ಹರಿಣಗಳಿಗೆ ಪ್ರಯಾಸದ ಜಯ
ಚಿತ್ತಗಾಂಗ್: ದುರ್ಬಲ ನೆದರ್ಲ್ಯಾಂಡ್ಸ್ ತಂಡದಿಂದ ಪ್ರಬಲ ಹೋರಾಟ ಎದುರಿಸಿದ ದಕ್ಷಿಣ ಆಫ್ರಿಕಾ ತಂಡ ಇಮ್ರಾನ್ ತಾಹಿರ್(4 ವಿಕೆಟ್) ಮಾರಕ ಬೌಲಿಂಗ್ನಿಂದ ಟಿ20 ವಿಶ್ವಕಪ್ ಪಂದ್ಯದಲ್ಲಿ ಪ್ರಯಾಸದ ಗೆಲವು ದಾಖಲಿಸಿದೆ.
ಗುರುವಾರ ಇಲ್ಲಿನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಗುಂಪಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು 6 ರನ್ಗಳ ಅಂತರದಲ್ಲಿ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ಗೆಲವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನೆದರ್ಲ್ಯಾಂಡ್ಸ್, ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ 20 ಓವರ್ಗಳಲ್ಲಿ 9 ವಿಕೆಟ್ಗೆ ಕೇವಲ 145 ರನ್ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ನಂತರ ಈ ಮೊತ್ತವನ್ನು ಬೆಂಬತ್ತಿದ ನೆದರ್ಲ್ಯಾಂಡ್ಸ್ 18.4 ಓವರ್ಗಳಲ್ಲಿ 139 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಇನಿಂಗ್ಸ್ಗೆ ತೆರೆ ಎಳೆದುಕೊಂಡಿತು.
ಸೂಪರ್ 10 ಹಂತದ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕೇವಲ 39 ರನ್ಗಳಿಗೆ ಆಲೌಟ್ ಆಗಿದ್ದ ನೆದರ್ಲ್ಯಾಂಡ್ಸ್ ತಂಡ ಈ ಪಂದ್ಯದಲ್ಲಿ ಹರಿಣಗಳಿಗೆ ಉತ್ತಮ ಹೋರಾಟವನ್ನೇ ನೀಡಿತು. ಒಂದು ಹಂತದಲ್ಲಿ ಪಂದ್ಯದಲ್ಲಿ ಗೆಲವು ದಾಖಲಿಸಲು ಅತ್ಯುತ್ತಮ ಅವಕಾಶ ಹೊಂದಿದ್ದ ನೆದರ್ಲ್ಯಾಂಡ್ಸ್ ನಿರಂತರವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ಪಂದ್ಯವನ್ನು ಕೈ ಚೆಲ್ಲುವಂತಾಯಿತು.
ಮಲಿಕ್ ಮಾರಕ: ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ದಕ್ಷಿಣ ಆಫ್ರಿಕಾ ತಂಡ ಬೃಹತ್ ಮೊತ್ತ ದಾಖಲಿಸಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಹರಿಣಗಳನ್ನು ಕಾಡಿದ ನೆದರ್ಲ್ಯಾಂಡ್ಸ್ನ ಅಶನ್ ಮಲಿಕ್ ಜಮಿಲ್ 5 ವಿಕೆಟ್ ಪಡೆದು ಆಫ್ರಿಕಾ ಇನಿಂಗ್ಸ್ಗೆ ಬ್ರೇಕ್ ಹಾಕಿದರು.
ಆರಂಭಿಕ ಹಶೀಂ ಆಮ್ಲಾ(43), ಫಫ್ ಡುಪ್ಲೆಸಿಸ್(24) ಹಾಗೂ ಎಬಿ ಡಿವಿಲಿಯರ್ಸ್(21) ಹೊರತಾಗಿ ಯಾವುದೇ ಬ್ಯಾಟ್ಸ್ಮನ್ ಉತ್ತಮ ರನ್ ಗಳಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ದಕ್ಷಿಣ ಆಫ್ರಿಕಾ ತಂಡ 145 ರನ್ಗಳಿಗೆ ತನ್ನ ಇನಿಂಗ್ಸ್ಗೆ ತೆರೆ ಎಳೆದುಕೊಂಡಿತು.
