ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಅಬ್ಬರಿಸಿದ ವಿಂಡೀಸ್; ಬಾಂಗ್ಲಾಗೆ ಹಾದಿ ಕಠಿಣ

Mainashree
Updated On : 25 Mar 2014, 10:12 am

ಮೀರ್‌ಪುರ: ಆರಂಭಿಕ ಆಟಗಾರ ಡ್ವೈನ್ ಸ್ಮಿತ್(72) ಅಬ್ಬರದ ಹಾಗೂ ಕ್ರಿಸ್ ಗೇಯ್ಲ್ (48) ಅವರ ತಾಳ್ಮೆಯ ಬ್ಯಾಟಿಂಗ್ ಹೊರತಾಗಿಯೂ ಅಂತಿಮ ಓವರ್‌ಗಳಲ್ಲಿನ ನಾಟಕೀಯ ಕುಸಿತದಿಂದ ವೆಸ್ಟ್ ಇಂಡೀಸ್ ತಂಡವು ಟಿ-20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶಕ್ಕೆ 172 ರನ್‌ಗಳ ಗುರಿ ನೀಡಿದೆ. ಮಂಗಳವಾರ ಇಲ್ಲಿನ ಶೇರೇ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ 2ನೇ ಗುಂಪಿನ ಸೂಪರ್ 10ರ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಹಾಗಾಗಿ ಆತಿಥೇಯ ಬಾಗ್ಲಾಗೆ ಸ್ಪರ್ಧಾತ್ಮಕ ಮೊತ್ತವನ್ನು ನೀಡಲು ಸಾಧ್ಯವಾಯಿತು.
ಬಾಂಗ್ಲಾದೇಶ ಟಾಸ್ ಗೆದ್ದುಕೊಂಡಿತಾದರೂ, ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಹಾಗಾಗಿ ವೆಸ್ಟ್ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ನಂತರ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 171 ರನ್ ಕಲೆಹಾಕಿತು. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಭಾರತದ ವಿರುದ್ಧ ಹೀನಾಯ ಸೋಲನುಭವಿಸಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಈ ಪಂದ್ಯ ಹೆಚ್ಚಿನ ಮಹತ್ವದ್ದಾಗಿತ್ತು. ತಂಡ ಈ ಪಂದ್ಯದಲ್ಲಿ ಒತ್ತಡದಿಂದ ಕಣಕ್ಕಿಳಿದರೂ, ಉತ್ತಮ ಯೋಜನೆ ರೂಪಿಸಿದ್ದು ಅವರ ಬ್ಯಾಟಿಂಗ್‌ನಲ್ಲಿ ಕಂಡು ಬಂದಿತು.
ಅಬ್ಬರಿಸಿದ ಸ್ಮಿತ್: ವಿಂಡೀಸ್ ಪರ ಖ್ಯಾತ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಡ್ವೈನ್ ಸ್ಮಿತ್ ಹಾಗೂ ಕ್ರಿಸ್ ಗೇಯ್ಲ್ ಆರಂಭಿಕರಾಗಿ ಕಣಕ್ಕಿಳಿದರು.
ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಆರಂಭದಲ್ಲಿ ಮಂದಗತಿಯ ಆಟ ಪ್ರದರ್ಶಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕುವತ್ತ ಗಮನ ಹರಿಸಿದರು. ಈ ಜೋಡಿ ಮೊದಲ ವಿಕೆಟ್‌ಗೆ 97 ರನ್‌ಗಳ ಅತ್ಯುತ್ತಮ ಆರಂಭ ನೀಡಿದರು. ಈ ವೇಳೆ ಸ್ಫೋಟಕ ಬ್ಯಾಟಿಂಗ್ ಮಾಡಿದ ಡ್ವೈನ್ ಸ್ಮಿತ್ (72 ರನ್, 43 ಎಸೆತ, 10 