ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಹರಿಯಾಣಕ್ಕೆ ಹ್ಯಾಟ್ರಿಕ್ ಗರಿ

Mainashree
Updated On : 23 Mar 2014, 10:28 am

ಡಿ.ಎನ್. ಮಹೇಂದ್ರ
ಮೈಸೂರು
: ಕಿರಿಯ ಮಹಿಳೆಯರ 4ನೇ ರಾಷ್ಟ್ರೀಯ ಹಾಕಿ ಪಂದ್ಯಾವಳಿಯ ಎ ವಿಭಾಗದಲ್ಲಿ ನಿರೀಕ್ಷೆಯಂತೆ ಹರಿಯಾಣ ತಂಡ ಹ್ಯಾಟ್ರಿಕ್ ಜಯ ದಾಖಲಿಸಿದೆ. ಪ್ರಬಲ ಪೈಪೋಟಿ ನೀಡಿದ ಮಧ್ಯಪ್ರದೇಶ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟಿದೆ.
ಚಾಮುಂಡಿ ವಿಹಾರ ಕ್ರೀಡಾಂಗಣದ ಹಾಕಿ ಟರ್ಫ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಯಲ್ಲಿ ಪ್ರಬಲ ಪೈಪೋಟಿ ನೀಡಿದ ಮಧ್ಯಪ್ರದೇಶ ತಂಡವನ್ನು ಹರಿಯಾಣ 2-0 ಅಂತರದಿಂದ ಮಣಿಸಿತು. ಹರಿಯಾಣ ತಂಡದ ನರೀಂದರ್ ಕೌರ್ ಮತ್ತು ನಾಯಕಿ ನೇಹ ಗೋಯಲ್ ತಲಾ ಒಂದೊಂದು ಗೋಲ್ ಬಾರಿಸಿದರು. ಪಂದ್ಯ ಆರಂಭದ 8ನೇ ನಿಮಿಷದಲ್ಲಿ ನರೀಂದರ್ ಪ್ರಥಮ ಗೋಲ್ ಬಾರಿಸಿದರೆ, ಪಂದ್ಯದ ದ್ವಿತೀಯಾರ್ಧದಲ್ಲಿ ನೇಹ ಮತ್ತೊಂದು ಗೋಲ್ ಬಾರಿಸಿದರು.
ಹರಿಯಾಣಕ್ಕೆ ಒಟ್ಟು ನಾಲ್ಕು ಪೆನಾಲ್ಟಿ ಕಾರ್ನರ್ ಅವಕಾಶ ದೊರಕಿತಾದರೂ, ತಂಡದ ಆಟಗಾರ್ತಿಯರು ಈ ಯಾವ ಅವಕಾಶವನ್ನು ಗೋಲ್ ಆಗಿ ಬಳಸಿಕೊಳ್ಳಲಿಲ್ಲ. ಅಂತೆಯೇ ಮಧ್ಯಪ್ರದೇಶಕ್ಕೆ ಸುವರ್ಣಾವಕಾಶ ಎಂಬಂತೆ ಎರಡು ಪೆನಾಲ್ಟಿ ಕಾರ್ನರ್ ದೊರೆತರೂ ಒಂದು ಗೋಲನ್ನೂ ಬಾರಿಸಲಿಲ್ಲ. ಮಧ್ಯಪ್ರದೇಶ ತಂಡದ ರಾಖಿ ಪ್ರಜಾಪತಿಗೆ ಎರಡು ಬಾರಿ ಗೋಲ್ ಬಾರಿಸಲು ಮುಕ್ತ ಅವಕಾಶ ದೊರಕಿತ್ತು. ಹರಿಯಾಣ ತಂಡದ ಗೋಲ್ ಕೀಪರ್ ಬಲ ತುದಿಯಲ್ಲಿದ್ದಾಗ ಬಲ ತುದಿಯಲ್ಲಿದ್ದ ರಾಖಿ ಎರಡು ಗೋಲ್‌ಗಳನ್ನು ಸುಲಭವಾಗಿ ದಾಖಲಿಸಬಹುದಿತ್ತಾದರೂ ಅದನ್ನು ಸದುಪಯೋಗ ಪಡಿಸಿಕೊಳ್ಳುವಲ್ಲಿ ವಿಫಲರಾದರು.
ಇದೆ ಮಾದರಿಯಲ್ಲಿ ತಂಡದ ನಾಯಕಿ ಪ್ರಿಯಾಂಕ ವಾಂಖಡೆ ಒಂದು ಗೋಲ್ ಬಾರಿಸುವಲ್ಲಿ ವಿಫಲರಾದರು. ಆದರೆ ಹರಿಯಾಣ ತಂಡದ ಗೋಲ್ ಗಳಿಕೆಗೆ ವಿಪರೀತ ತಡೆ ನೀಡಿದ ಮಧ್ಯಪ್ರದೇಶ ಆಟಗಾರರು ಸಾಕಷ್ಟು ಪೈಪೋಟಿ ನೀಡಿದರು.
ಇದಕ್ಕೂ ಮುನ್ನ ಮೂರನೆ ಸ್ಥಾನಕ್ಕೆ ನಡೆದ ಪಂದ್ಯ ಮತ್ತಷ್ಟು ರೋಚಕತೆ ಉಂಟು ಮಾಡಿತು. ಜಾರ್ಖಂಡ್ ಮತ್ತು ಒಡಿಶಾ ತಂಡಗಳ ನಡುವೆ ನಡೆದ ಈ ಪಂದ್ಯಾವಳಿಯಲ್ಲಿ ಪಂದ್ಯದ ಸಂಪೂರ್ಣ ಸಮಯ ಮುಗಿದರೂ ಉಭಯ ತಂಡಗಳು ಒಂದು ಗೋಲ್ ಸಹ ದಾಖಲಿಸಲಿಲ್ಲ. ನಂತರ ಶೂಟ್ ಔಟ್ ವೇಳೆ ಪ್ರತಿ ತಂಡಕ್ಕೂ ಐದು ಅವಕಾಶ ನೀಡಲಾಯಿತು. ಈ ವೇಳೆ ಜಾರ್ಖಂಡ್ ತಂಡದ ರಜ್ನಿ ಸೊರೆಂಗ್, ಕಾಂತಿ ಪ್ರಧಾನ್ ಮತ್ತು ಸೀತಾಮಣಿ ಟೊಪ್ನೊ ಮೂರು ಗೋಲ್ ಬಾರಿಸಿದರು. ಇತ್ತ ಒಡಿಶಾ ಪರ ಸರೋಜಿನಿ ಎಕ್ಕ ಒಂದು ಗೋಲ್ ಬಾರಿಸಿದರು. ಅಲ್ಲಿಗೆ ಜಾರ್ಖಂಡ್ ತಂಡವು, ಒಡಿಶಾ ವಿರುದ್ಧ 3-1 ಅಂತರದಲ್ಲಿ ಜಯಗಳಿಸಿ ಕಂಚಿನ ಪದಕ ತನ್ನದಾಗಿಸಿಕೊಂಡಿತು.
ಉತ್ತಮ ಗೋಲ್ ಕೀಪರ್ ಪ್ರಶಸ್ತಿಗೆ ಕರ್ನಾಟಕದ ಎನ್.ಎನ್. ನಿಶಾ, ಉತ್ತಮ ಡಿಪೆಂಡರ್ ಬಹುಮಾನಕ್ಕೆ ಒಡಿಶಾದ ರಶ್ಮಿತ ಮಿಂಜ್, ಉತ್ತಮ ಮಿಡ್ ಫೀಲ್ಡರ್ ಬಹುಮಾನಕ್ಕೆ ಜಾರ್ಖಂಡ್‌ನ ರಜ್ನಿ ಸೊರೆಂಗ್, ಉತ್ತಮ ಫಾರ್ವರ್ಡ್‌ರ್ ಬಹುಮಾನಕ್ಕೆ ಮಧ್ಯಪ್ರದೇಶ ತಂಡದ ಪ್ರಿಯಾಂಕ ವಾಂಖಡೆ, ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಬಹುಮಾನವನ್ನು ಹರಿಯಾಣ ತಂಡದ ಜ್ಯೋತಿ ಗುಪ್ತ ಪಡೆದುಕೊಂಡರು. ಮಾಜಿ ಸಚಿವ ಎಂ.ಸಿ. ನಾಣಯ್ಯ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement