಯೇ ಏಕೈಕ ಟಿ-20 ಪಂದ್ಯ ಹಾಗೂ ಸೆಪ್ಟೆಂಬರ್ 5ರಿಂದ ಸೇಂಟ್ ವಿನ್ಸೆಂಟ್‌ನಲ್ಲಿ ಮೊದಲ ಟೆಸ್ಟ್ ಮತ್ತು ಸೆ. 13ರಿಂದ ಸೇಂಟ್ ಲೂಸಿಯಾದಲ್ಲಿ ಎರಡನೇ ಟೆಸ್ಟ್ ನಡೆಯಲಿದೆ.