ಹುದ್ದೆಯಿಂದ ಕೆಳಗಿಳಿಯುವಂತೆ ಬಿಸಿಸಿಐ ಅಧ್ಯಕ್ಷರ ಮೇಲೆ ಒತ್ತಡ
ನವದೆಹಲಿ: ಸುಪ್ರೀಂ ಕೋರ್ಟ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ, ಸಂಸ್ಥೆಯ ಮೂವರು ಉಪಾಧ್ಯಕ್ಷರು, ಮಾಜಿ ಕ್ರಿಕೆಟಿಗರು ಹಾಗೂ ಆಡಳಿತಾಧಿಕಾರಿಗಳು ಒತ್ತಾಯ ಮಾಡದ್ದಾರೆ. ಹೀಗಾಗಿ, ಶ್ರೀನಿವಾಸನ್ ಅವರು ಭಾರೀ ಒತ್ತಡದಲ್ಲಿ ಸಿಲುಕಿದ್ದಾರೆ ಎನ್ನಲಾಗಿದೆ.
ಐಪಿಎಲ್ ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ತನಿಖೆಗಾಗಿ ರಾಜೀನಾಮೆ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿರುವಾಗ, ಶ್ರೀನಿವಾಸನ್ ರಾಜೀನಾಮೆ ನೀಡಲೇಬೇಕು ಎಂಬುದು ಅವರೆಲ್ಲರ ಅಭಿಪ್ರಾಯವಾಗಿದೆ.
ಬಿಸಿಸಿಐನ ಐವರು ಉಪಾಧ್ಯಕ್ಷರ ಪೈಕಿ, ಮೂವರಾದ ಶಿವಲಾಲ್ ಯಾದವ್, ರವಿ ಸಾವಂತ್ ಹಾಗೂ ಚಿತ್ರಾಕ್ ಮಿತ್ರಾ ಶ್ರೀನಿ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಈಗ ಶ್ರೀನಿಸನ್ ರಾಜೀನಾಮೆ ನೀಡಬೇಕು. ಇಲ್ಲವಾದರೆ, ತಮ್ಮ ಸಂಸ್ಥೆಯಲ್ಲೇ ಈ ಮೂವರು ಉಪಾಧ್ಯಕ್ಷರ ವಿರುದ್ಧ ಹೋರಾಟ ನಡೆಸಬೇಕು.
'ಐಪಿಎಲ್ ಫಿಕ್ಸಿಂಗ್ ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಲು ಶ್ರೀನಿವಾಸನ್ ಅವರು ರಾಜೀನಾಮೆ ನೀಡಲೇಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಒಂದು ವೇಳೆ ಅವರು ರಾಜೀನಾಮೆ ನೀಡದಿದ್ದರೆ, ಮಾರ್ಚ್ 27ರಿಂದ ಜಾರಿಗೆ ಬರುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಲಿದೆ'
ಚಿತ್ರಾಕ್ ಮಿತ್ರಾ
ಪೂರ್ವ ವಲಯ ಪ್ರತನಿಧಿ ಮತ್ತು ಬಿಸಿಸಿಐ ಉಪಾಧ್ಯಕ್ಷ
'ವ್ಯಕ್ತಿಗಿಂತ ಕ್ರೀಡೆ ದೊಡ್ಡದು. ಹೀಗಾಗಿ ಶ್ರೀನಿವಾಸನ್ ರಾಜೀನಾಮೆ ನೀಡಿ, ಸೂಕ್ತ ತನಿಖೆಗೆ ಅವಕಾಶ ಮಾಡಿಕೊಡಬೇಕು. ಶ್ರೀನಿವಾಸನ್ ಕ್ರಿಕೆಟ್ ಅನ್ನು ಪ್ರೀತಿಸಿದರೆ, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾನೂನಿಗೆ ಗೌರವ ನೀಡಬೇಕು'
ಮೋಹಿಂದರ್ ಅಮರ್ನಾಥ್
ಟೀಂ ಇಂಡಿಯಾ ಮಾಜಿ ಆಟಗಾರ
'ಬಿಸಿಸಿಐ ಮುಗ್ಗರಿಸುವಂತೆ ಮಾಡಿದ ಸುಪ್ರೀಂ ಕೋರ್ಟ್ಗೆ ಧನ್ಯವಾದ. ಶ್ರೀನಿವಾಸನ್ ರಾಜೀನಾಮೆ ನೀಡಲೇಬೇಕು. ಅಲ್ಲದೆ, ಕ್ರಿಕೆಟ್ಗೆ ಸಂಬಂಧಿಸಿದ ಎಲ್ಲ ವಿಚಾರಗಳಿಂದ ಅವರು ಹಿಂದೆ ಸರಿಯಬೇಕು'
ಬಿಶನ್ ಸಿಂಗ್ ಬೇಡಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ
'ಸುಪ್ರೀಂ ಕೋರ್ಟ್ ಶ್ರೀನಿವಾಸನ್ಗೆ ರಾಜೀನಾಮೆ ನೀಡಲು ತಿಳಿಸಿರುವುದು ಖುಷಿ ತಂದಿದೆ. ಬಿಸಿಸಿಐ ಅಧ್ಯಕ್ಷರಾಗಿ ಮುಂದುವರಿಯುವ ಮೂಲಕ ಶ್ರೀನಿವಾಸನ್ ದುರಹಂಕಾರ ಮೆರೆಯುತ್ತಿದ್ದಾರೆ' ಕಿಶೋರ್ ರುಂಗ್ಟಾ
ರಾಜಸ್ಥಾನ ಕ್ರಿಕೆಟ್ ಸಂಸ್ಥೆಯ ಮಾಜಿ ಅಧ್ಯಕ್ಷ 'ನನಗೆ ರಾಜೀನಾಮೆ ನೀಡುವಂತೆ ಹೇಳಿದರೆ, ನಾನು ಅಗತ್ಯವಾಗಿ ಹಿಂದೆ ಸರಿಯುತ್ತೇನೆ. ಕಾರಣ ಬಿಸಿಸಿಐ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಸಂಸ್ಥೆಯ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವುದು ಮಹತ್ವದ್ದಾಗಿದೆ'
ಶಶಾಂಕ್ ಮನೋಹರ್
ಬಿಸಿಸಿಐ ಮಾಜಿ ಅಧ್ಯಕ್ಷ
'ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಕುರಿತು ಯಾರೂ ಪ್ರಶ್ನಿಸುವಂತಿಲ್ಲ ಮತ್ತು ನಾವು ಇದನ್ನು ಒಪ್ಪಿಕೊಳ್ಳಲೇಬೇಕು. ಹೀಗಾಗಿ ಈ ಕುರಿತು ಹೆಚ್ಚಿನ ಅಭಿಪ್ರಾಯ ನೀಡುವುದು ಸರಿಯಲ್ಲ. ಸುಪ್ರೀಂ ಕೋರ್ಟ್ ಸೂಚನೆ ನೀಡಿದಂತೆ ಬಿಸಿಸಿಐ ಕೇಳಬೇಕು' ಶಿವಲಾಲ್ ಯಾದವ್ ಬಿಸಿಸಿಐ ಉಪಾಧ್ಯಕ್ಷ
'ಸುಪ್ರೀಂ ಕೋರ್ಟ್ ತೀರ್ಮಾನವೇ ಅಂತಿಮ ತೀರ್ಮಾನ. ಅದು ಶ್ರೀನಿವಾಸನ್ ರಾಜೀನಾಮೆ ನೀಡಲು ತಿಳಿಸಿದೆ. ಇದರಲ್ಲಿ ರಾಜಿ ಮಾಡಿಕೊಳ್ಳುವಂತಹ ವಿಷಯವೇ ಇಲ್ಲ. ಎರಡು ದಿನಗಳಲ್ಲಿ ಶ್ರೀನಿವಾಸನ್ ರಾಜೀನಾಮೆ ನೀಡಲೇಬೇಕು' ಎಂದು ಸಾವಂತ್ ತಿಳಿಸಿದರು. ರವಿ ಸಾವಂತ್
ಬಿಸಿಸಿಐ ಉಪಾಧ್ಯಕ್ಷ