ಬೌಂಡರಿ, 3 ಸಿಕ್ಸರ್) ಮೊಹಮದ್ದುಲ್ಲಾ ಎಸೆತದಲ್ಲಿ ಅಲ್ ಅಮೀನ್‌ಗೆ ಕ್ಯಾಚ್ ನೀಡಿ ತಮ್ಮ ಅಮೋಘ ಇನಿಂಗ್ಸ್‌ಗೆ ತೆರೆ ಎಳೆದುಕೊಂಡರು. ಇನ್ನು ಮತ್ತೊಬ್ಬ ಆರಂಭಿಕ ಕ್ರಿಸ್ ಗೇಯ್ಲ್ (48 ರನ್, 48 ಎಸೆತ, 3 ಬೌಂಡರಿ, 2 ಸಿಕ್ಸರ್) ಈ ಪಂದ್‌ಯದಲ್ಲಿ ಮಂದಗತಿಯ ಬ್ಯಾಟಿಂಗ್ ನಡೆಸಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಬಹುತೇಕ ಇನಿಂಗ್ಸ್‌ನ ಅಂತಿಮವರೆಗೂ ಕ್ರೀಸ್‌ನಲ್ಲಿದ್ದ ಗೇಯ್ಲ್, ಅರ್ಧಶತಕದ ಅಂಚಿನಲ್ಲಿ ಎಡವಿದರು.
ನಾಟಕೀಯ ಕುಸಿತ: ಸ್ಮಿತ್ ಹಾಗೂ ಗೇಯ್ಲ್ ಹೊರತು ಪಡಿಸಿದಂತೆ ಉಳಿದಂತೆ ಯಾವುದೇ ಬ್ಯಾಟ್ಸ್‌ಮನ್ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸಲಿಲ್ಲ. ಹಾಗಾಗಿ ವೆಸ್ಟ್ ಇಂಡೀಸ್ ತಂಡ 200ರ ಗಡಿಯತ್ತ ಸಾಗುವ ರನ್ ವೇಗವನ್ನು 171ಕ್ಕೆ ಸೀಮಿತಗೊಳಿಸಿತು.
ಅಂತಿಮ ಓವರ್‌ಗಳಲ್ಲಿ ವಿಂಡೀಸ್‌ನ ನಾಲ್ವರು ಬ್ಯಾಟ್ಸ್‌ಮನ್‌ಗಳು ಶೂನ್ಯ ಸಂಪಾದನೆಗೆ ತೆರಳಿದ್ದು, ತಂಡದ ರನ್ ಕುಂಠಿತವಾಗಲು ಕಾರಣವಾಯಿತು.
ಅಂತಿಮ ಓವರ್‌ನಲ್ಲಿ ನಾಯಕೀಯ: ವೆಸ್ಟ್ ಇಂಡೀಸ್ ಇನಿಂಗ್ಸ್‌ನ ಅಂತಿಮ ಓವರ್ ನಾಟಕೀಯ ತಿರುವು ಕಂಡಿತು. 19 ಓವರ್‌ಗಳಿಗೆ 167 ರನ್‌ಗಳಿಸಿದ್ದ ವಿಂಡೀಸ್, ಅಂತಿಮ ಓವರ್‌ನಲ್ಲಿ ಹೆಚ್ಚಿನ ರನ್ ಗಳಿಸುವ ನಿರೀಕ್ಷೆ ಇತ್ತು. ಆದರೆ ನಡೆದಿದ್ದು, ಇದಕ್ಕೆ ತದ್ವಿರುದ್ಧ.
ಅಂತಿಮ ಓವರ್ ಎಸೆಯಲು ಆಗಮಿಸಿದ ಅಲ್ ಅಮೀನ್ ಹುಸೇನ್ ಅತ್ಯದ್ಭುತ ಬೌಲಿಂಗ್ ಪ್ರದರ್ಶನ ಮಾಡಿದರು. ಮೊದಲ ಎಸೆತದಲ್ಲಿ ಮರ್ಲಾನ್ ಸ್ಯಾಮ್ಯುಯೆಲ್ಸ್ ವಿಕೆಟ್, ಎರಡನೇ ಎಸೆತದಲ್ಲಿ ಆ್ಯಂಡ್ರೆ ರಸ್ಸೆಲ್ ವಿಕೆಟ್, ಮೂರನೇ ಎಸೆತದಲ್ಲಿ 1 ಬೈ, ನಾಲ್ಕನೇ ಎಸೆತದಲ್ಲಿ ಡ್ವೈನ್ ಬ್ರಾವೊ ವಿಕೆಟ್, ಐದನೇ ಎಸೆತದಲ್ಲಿ 1 ಬೈ, ಆರನೇ ಎಸೆತದಲ್ಲಿ 2 ರನ್ ಹಾಗೂ ರಾಮ್‌ದಿನ್ ರನೌಟ್ ಆದರು. ಈ ಮೂಲಕ ಅಂತಿಮ ಓವರ್‌ನಲ್ಲಿ ವಿಂಡೀಸ್ ಕೇವಲ 4 ರನ್ ದಾಖಲಾಯಿತು. ಇನ್ನು ಬಾಂಗ್ಲಾದೇಶದ ಪರ ಅಲ್ ಅಮೀನ್ 21 ರನ್‌ಗಳಿಗೆ 3 ವಿಕೆಟ್ ಪಡೆದು ಮಿಂಚಿದರು.

ಸಂಕ್ಷಿಪ್ತ ಸ್ಕೋರ್
ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 171
(ಡ್ವೈನ್ ಸ್ಮಿತ್ 72, ಕ್ರಿಸ್ ಗೇಯ್ಲ್ 48, ಹುಸೇನ್ 21ಕ್ಕೆ3, ಶಕಿಬ್ 21ಕ್ಕೆ1)

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement