ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಭೂಪತಿಗೆ ಸೋಲು, ಬೋಪಣ್ಣ ಮುನ್ನಡೆ

Mainashree
Updated On : 23 Mar 2014, 10:28 am

ಮಿಯಾಮಿ (ಅಮೆರಿಕ): ಭಾರತದ ಮಹೇಶ್ ಭೂಪತಿ ಮತ್ತು ದಕ್ಷಿಣ ಆಫ್ರಿಕಾದ ಕೆವಿನ್ ಆ್ಯಂಡರ್ಸನ್ ಅಮೆರಿಕದಲ್ಲಿ ನಡೆಯುತ್ತಿರುವ ಸೋನಿ ಓಪನ್ ಟೆನಿಸ್ ಟೂರ್ನಿಯ ಪುರಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ್ದಾರೆ.
ಆದರೆ ಭಾರತದ ಮತ್ತೊಬ್ಬ ಆಟಗಾರ ರೋಹನ್ ಬೋಪಣ್ಣ ಮೂರನೇ ಸುತ್ತು ತಲುಪುವಲ್ಲಿ ಯಶಸ್ವಿಯಾಗಿದ್ದಾರೆ. ಪರಿಣಾಮವಾಗಿ ಸದ್ಯ ಡಬಲ್ಸ್ ಕಣದಲ್ಲಿ ಉಳಿದಿರುವ ಏಕೈಕ ಭಾರತೀಯ ಆಟಗಾರ ಅವರಾಗಿದ್ದಾರೆ.
ಶ್ರೇಯಾಂಕರಹಿತ ಜೋಡಿಯಾಗಿದ್ದ ಭೂಪತಿ ಮತ್ತು ಕೆವಿನ್ 4-6, 6-4, 6-10 ಸೆಟ್‌ಗಳಿಂದ ಆಸ್ಟ್ರಿಯಾದ ಅಲೆಂಕ್ಸಾಂಡರ್ ಪೇಯ ಮತ್ತು ಬ್ರೆಜಿಲ್‌ನ ಬ್ರೂನೊ ಸೋರ್ಸ್ ವಿರುದ್ಧ ಆಘಾತ ಅನುಭವಿಸಿದರು.
ಒಂದು ಗಂಟೆ 28 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಪೇಯ ಮತ್ತು ಬ್ರೂನೊ ಉತ್ತಮ ಹೊಂದಾಣಿಕೆ ಆಟ ಪ್ರದರ್ಶಿಸುವ ಮೂಲಕ ಭಾರತ-ದಕ್ಷಿಣ ಆಫ್ರಿಕಾ ಜೋಡಿ ವಿರುದ್ಧ ನಿರೀಕ್ಷಿತ ಗೆಲವು ದಾಖಲಿಸುವಲ್ಲಿ ಯಶಸ್ವಿಯಾದರು.
ಈ ಮಧ್ಯೆ ಭೂಪತಿ ಮತ್ತು ಕೆವಿನ್ ಭರ್ಜರಿ ಆರಂಭವನ್ನೇ ಪಡೆದರು. ಮೊದಲ ಸೆಟ್‌ನಲ್ಲಿ ಪೂರ್ಣ ತಮ್ಮ ಪ್ರಾಬಲ್ಯ ಮೆರೆಯುವುದರೊಂದಿಗೆ 6-4ರಿಂದ ಜಯಗಳಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು.
ಆದರೆ, ಎರಡನೇ ಸೆಟ್‌ನಲ್ಲಿ ತಿರುಗಿಬಿದ್ದ ಆಸ್ಟ್ರಿಯಾ-ಬ್ರೆಜಿಲ್ ಜೋಡಿ ಪರಿಣಾಮಕಾರಿ ಹೋರಾಟ ನಡೆಸುವ ಮೂಲಕ 6-4ರಿಂದ ಗೆಲವು ದಾಖಲಿಸಿ ಎದುರಾಳಿ ಜೊತೆ ಸಮಗೌರವ ಸಾಧಿಸಿದರು. ಹಾಗಾಗಿ, ನಿರ್ಣಾಯಕ ಮೂರನೇ ಸೆಟ್ ಹೆಚ್ಚು ರೋಚಕತೆ ಪಡೆಯಿತು. ಆದರೆ, ಇಲ್ಲಿ ಭೂಪತಿ ಮತ್ತು ಕೆವಿನ್ ಕೆಲ ಅನಗತ್ಯ ತಪ್ಪುಗಳನ್ನು ಎಸಗಿದರೆ, ಮತ್ತೊಂದೆಡೆ ಇವುಗಳ ಲಾಭ ಪಡೆದುಕೊಳ್ಳುವಲ್ಲಿ ಪೇಯ ಮತ್ತು ಬ್ರೂನೊ ಯಶಸ್ವಿಯಾಗುವುದರೊಂದಿಗೆ ಕೊನೆಯ ಸೆಟ್ ತಮ್ಮ ವಶಕ್ಕೆ ತೆಗೆದುಕೊಂಡು ಮುಂದಿನ ಸುತ್ತಿಗೆ ಹೆಜ್ಜೆ ಹಾಕಿದರು.
ಬೋಪಣ್ಣ-ಖುರೇಷಿಗೆ ಜಯ: ಭಾರತದ ರೋಹನ್ ಬೋಪಣ್ಣ ಮತ್ತು ಪಾಕಿಸ್ತಾನದ ಐಸಾಮುಲ್-ಹಕ್-ಖುರೇಷಿ ಪುರುಷರ ಡಬಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಗೆಲವು ದಾಖಲಿಸಿದ್ದಾರೆ. ಬೋಪಣ್ಣ ಮತ್ತು ಖುರೇಷಿ 6-3, 6-2 ನೇರ ಸೆಟ್‌ಗಳಿಂದ ಇಟಲಿಯ ಸಿಮೋನ್ ಬೊಲೆಲಿ ಮತ್ತು ಫಾಬಿಯೊ ಫಾಗ್ನಿನಿ ಅವರನ್ನು ಸೋಲಿಸಿದರು. ಕೇವಲ 55 ನಿಮಿಷಗಳ ಆಟದಲ್ಲಿಯೇ ಏಳನೇ ಶ್ರೇಯಾಂಕಿತ ಇಂಡೊ-ಪಾಕ್ ಎಕ್ಸ್‌ಪ್ರೆಸ್ ಜೋಡಿಗೆ ಜಯ ಲಭಿಸಿತು.
ಇದೇ ಪಂದ್ಯಾವಳಿಯಲ್ಲಿ ಜೆಕ್ ಗಣರಾಜ್ಯದ ರಾಡೆಕ್ ಸ್ಟೆಪಾನೆಕ್ ಜೊತೆಗೂಡಿ ಪಾಲ್ಗೊಂಡಿದ್ದ ಭಾರತದ ಮತ್ತೊಬ್ಬ ಆಟಗಾರ ಲಿಯಾಂಡರ್ ಪೇಸ್ ಪುರುಷರ ಡಬಲ್ಸ್ ಮೊದಲ ಸುತ್ತಿನ ಸಮರದಲ್ಲಿಯೋ ಸೋಲುಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement