'ಮುಂದಿನ ಪಂದ್ಯಗಳಲ್ಲಿ ಯುವಿ ಫಾರ್ಮ್ಗೆ'
ಮೀರ್ಪುರ: ಭಾರತ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಒತ್ತಡದಲ್ಲಿದ್ದು, ಫಾರ್ಮ್ನಲ್ಲಿ ಇಲ್ಲದಿರುವುದನ್ನು ಒಪ್ಪಿಕೊಂಡಿರುವ ನಾಯಕ ಮಹೇಂದ್ರ ಸಿಂಗ್ ಧೋನಿ, ಯುವಿ ಮುಂದಿನ ಪಂದ್ಯಗಳಲ್ಲಿ ಫಾರ್ಮ್ ಕಂಡುಕೊಳ್ಳಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯುವರಾಜ್ ಸಿಂಗ್ ಅತ್ಯುತ್ತಮ ಟಿ20 ಆಟಗಾರ ಎಂಬುದರಲ್ಲಿ ಅನುಮಾನವಿಲ್ಲ. ಆದರೆ ಅವರು ಸದ್ಯದಲ್ಲಿ ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಏಕದಿನ ತಂಡದಿಂದ ಹೊರಗುಳಿದ ನಂತರ ಟಿ20ಯ ಮೂಲಕ ತಂಡಕ್ಕೆ ಮರಳುವ ಪರಿಸ್ಥಿತಿ ಎದುರಿಸುವುದು ಕಷ್ಟ. ಹಾಗಾಗಿ ಯುವಿ ಮೇಲೆ ಸ್ವಲ್ಪ ಒತ್ತಡವಿದೆ ಎಂದು ಧೋನಿ ಅಭಿಪ್ರಾಯಪಟ್ಟಿದ್ದಾರೆ.
ಯುವರಾಜ್ ಸಿಂಗ್ ತಮ್ಮ ಲಯ ಕಂಡುಕೊಳ್ಳಲು ಒಂದೆರಡು ಪಂದ್ಯಗಳ ಅಗತ್ಯವಿದೆ. ಆತ ಲಯ ಕಂಡುಕೊಂಡಿದ್ದೇ ಆದರೆ ಆತ ಎಂತಹ ಮ್ಯಾಚ್ ವಿನ್ನರ್ ಎಂಬುದು ನಮ್ಮೆಲ್ಲರಿಗೂ ತಿಳಿದಿರುವ ಸಂಗತಿ. ಆತ ಏಕಾಂಗಿಯಾಗಿ ಪಂದ್ಯದ ದಿಕ್ಕನ್ನು ಬದಲಿಸಬಲ್ಲ ಆಟಗಾರ. ಮುಂದಿನ ಪಂದ್ಯದಲ್ಲಿ ನಾವು ಉತ್ತಮ ರನ್ರೇಟ್ ಗೆಲವು ಪಡೆಯಲು ಎದುರು ನೋಡುತ್ತಿದ್ದು, ಜತೆಗೆ ಯುವಿ ಫಾರ್ಮ್ಗೆ ಮರಳುವುದನ್ನು ಎದುರು ನೋಡುತ್ತಿದ್ದೇವೆ. ಆತ ಲಯಕ್ಕೆ ಬಂದರೆ ತಂಡದ ಪ್ರಮುಖ ಅಸ್ತ್ರವಾಗಲಿದ್ದಾರೆ ಎಂದರು ಧೋನಿ.