ರಾಜ್ಯದ ಅನೂಪ್ ಶ್ರೀಧರ್ ಮುನ್ನಡೆ
ಜೊಹೊರ್ ಬಾಹ್ರು (ಮಲೇಷಿಯಾ): ಭರವಸೆಯ ಪ್ರತಿಭೆಗಳಾದ ಕರ್ನಾಟಕದ ಅನೂಪ್ ಶ್ರೀಧರ್ ಅಲ್ಲದೇ ಸೌರಭ್ ವರ್ಮಾ ಮತ್ತು ಪಿ.ಸಿ. ತುಳಸಿ ಸೇರಿದಂತೆ ಭಾರತದ 9 ಮಂದಿ ಆಟಗಾರರು 1,20,000 ಡಾಲರ್ ಬಹುಮಾನ ಮೊತ್ತದ ಮಲೇಷಿಯನ್ ಗ್ರ್ಯಾನ್ ಪ್ರಿ ಗೋಲ್ಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನಲ್ಲಿ ಎರಡನೇ ಸುತ್ತು ಪ್ರವೇಶಿಸಿದ್ದಾರೆ.
ಹಿರಿಯ ಆಟಗಾರ ಅನೂಪ್ ಶ್ರೀಧರ್ ಪುರುಷರ ವಿಭಾಗದ ತಮ್ಮ ಮೊದಲ ಸುತ್ತಿನ ಸಿಂಗಲ್ಸ್ ಪಂದ್ಯದಲ್ಲಿ ಇಂಡೋನೇಶಿಯಾದ ಧರ್ಮಾ ಅಲ್ರಯಿ ಗುನಾ ಅವರ ವಿರುದ್ಧ 21-11, 21-16ರಿಂದ ಜಯಗಳಿಸಿದರು.
ಎಂಟನೇ ಶ್ರೇಯಾಂಕಿತ ಸೌರಭ್ ವರ್ಮಾ, 21-12, 21-17 ನೇರ ಅಂಕಗಳ ಅಂತರದಲ್ಲಿ ಹಾಂಕಾಂಗ್‌ನ ಯಾನ್ ಕಿಟ್ ಚಾನ್ ಅವರನ್ನು ಮಣಿಸಿದರು.
ಇತ್ತೀಚೆಗಷ್ಟೇ ಟಾಟಾ ಓಪನ್, ಆಸ್ಟ್ರಿಯನ್ ಇಂಟರ್‌ನ್ಯಾಷನಲ್ ಚಾಲೆಂಜ್ ಮತ್ತು ಇರಾನ್ ಫಜರ್ ಈ ಮೂರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಸೌರಭ್ ಅತ್ಯುತ್ತಮ ಫಾರ್ಮ್ ತೋರುವುದರೊಂದಿಗೆ ಕೇವಲ 31 ನಿಮಿಷಗಳ ಆಟದಲ್ಲಿಯೇ ಜಯಗಳಿಸಿದರು.
2011ರಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿದ್ದ ಸೌರಭ್, ಮುಂದಿನ ಸುತ್ತಿನ ಪಂದ್ಯದಲ್ಲಿ 2006ರ ಮೆಲ್ಬೋರ್ನ್ ಕಾಮನ್‌ವೆಲ್ತ್ ಗೇಮ್ಸ್‌ನ ಕಂಚಿನ ಪದಕ ವಿಜೇತ ತಮ್ಮದೇ ದೇಶದ ಚೇತನ್ ಆನಂದ್ ಅವರನ್ನು ಎದುರಿಸಲಿದ್ದಾರೆ. ಚೇತನ್ ತಮ್ಮ ಪಂದ್ಯದಲ್ಲಿ ಕೇಸಾರ್ ಅಕ್ಬರ್ ಅವರನ್ನು 21-11, 21-14 ಅಂಕಗಳಿಂದ ಸೋಲಿಸಿ ಮುನ್ನಡೆ ಸಾಧಿಸಿದ್ದಾರೆ.
ಗುರುಸಾಯಿದತ್, ಎಚ್.ಎಸ್. ಪ್ರಣಯ್, ಸಾಯಿ ಪ್ರಣೀತ್ ತಮ್ಮ ಪಂದ್ಯಗಳಲ್ಲಿ ಗೆಲವು ದಾಖಲಿಸಿ ಮುನ್ನಡೆ ಸಾಧಿಸಿದ್ದಾರೆ. ಯುವಪ್ರತಿಭೆ ಆದಿತ್ಯ ಪ್ರಕಾಶ್ 21-17, 15-21, 21-14ರಿಂದ ಇಂಡೋನೇಶಿಯಾದ ಆ್ಯಂಡ್ರೆ ಮಾರ್ಟೀನ್ ಎದುರು ಗೆಲವು ಸಂಪಾದಿಸಿದರು. ಮಹಿಳೆಯರ ವಿಭಾಗದಲ್ಲಿ ಪಿ.ಸಿ. ತುಳಸಿ 16-21, 21-16, 21-17ರಿಂದ ಚೈನೀಸ್ ತೈಪೇನ ಯು ಪೊ ಪಾಯಿಗೆ ಸೋಲುಣಿಸಿದರೆ, ತಾನ್ವಿ ಲಾಡ್ 21-19, 21-17ರಿಂದ ಇಂಡೊನೇಶಿಯಾದ ದೀನಾರ್ ಧ್ಯಾಹ ಆಯುಸ್ಟೈನ್ ವಿರುದ್ಧ ಜಯಗಳಿಸಿದರು.
ಆದರೆ ಭಾರತದ ಇತರೆ ಆಟಗಾರ್ತಿಯರಾದ ರಾಷ್ಟ್ರೀಯ ಗೇಮ್ಸ್ ಚಾಂಪಿಯನ್, ಏಳನೇ ಶ್ರೇಯಾಂಕಿತೆ ಅರುಂಧತಿ ಪಂಟ್ವಾನೆ, ಮಾಜಿ ರಾಷ್ಟ್ರೀಯ ಚಾಂಪಿಯನ್ ಸಯಾಲಿ ಗೋಖಲೆ ಸೋಲನುಭವಿಸಿದ್ದು ತವರಿಗೆ ಭಾರಿ ನಿರಾಸೆ ಉಂಟುಮಾಡಿತು.