ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್:ಪ್ರಿ ಕ್ವಾರ್ಟರ್ಗೆ ಸೌರಭ್
ಜೊಹೊರ್ ಬಹುರ್: ಉತ್ತಮ ಪ್ರದರ್ಶನ ನೀಡುವ ಮೂಲಕ ಭಾರತದ ನಾಲ್ವರು ಶಟ್ಲರ್ಗಳು ಮಲೇಷ್ಯಾ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಬ್ಯಾಡ್ಮಿಂಟನ್ ಟೂರ್ನಿಯ ಪ್ರಿ ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯಗಳಲ್ಲಿ ಎಂಟನೇ ಶ್ರೇಯಾಂಕಿತ ಸೌರಭ್ ವರ್ಮಾ ಜತೆಗೆ ಸಾಯಿ ಪ್ರಣೀತ್, ಎಚ್.ಎಸ್ ಪ್ರಣಯ್ ಮತ್ತು ಆರ್ಎಮ್ವಿ ಗುರುಸಾಯಿದತ್ ಗೆಲವು ದಾಖಲಿಸಿದ್ದು, ಹದಿನಾರರ ಘಟ್ಟಕ್ಕೆ ಪ್ರವೇಶಿಸಿದ್ದಾರೆ.
ಸೌರಭ್ ತಮ್ಮ ಎದುರಾಳಿ ಚೇತನ್ ಆನಂದ್ ವಿರುದ್ಧ 21-14, 21-17 ಸೆಟ್ಗಳ ಅಂತರದಲ್ಲಿ ಗೆಲವು ದಾಖಲಿಸಿದ್ದು, ಮುಂದಿನ ಪಂದ್ಯದಲ್ಲಿ ಜಪಾನ್ನ ಕಜುಮಸಾ ಸಕಾಯ್ ವಿರುದ್ಧ ಕಾದಾಟ ನಡೆಸಲಿದ್ದಾರೆ.
ಇನ್ನು ಪ್ರಣೀತ್ ತಮ್ಮ ಎದುರಾಳಿ ಮಲೇಷ್ಯಾದ ನೂರ್ ಮೊಹಮದ್ ಆಯುಬ್ ವಿರುದ್ಧ 16-21, 21-7, 21-4 ಸೆಟ್ಗಳ ಅಂತರದಲ್ಲಿ ಗೆಲವು ಒದಾಖಲಿಸಿದ್ದಾರೆ.
ಇನ್ನು ಪ್ರಣಯ್ ತಮ್ಮ ಎದುರಾಳಿ ಜಪಾನ್ನ ರಿಚಿ ಟಕೇಶಿಟಾ ವಿರುದ್ಧ 21-17, 25-23 ಸೆಟ್ಗಳ ಅಂತರದಿಂದ ಜಯ ಸಾಧಿಸಿದರು. ಗುರುಸಾಯಿದತ್ 21-17, 21-13 ಸೆಟ್ಗಳ ಅಂತರದಲ್ಲಿ ಮಲೇಷ್ಯಾದ ಜಿಯೊ ಯೋಹ್ ಅವರನ್ನು ಮಣಿಸಿದ್ದಾರೆ.
ಉಳಿದಂತೆ ಭಾರತದ ಇತರೆ ಆಟಗಾರರಾದ ಅನೂಪ್ ಶ್ರೀಧರ್ ಹಾಗೂ ಆದಿತ್ಯ ಪ್ರಕಾಶ್ ಸೋಲನುಭವಿಸಿದ್ದು, ನಿರಾಸೆ ಮೂಡಿಸಿದರು.
ಮಿಶ್ರ ಡಬಲ್ಸ್ ವಿಭಾಗದಲ್ಲಿ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಸಿಕಿ ರೆಡ್ಡಿ ಜೋಡಿಯು ಮಲೇಷ್ಯಾದ ಚೀ ಥೆನ್ ತಾನ್ ಹಾಗೂ ಶೆವೊನ್ ಜೇಮಿ ಲೈ ವಿರುದ್ಧ 21-16, 21-14 ಸೆಟ್ಗಳ ಅಂತರದಿಂದ ಗೆಲವು ದಾಖಲಿಸಿದರು.
ಇನ್ನು ಅಪರ್ಣ ಬಾಲನ್ ಹಾಗೂ ಅರುಣ್ ವಿಷ್ಣು ಜೋಡಿಯು 19-21, 7-21 ಸೆಟ್ಗಳ ಅಂತರದಿಂದ ಮಲೇಷ್ಯಾದ ಫೈ ಯಿನ್ ವಾಂಗ್ ಹಾಗೂ ಮೈ ಕೌನ್ ಚೌ ಜೋಡಿ ವಿರುದ್ಧ ಮುಖಭಂಗ ಅನುಭವಿಸಿದೆ.