ಮೌನ ಮುರಿಯದ ಶ್ರೀನಿ
ಚೆನ್ನೈ: ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆಯನ್ನು ಮುಕ್ತವಾಗಿ ನಡೆಸುವ ಹಿನ್ನಲೆಯಲ್ಲಿ ಸುಪ್ರೀಂ ಕೋರ್ಟ್, ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಆದೇಶ ನೀಡಿರುವ ಬಗ್ಗೆ ಶ್ರೀನಿವಾಸನ್ ತಮ್ಮ ಮೌನ ಮುಂದುವರಿಸಿದ್ದಾರೆ.
ಶ್ರೀನಿವಾಸನ್ ಅವರ ಕಾನೂನು ಸಲಹೆಗಾರ ಪಿ.ಎಸ್ ರಾಮನ್, ಶ್ರೀನಿ ಮನೆಗೆ ಭೇಟಿ ನೀಡಿದರಾದರೂ, ಸುಪ್ರೀಂ ಕೋರ್ಟ್ ಆದೇಶಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಮಾಹಿತಿ ನೀಡಲು ನಿರಾಕರಿಸಿದ್ದಾರೆ. ಶ್ರೀನಿವಾಸನ್ ಅವರ ಕಣ್ಣಿಗೆ ಶಸ್ತ್ರ ಚಿಕಿತ್ಸೆಯಾಗಿದೆ. ಹಾಗಾಗಿ ಅವರ ಆರೋಗ್ಯ ವಿಚಾರಿಸಲು ಆಗಮಿಸಿದ್ದು, ಇದು ಯಾವುದೇ ಮಹತ್ವದ ಭೇಟಿಯಲ್ಲ ಎಂದು ರಾಮನ್ ತಿಳಿಸಿದ್ದಾರೆ.
ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕಳೆಗಿಳಿಯುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಕುರಿತ ಪ್ರಶ್ನೆಯನ್ನು ಕೇಳಿದಾಗ, ರಾಮನ್ ಉತ್ತರಿಸಲು ನಿರಾಕರಿಸಿದ್ದಾರೆ.
ಇದೇ ವೇಳೆ ಐಪಿಎಲ್ ಮೊದಲ ಹಂತದ ಪಂದ್ಯಾವಳಿಯ ಸಿದ್ಧತೆಯನ್ನು ಪರಿಶೀಲಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ಗೆ ತೆರಳಿದ್ದ ಬಿಸಿಸಿಐ ಕಾರ್ಯದರ್ಶಿ ಸಂಜಯ್ ಪಟೇಲ್ ಸಹ ತಮ್ಮ ಭೇಟಿಯನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸ್ಸಾಗಿದ್ದಾರೆ. ಸಂಜಯ್, ಶೀಘ್ರದಲ್ಲೇ ಶ್ರೀನಿವಾಸನ್ ಅವರನ್ನು ಭೇಟಿ ಮಾಡುವ ನಿರೀಕ್ಷೆಗಳಿದ್ದು, ಮುಂದಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರ ಕುರಿತಂತೆ ಚರ್ಚೆ ನಡೆಸುವ ಸಾಧ್ಯತೆಗಳಿವೆ.
ಇದೇ ವೇಳೆ ಶ್ರೀನಿವಾಸನ್ ಈ ವಿಷಯದ ಕುರಿತು ಮೌನವಾಗಿದ್ದಾರೆ. ಅವರು ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡದೇ, ಗುರುವಾರ ನಡೆಯಲಿರುವ ಸುಪ್ರೀ ಕೋರ್ಟ್ ವಿಚಾರಣೆಯಲ್ಲಿನ ನಿರ್ಧಾರದವರೆಗೂ ಕಾಯುವ ಸಾಧ್ಯತೆಗಳು ಹೆಚ್ಚಾಗಿದೆ.
ಸುಪ್ರೀಂ ಕೋರ್ಟ್ ಮಂಗಳವಾರ ಶ್ರೀನಿವಾಸನ್ ಅವರು ಏಕೆ ತಮ್ಮ ಸ್ಥಾನಕ್ಕೆ ಅಂಟಿಕೊಂಡಿದ್ದಾರೆ. ಎಂದು ಪ್ರಶ್ನಿಸಿದ್ದು, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಲು 48 ಗಂಟೆಗಳ ಗಡವು ನೀಡಿತ್ತು. ಒಂದು ವೇಳೆ ಶ್ರೀನಿವಾಸನ್ ಅವರು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡದಿದ್ದರೆ, ಅವರನ್ನು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿ ಮಾಡುವಂತೆ ಆದೇಶ ನೀಡಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತ್ತು.
ಬಿಸಿಸಿಐನಲ್ಲಿ ಒಟ್ಟು ಐವರು ಉಪಾಧ್ಯಕ್ಷರಿದ್ದು, ಅವರಲ್ಲಿಶಿವಲಾಲ್ ಯಾದವ್, ರವಿ ಸಾವಂತ್ ಹಾಗೂ ಚಿತ್ರಕ್ ಮಿತ್ರಾ ಅವರು ಶ್ರೀನಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಹೇಳುವ ಮೂಲಕ ಒತ್ತಡ ಹೇರಿದ್ದಾರೆ.