ವಿಶ್ವಾಸದಲ್ಲಿ ಬೆಂಗಾಲ್
ಕೋಲ್ಕತಾ: ಕಳೆದ ನಾಲ್ಕು ಪಂದ್ಯಗಳಿಂದ ಸೋಲಿಲ್ಲದೆ ಉತ್ತಮ ಪ್ರದರ್ಶನ ನೀಡುತ್ತಿರುವ ಈಸ್ಟ್ ಬೆಂಗಾಲ್ ತಂಡ, ಐ ಲೀಗ್ನ ತಮ್ಮ ಮುಂದಿನ ಪಂದ್ಯದಲ್ಲಿ ಮುಂಬೈ ಎಫ್ಸಿ ವಿರುದ್ಧ ಗೆಲವು ದಾಖಲಿಸಲು ಎದುರು ನೋಡುತ್ತಿದೆ.
ಬುಧವಾರ ಇಲ್ಲಿನ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ಮುಂಬೈ ತಂಡ ಸಹ ಈಸ್ಟ್ ಬೆಂಗಾಲ್ ವಿರುದ್ಧ ಗೆಲವು ದಾಖಲಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ.
ಪಂದ್ಯಾವಳಿಯಲ್ಲಿ ಈಸ್ಟ್ಬೆಂಗಾಲ್ ತಂಡ ಆರಂಭದಲ್ಲಿ ಎಡವಿದರೂ ನಂತರ ತಮ್ಮ ಲಯವನ್ನು ಕಂಡುಕೊಳ್ಳುತ್ತಾ ಸಾಗಿದೆ. ಅಲ್ಲದೆ ಪಂದ್ಯಾವಳಿಯಲ್ಲಿ 27 ಅಂಕಗಳನ್ನು ಗಳಿಸುವ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಆನದಲ್ಲಿದೆ.
ಇನ್ನು ಮುಂಬೈ ಎಫ್ಸಿ ತಂಡದ ಪ್ರದರ್ಶನ ಈ ಬಾರಿ ಹೇಳಿಕೊಳ್ಳುವ ಮಟ್ಟದಲ್ಲಿಲ್ಲ. ಗೆಲವಿಗಿಂತ ಸೋಲಿನ ರುಚಿಯನ್ನು ಹೆಚ್ಚಾಗಿ ಸವಿದಿರುವ ಮುಂಬೈ, ಪಂದ್ಯಾವಳಿಯಲ್ಲಿ 20 ಅಂಕಗಳೊಂದಿಗೆ 11ನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯಗಳಲ್ಲಿ ಗೆದ್ದು, ತಮ್ಮ ಸ್ಥಾನವನ್ನು ಉತ್ತಮಗೊಳಿಸಿಕೊಳ್ಳಲು ಮುಬೈ ಎದುರು ನೋಡುತ್ತಿದೆ.
ಈಸ್ಟ್ ಬೆಂಗಾಲ್ ತಂಡ ಕಳೆದ ನಾಲ್ಕು ಪಂದ್ಯಗಳಲ್ಲಿ ಎರಡರಲ್ಲಿ ಗೆಲವು ಎರಡರಲ್ಲಿ ಡ್ರಾ ಸಾಧಿಸಿ ಉತ್ತಮ ಲಯದಲ್ಲಿ ಸಾಗುತ್ತಿದೆ.
ಅದರಲ್ಲಿ ಬೆಂಗಳೂರು ಎಫ್ಸಿ ವಿರುದ್ಧದ ಗೆಲವು ತಂಡದ ಆತ್ಮ ವಿಶ್ವಾಸವನ್ನು ಇಮ್ಮಡಿಗೊಳಿಸಿದೆ. ಇನ್ನು ಮುಂಬೈ ತಂಡ ಕಳೆದ ಏಳು ಪಂದ್ಯಗಳಲ್ಲಿ ಒಂದರಲ್ಲೂ ಗೆಲವು ದಾಖಲಿಸಿಲ್ಲ. ಹಾಗಾಗಿ ತಂಡ ಒತ್ತಡದಿಂದಲೇ ಕಣಕ್ಕಿಳಿಯುತ್ತಿದೆ.
ಪ್ರಸಕ್ತ ಉಭಯ ತಂಡಗಳ ಪರಿಸ್ಥಿತಿಯನ್ನು ಗಮನಿಸಿದ ನಂತರ ಈಸ್ಟ್ ಬೆಂಗಾಲ್ ಗೆಲವಿನ ಫೆವರಿಟ್ ತಂಡವಾಗಿದೆ.