ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಕಿರಿಯರ ಮೇಲೆ ಜವಾಬ್ದಾರಿ

Mainashree
Updated On : 24 Mar 2014, 11:52 am

ಜೊಹೊರ್ ಬಹ್ರು: ಮಲೇಷಿಯನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿ ಮಂಗಳವಾರದಿಂದ ಆರಂಭವಾಗಲಿದ್ದು, ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಯುವ ಪ್ರತಿಭೆಗಳು ಭಾರತದ ಸವಾಲು ಮುನ್ನಡೆಸಬೇಕಾಗಿದೆ.  ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ ದಣಿದಿರುವ ಹಿರಿಯ ಪ್ರತಿಭೆಗಳಾದ ಸೈನಾ ನೆಹವಾಲ್, ಪಿ.ವಿ. ಸಿಂಧು ಮತ್ತು ಪರುಪಳ್ಳಿ ಕಶ್ಯಪ್ 1,20,000 ಡಾಲರ್ ಬಹುಮಾನ ಮೊತ್ತದ ಈ ಪಂದ್ಯಾವಳಿಯಿಂದ ವಿಶ್ರಾಂತಿ ಪಡೆದಿದ್ದಾರೆ.
ಹಾಗಾಗಿ, ಅವರ ಗೈರು ಹಾಜರಿಯಲ್ಲಿ ಯುವಶಕ್ತಿಗಳಾದ ಸೌರಭ್ ವರ್ಮಾ, ಎಚ್.ಎಸ್. ಪ್ರಣಯ್, ಸಾಯಿ ಪ್ರಣೀತ್, ಆರ್.ಎಂ.ವಿ. ಗುರುಸಾಯಿದತ್ ಮತ್ತು ಅರುಂಧತಿ ಪಂಟ್ವಾನೆ ಅವರು ಈ ಟೂರ್ನಿಯಲ್ಲಿ ತವರಿನ ದೊಡ್ಡ ಭಾರ ಹೊರಬೇಕಾಗಿದೆ.
ಸೌರಭ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದು ಅವರ ಮೇಲೆ ವಿಶ್ವಾಸ ಹೆಚ್ಚಿದೆ. ಇತ್ತೀಚೆಗಷ್ಟೇ ಅವರು ಟಾಟಾ ಓಪನ್, ಆಸ್ಟ್ರೇಲಿಯನ್ ಇಂಟರ್‌ನ್ಯಾಷನಲ್ ಚಾಲೆಂಜ್ ಮತ್ತು ಇರಾನ್ ಫಾಜರ್ ಇಂಟರ್‌ನ್ಯಾಷನಲ್ ಚಾಲೆಂಜ್ ಈ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿರುವ ಅವರು ಟೂರ್ನಿಯಲ್ಲಿ 8ನೇ ಶ್ರೇಯಾಂಕದ ಗೌರವ ಹೊಂದಿದ್ದಾರೆ. ಸೌರಭ್, ಪುರುಷರ ಸಿಂಗಲ್ಸ್ ವಿಭಾಗದ ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಹಾಂಕಾಂಗ್‌ನ ಯಾನ್ ಕಿಟ್ ಚಾನ್ ಅವರನ್ನು ಎದುರಿಸಲಿದ್ದಾರೆ.
21ರ ಪ್ರಣಯ್ ಕೂಡ ಈ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರಿಗೆ ಮೊದಲ ಸುತ್ತಿನಲ್ಲಿ ಮಲೇಷಿಯಾದ ಜಿಯಾನ್ ಶಿರಾಂಗ್ ಚಿಯಾಂಗ್‌ರ ಸವಾಲು ಎದುರಾಗಲಿದೆ.
ಉಳಿದಂತೆ, 12ನೇ ಶ್ರೇಯಾಂಕಿತ ಸಾಯಿ ಪ್ರಣೀತ್, ಮೊದಲ ಸುತ್ತಿನಲ್ಲಿ ಇಂಡೋನೇಷಿಯಾದ ಮಹಬೂಬ್ ಥೋಮಿ ಅಜಿಜಾನ್ ಹಾಗೂ ಆರನೇ ಶ್ರೇಯಾಂಕಿತ ಆರ್‌ಎಂವಿ ಗುರುಸಾಯಿದತ್ ಅವರು ಆರ್ಹತಾ ಸುತ್ತಿನ ಆಟಗಾರನ ವಿರುದ್ಧ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.
ಮಹಿಳೆಯರ ವಿಭಾಗದಲ್ಲಿ ತಾನ್ವಿ ಲಾಡ್,  ಇಂಡೊನೇಶಿಯಾದ ದೀನಾರ್ ಧ್ಯಾಹ ಆಯುಸ್ಟೈನ್‌ರನ್ನು, ಮತ್ತು  ನ್ಯಾಷನಲ್ ಗೇಮ್ಸ್ ಚಾಂಪಿಯನ್ ಅರುಂಧತಿ, ಜಪಾನಿನ ಆಯುಮಿ ಮಿನೆಯನ್ನು ಹಾಗೂ ಪಿ.ಸಿ. ತುಳಸಿ, ಇಂಡೋನೇಷಿಯಾದ ಹೀರಾ ದೇಶಿ ಅವರ ವಿರುದ್ಧ ಮೊದಲ ಸುತ್ತಿನಲ್ಲಿ ಸೆಣಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement