ಲಂಕೆಗೆ ಜಯದಾಸರೆ
ಚಿತ್ತಗಾಂಗ್: ಹಿರಿಯ ಆಟಗಾರ ಮಹೆಲಾ ಜಯವರ್ದನೆ(89) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡ ಟಿ20 ವಿಶ್ವಕಪ್ನಲ್ಲಿ ಇಂಗ್ಲೆಂಡ್ ವಿರುದ್ಧ 189 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ.
ಗುರುವಾರ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಸೂಪರ್ 10 ಹಂತದ ಮೊದಲ ಗುಂಪಿನ ಪಂದ್ಯದಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್ ಪಡೆಗೆ 190 ರನ್ಗಳ ಗುರಿ ನೀಡಿದೆ.
ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಮೊದಲು ಬ್ಯಾಟಿಂಗ್ಗೆ ಶ್ರೀಲಂಕಾ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 189 ರನ್ ಕಲೆಹಾಕಿತು.
ಆರಂಭಿಕ ಎರಡು ಪಂದ್ಯಗಳಲ್ಲಿ ಗೆಲವು ದಾಖಲಿಸಿ ಆತ್ಮ ವಿಶ್ವಾಸದೊಂದಿಗೆ ಕಣಕ್ಕಿಳಿದ ಶ್ರೀಲಂಕಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಯಿತು. ಮೊದಲ ಪಂದ್ಯದಲ್ಲಿ ಸೋಲನುಭವಿಸಿದ್ದ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿತ್ತು.
ಉತ್ತಮ ಜತೆಯಾಟ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಶ್ರೀಲಂಕಾ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ.
ಕೇವಲ 4 ರನ್ ಆಗಿದ್ದಾಗಲೇ ಆರಂಭಿಕ ಕುಶಾಲ ಪೆರೇರಾ ವಿಕೆಟ್ ಕಳೆದುಕೊಂಡ ಲಂಕಾ ಆರಂಭಿಕ ಆಘಾತ ಎದುರಿಸಿತು. ಈ ವೇಳೆ ಜತೆಯಾದ ತಿಲಕರತ್ನೆ ದಿಲ್ಷಾನ್ ಹಾಗೂ ಮಹೆಲಾ ಜಯವರ್ದನೆ ಎರಡನೇ ವಿಕೆಟ್ಗೆ 145 ರನ್ಗಳ ಜತೆಯಾಟ ನೀಡುವ ಮೂಲಕ ತಂಡಕ್ಕೆ ಆಧಾರವಾಗಿ ನಿಂತರು. ಅಲ್ಲದೆ ತಂಡ ಬೃಹತ್ ಮೊತ್ತ ಪೇರಿಸಲು ಹಾದಿ ಸುಗಮವಾಗಿಸಿದರು.
ಅಬ್ಬರದ ಬ್ಯಾಟಿಂಗ್ ನಡೆಸಿದ ಜಯವರ್ದನೆ 51 ಎಸೆತಗಳಲ್ಲಿ 11 ಬೌಂಡರಿ ಹಾಗೂ 3 ಸಿಕ್ಸರ್ಗಳ ನೆರವಿನಿಂದ 89 ರನ್ ಗಳಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ತಿಲಕರತ್ನೆ ದಿಲ್ಷಾನ್ 47 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ 2 ಸಿಕ್ಸರ್ ಒಳಗೊಂಡಂತೆ 55 ರನ್ ದಾಖಲಿಸಿದರು.
ಇಂಗ್ಲೆಂಡ್ ತಂಡದ ಪರ ಉತ್ತಮ ಬೌಲಿಂಗ್ ಮಾಡಿದ ಡರ್ನ್ಬ್ಯಾಚ್ 42 ರನ್ಗಳಿಗೆ 2 ಹಾಗೂ ಕ್ರಿಸ್ ಜೋರ್ಡನ್ 28 ರನ್ಗಳಿಗೆ 2 ವಿಕೆಟ್ ಕಬಳಿಸಿದರು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ 20 ಓವರ್ಗಳಲ್ಲಿ 4 ವಿಕೆಟ್ಗೆ 189
(ಮಹೆಲಾ ಜಯವರ್ದನೆ 89, ದಿಲ್ಷಾನ್ 55, ತಿಸಾರ ಪೆರೇರಾ ಅಜೇಯ 23, ಡರ್ನ್ಬ್ಯಾಚ್ 42ಕ್ಕೆ2, ಕ್ರಿಸ್ ಜೋರ್ಡನ್ 28ಕ್ಕೆ2)