ಶರಪೋವಾ-ಸೆರೆನಾ ಮುಖಾಮುಖಿ
ಮಿಯಾಮಿ: ರಷ್ಯಾದ ಮಾರಿಯಾ ಶರಪೋವಾ ಮತ್ತು ಅಮೆರಿಕದ ಸೆರೆನಾ ವಿಲಿಯಮ್ಸ್ ಎಟಿಪಿ ಮತ್ತು ಡಬ್ಲ್ಯುಟಿಎ ಮಿಯಾಮಿ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಗುರುವಾರ ಪರಸ್ಪರ ಮುಖಾಮುಖಿಯಾಗಲಿದ್ದಾರೆ.
ಮಂಗಳವಾರ ರಾತ್ರಿ ನಡೆದ ಮಹಿಳೆಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಾರಿಯಾ ಶರಪೋವಾ 7-5, 6-1 ನೇರ ಸೆಟ್‌ಗಳಿಂದ ಜೆಕ್ ಗಣರಾಜ್ಯದ ಪೆಟ್ರಾ ಕ್ವೆಟೊವಾ ಅವರನ್ನು ಸೋಲಿಸಿದರು.
ಸುಮಾರು 90 ನಿಮಿಷಗಳ ಆಟದಲ್ಲಿ ಶರಪೋವಾ ಉತ್ತಮ ಆಟದ ಪ್ರದರ್ಶನ ನೀಡುವ ಮೂಲಕ ವಿಂಬಲ್ಡನ್ ಚಾಂಪಿಯನ್ ಪೆಟ್ರಾ ಕ್ವಿಟೊವಾ ಅವರ ವಿರುದ್ಧ ನಿರೀಕ್ಷಿತ ಗೆಲವು ದಾಖಲಿಸುವಲ್ಲಿ ಸಫಲರಾದರು.
ಮತ್ತೊಂದು ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ವಿಶ್ವದ ನಂಬರ್ ಒನ್ ಆಟಗಾರ್ತಿ ಹಾಗೂ ಹಾಲಿ ಚಾಂಪಿಯನ್ ಸೆರೆನಾ ವಿಲಿಯಮ್ಸ್ 6-2, 6-2 ನೇರ ಸೆಟ್‌ಗಳಿಂದ ಜರ್ಮನಿಯ ಆ್ಯಂಗೆಲಿಕ್ ಕೆರ್ಬರ್ ಅವರನ್ನು ಮಣಿಸಿದರು.
ಟೂರ್ನಿಯ ಅಗ್ರಶ್ರೇಯಾಂಕಿತ ಆಟಗಾರ್ತಿಯೂ ಆಗಿರುವ ಸೆರೆನಾ, 62 ನಿಮಿಷಗಳ ಆಟದಲ್ಲಿಯೇ ಐದನೇ ಶ್ರೇಯಾಂಕಿತೆ ಕೆರ್ಬರ್ ಅವರನ್ನು ಪರಾಭವಗೊಳಿಸಿ ನಾಲ್ಕರಘಟ್ಟ ಪ್ರವೇಶಿಸಿದರು.
ಇದರೊಂದಿಗೆ ಮುಂದಿನ ಪಂದ್ಯ ಸೆರೆನಾ ಮತ್ತು ಶರಪೋವಾಗೆ 2013ರ ಫೈನಲ್ ಪಂದ್ಯದ ಪುನರಾವರ್ತನೆ ಎನ್ನುವಂತಾಗಿದೆ. ಉಭಯ ಆಟಗಾರ್ತಿಯರ ಮುಖಾಮುಖಿಯಲ್ಲಿ ಸೆರೆನಾ ಸಂಪೂರ್ಣ ತಮ್ಮ ಪ್ರಭುತ್ವ ಸ್ಥಾಪಿಸಿದ್ದಾರೆ. 2004ರಿಂದ ಸೆರೆನಾ ವಿರುದ್ಧ ಶರಪೋವಾ ಗೆಲವು ದಾಖಲಿಸಿಲ್ಲ. ಇದೀಗ 18ನೇ ಬಾರಿಗೆ ಸೆರೆನಾ ಮತ್ತು ಶರಪೋವಾ ಪರಸ್ಪರ ಎದುರಾಗುತ್ತಿದ್ದಾರೆ.
ರಷ್ಯನ್ ಆಟಗಾರ್ತಿ ಸತತ 14 ಪಂದ್ಯಗಳಲ್ಲಿ ಸೆರೆನಾಗೆ ತಲೆಬಾಗಿಸಿದ್ದು, ಕಳೆದ 22 ಸೆಟ್‌ಗಳ ಹೋರಾಟದಲ್ಲಿ ಕೇವಲ ಒಂದು ಸೆಟ್ ಗೆದ್ದುಕೊಳ್ಳುವಲ್ಲಿ ಮಾತ್ರ ಶರಪೋವಾ ಯಶಸ್ವಿಯಾಗಿದ್ದಾರೆ. ಅಂದರೆ, 2013ರ ಮಿಯಾಮಿ ಓಪನ್ ಫೈನಲ್‌ನಲ್ಲಿ ಪರಸ್ಪರ ಸೆಣಸಿದಾಗ ಶರಪೋವಾ ಆ ಒಂದು ಸೆಟ್ ಗೆದ್ದುಕೊಂಡಿದ್ದರು. ಆ ಪಂದ್ಯವನ್ನು ಸೆರೆನಾ 4-6, 6-3, 6-0 ಸೆಟ್‌ಗಳಿಂದ ಗೆದ್ದುಕೊಂಡಿದ್ದರು.
ಕಳೆದ ಬಾರಿ ಜನವರಿಯಲ್ಲಿ ನಡೆದ ಬ್ರಿಸ್ಬೇನ್ ಇಂಟರ್‌ನ್ಯಾಷನಲ್ ಟೂರ್ನಿಯಲ್ಲಿ ಇಬ್ಬರೂ ಆಟಗಾರ್ತಿಯರು ಮುಖಾಮುಖಿಯಾದಾಗ ಶರಪೋವಾ ವಿರುದ್ಧ ಅಮೆರಿಕದ ಆಟಗಾರ್ತಿ 6-2, 7-6 (9-7) ಸೆಟ್‌ಗಳಿಂದ ಜಯ ಸಂಪಾದಿಸಿದ್ದರು.
ಮರ್ರೆ-ಜೊಕೊವಿಚ್ ಸೆಣಸು
ಈ ಮಧ್ಯೆ ಪುರುಷರ ಸಿಂಗಲ್ಸ್ ವಿಭಾಗದ ಕ್ವಾರ್ಟರ್‌ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಆ್ಯಂಡಿ ಮರ್ರೆ ಮತ್ತು ಸರ್ಬಿಯಾದ ನೊವಾಕ್ ಜೊಕೊವಿಚ್ ಪರಸ್ಪರ ಸೆಣಸಲಿದ್ದಾರೆ.
ವಿಂಬಲ್ಡನ್ ಚಾಂಪಿಯನ್ ಬ್ರಿಟನ್ನಿನ ಆ್ಯಂಡಿ ಮರ್ರೆ, ಪ್ರಿಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಫ್ರಾನ್ಸ್‌ನ 11ನೇ ಶ್ರೇಯಾಂಕಿತ ಜೋ-ವಿಲ್‌ಫ್ರೆಡ್ ಸೋಂಗಾ ಅವರನ್ನು 6-4, 6-1 ಸೆಟ್‌ಗಳಿಂದ ಪರಾಭವಗೊಳಿಸಿದರು.
ಮತ್ತೊಂದು ಪಂದ್ಯದಲ್ಲಿ ಎರಡನೇ ಶ್ರೇಯಾಂಕಿತ ಜೊಕೊವಿಚ್ ಟಾಮಿ ರಾಬ್ರೆಡೊ ವಿರುದ್ಧ 6-3, 7-5 ಸೆಟ್‌ಗಳಿಂದ ಜಯಗಳಿಸಿದರು.
ಮತ್ತೊಬ್ಬ ಪ್ರಮುಖ ಆಟಗಾರ 5ನೇ ಶ್ರೇಯಾಂಕಿತ ಸ್ವಿಜರ್‌ಲ್ಯಾಂಡ್‌ನ ರೋಜರ್ ಫೆಡರರ್ 6-1, 6-2 ಸೆಟ್‌ಗಳಿಂದ ಫ್ರಾನ್ಸ್‌ನ ಒಂಬತ್ತನೇ ಶ್ರೇಯಾಂಕಿತ ರಿಚರ್ಡ್ ಗ್ಯಾಸ್ಕೆಟ್ ಅವರನ್ನು ಸೋಲಿಸಿ ಕ್ವಾರ್ಟರ್‌ಫೈನಲ್‌ಗೆ ಹೆಜ್ಜೆ ಹಾಕಿದ್ದಾರೆ.