ಶಿಲ್ಲಾಂಗ್ಗೆ ಶರಣಾದ ಬೆಂಗಳೂರು ಎಫ್ಸಿ
ಶಿಲ್ಲಾಂಗ್: ಸದಾ ತವರಿನಲ್ಲಿ ಗೆಲ್ಲುವ ಫೇವರಿಟ್ ಎನಿಸಿರುವ ಬೆಂಗಳೂರು ಫುಟ್ಬಾಲ್ ಕ್ಲಬ್ ಭಾನುವಾರ ಶಿಲ್ಲಾಂಗ್ ಲಾಜಾಂಗ್ ವಿರುದ್ಧ 3-0 ಅಂತರದಿಂದ ಸೋಲನುಭವಿಸಿತು. ಇದರೊಂದಿಗೆ ಪ್ರಸಕ್ತ ಐ- ಲೀಗ್ ಆವೃತ್ತಿಯಲ್ಲಿ ಬೆಂಗಳೂರು ಫುಟ್ಬಾಲ್ ಕ್ಲಬ್ ಸತತ ಎರಡನೇ ಬಾರಿಗೆ ಸೋಲನುಭವಿಸಿತು.
ಮೊದಲ ಅವಧಿಯಲ್ಲಿ ಯಾವುದೇ ತಂಡಕ್ಕೂ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
ಪಂದ್ಯದ 46ನೇ ನಿಮಿಷದಲ್ಲಿ ಆತಿಥೇಯ ತಂಡದ ಉಲ್ಲಿಯಾಮ್ಸ್ ಸೌಜಾ ಸಿಲ್ವಾ ಅವರು ಗೋಲು ದಾಖಲಿಸುವ ಅವಕಾಶ ಹೊಂದಿದ್ದರು. ಆದರೆ, ಅದನ್ನು ತಪ್ಪಿಸುವಲ್ಲಿ ಬಿಎಫ್ಸಿ ತಂಡ ಯಶಸ್ವಿಯಾಯಿತು. ನಂತರ ಕಾರ್ನೆಲ್ ಗ್ಲೆನ್ ಅವರು ಸಹ ಶಿಲ್ಲಾಂಗ್ ಪರ ಗೋಲು ದಾಖಲಿಸುವ ಅವಕಾಶದಿಂದ ವಂಚಿತರಾದರು. ಹೀಗಾಗಿ ವಿರಾಮದ ವೇಳೆಗೆ ಯಾವುದೇ ತಂಡ ಗೋಲುಗಳಿಸಲಿಲ್ಲ.
ಪಂದ್ಯದ 41ನೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ಪರ ಜಾನಿ ಮೆನಿಯಾಂಗರ್ ಅವರು ಶಕ್ತಿಶಾಲಿ ಸ್ಮ್ಯಾಷ್ ಹೊಡೆದರು. ಆದರೆ, ಚೆಂಡು ಕ್ರಾಸ್ಬಾರ್ ಮೇಲೆ ಹೋದ ಪರಿಣಾ ಗೋಲು ದಾಖಲಾಗಲಿಲ್ಲ. ನಂತರ ಸೀನ್ ರೂನಿ ಮಾಡಿದ ಪ್ರಯತ್ನ ಸಹ ಬಾರ್ ಮೇಲೆ ಹೋಗಿದ್ದರಿಂದ ಆಗಲೂ ಬೆಂಗಳೂರಿಗೆ ಗೋಲು ದೊರಕಲಿಲ್ಲ.
ಮೊದಲಾರ್ಧ ಅವಧಿಯಲ್ಲಿ ಉಭಯ ತಂಡಗಳು ಅಧ್ಭುತ ಪ್ರದರ್ಶನ ನೀಡಿದವು. ಆದರೆ, ದ್ವಿತೀಯಾರ್ಧ ಪಂದ್ಯದಲ್ಲಿ ಬೆಂಗಳೂರು ಆಟಗಾರುರ ನೀಡಿದ ಪ್ರದರ್ಶನ ಆತಿಥೇಯ ತಂಡದ ಆಟಗಾರರನ್ನು ನಿಯಂತ್ರಿಸಲು ಸಾಕಾಗಲಿಲ್ಲ. ಹೀಗಾಗಿ ಕೆಂಪು ಬಣ್ಣದ ಉಡುಪು ಹಾಕಿದ್ದ ಶಿಲ್ಲಾಂಗ್ ಹುಡುಗರು ತವರಿನಲ್ಲಿ ಅಂಗಣದಲ್ಲಿ ಜಯದ ಸಂಭ್ರಮದ ಆಚರಿಸಿದರು.
ದ್ವಿತೀರ್ಯಾದಲ್ಲಿ ಪಂದ್ಯದ 50ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಉಲಿಯಾಮ್ಸ್ ಅವರು ಆತಿಥೇಯ ತಂಡಕ್ಕೆ 1-0 ಅಂತರದಿಂದ ಮುನ್ನಡೆ ತಂದುಕೊಟ್ಟರು. ಮಿಂಚೋಲ್ ಸನ್ ಅವರು ಗ್ಲೆನ್ ಅವರಿಗೆ ಚೆಂಡನ್ನು ಪಾಸ್ ಮಾಡಿದರು. ಆಗ ಚೆಂಡನ್ನು ದೊರಕಿಸಿಕೊಂಡ ಉಲಿಯಾಮ್ಸ್ ಅವರಿಗೆ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸಲು ಸುಲಭ ಸಾಧ್ಯವಾಗಲಿಲ್ಲವಾದರೂ, ಗೋಲು ದಾಖಲಿಸುವಲ್ಲಿ ಯಶಸ್ವಿಯಾದರು.ನಂತರ 81ನೇ ನಿಮಿಷದಲ್ಲಿ ಗೋಲು ದಾಖಲಿಸಿದ ಗ್ಲೆನ್ ಅವರು ಆತಿಥೇಯ ತಂಡ 2-0 ಅಂತರದಿಂದ ಮುನ್ನಡೆ ಕಂಡುಕೊಂಡಿತು. ಅಂತಿಮವಾಗಿ ಮತ್ತೊಂದು ಗೋಲು ದಾಖಲಿಸಿದ ಆತಿಥೇಯ ತಂಡ 3-0 ಅಂತರದಿಂದ ಪಂದ್ಯದಲ್ಲಿ ಪಾರಮ್ಯ ಮೆರೆಯಿತು.