ನೆದರ್ಲ್ಯಾಂಡ್ಸ್ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ಅಶನ್ ಮಲಿಕ್ ಜಮಿಲ್ 4 ಓವರ್ಗಳಲ್ಲಿ 19 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಹರಿಣಗಳ ಪಾಲಿಗೆ ಸಿಂಹ ಸ್ವಪ್ನವಾದರು.
ಮೈಬರ್ಗ್ ಹೋರಾಟ ವ್ಯರ್ಥ: ಹರಿಣಗಳು ನೀಡಿದ ಗುರಿಯನ್ನು ಬೆಂಬತ್ತಿದ ನೆದರ್ಲ್ಯಾಂಡ್ಸ್ ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ನಡೆಸಿತಾದರೂ ಅಂತಿಮವಾಗಿ ವಿಕೆಟ್ ಕಳೆದುಕೊಂಡು ಸೋಲನುಭವಿಸಿತು. ತಂಡದ ಪರ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕ ದಾಖಲಿಸಿದ ಮೈಬರ್ಗ್(51), ಹೋರಾಟ ವ್ಯರ್ಥವಾಯಿತು.
ಆರಂಭಿಕರಾಗಿ ಕಣಕ್ಕಿಳಿದ ಮೈಬರ್ಗ್ ಹಾಗೂ ಮೈಕಲ್ ಸ್ವಾರ್ಟ್ 58 ರನ್ಗಳ ಅತ್ಯುತ್ತಮ ಆರಂಭ ನೀಡಿದರು. ಈ ಜೋಡಿ ಕೇವಲ 5.5 ಓವರ್ಗಳಲ್ಲಿ 58 ರನ್ ದಾಖಲಿಸುವ ಮೂಲಕ ಹರಿಣಗಳ ಬೌಲರ್ಗಳನ್ನು ಕಾಡಿದರು. ಮೈಬರ್ಗ್ 28 ಎಸೆಸಗಳಲ್ಲಿ 8 ಬೌಂಡರಿ ಹಾಗೂ 2 ಸಿಕ್ಸರ್ ಸೇರಿದಂತೆ 51 ರನ್ ದಾಖಲಿಸಿ ಔಟಾದರೆ, ಸ್ವಾರ್ಟ್ 8 ರನ್ಗೆ ಪೆವಿಲಿಯನ್ ಸೇರಿಕೊಂಡರು.
ನಂತರ ಬಂದ ವೆಸ್ಲೆ ಬರೆಸ್ಸಿ(14), ಪೀಟರ್ ಬೋರೆನ್(13), ಟಾಮ್ ಕೂಪರ್(16) ಸ್ಫೋಟಕ ಬ್ಯಾಟಿಂಗ್ಗೆ ಮುಂದಾಗಿ ಬೇಗನೆ ವಿಕೆಟ್ ಕೈಚೆಲ್ಲಿದರು.
ಒಂದು ಹಂತದಲ್ಲಿ 10.2 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 97 ರನ್ ದಾಖಲಿಸಿದ್ದ ನೆದರ್ಲ್ಯಾಂಡ್ಸ್ ಪಂದ್ಯವನ್ನು ಗೆದ್ದುಗಕೊಳ್ಳುವ ಹಂತದಲ್ಲಿತ್ತು. ಆನಂತರ ಬಂದ ಬ್ಯಾಟ್ಸ್ಮನ್ಗಳು ಕ್ರಿಸ್ನಲ್ಲಿ ನಿಲ್ಲದೆ ನಿರಂತರವಾಗಿ ವಿಕೆಟ್ ಕಳೆದುಕೊಂಡ ಪರಿಣಾಮ ತಂಡ ಸೋಲಿನ ಸುಳಿಗೆ ಸಿಲುಕಿತು.
ದಕ್ಷಿಣ ಆಫ್ರಿಕಾ ಪರ ಮಾರಕ ಬೌಲಿಂಗ್ ಮಾಡಿದ ಇಮ್ರಾನ್ ತಾಹಿರ್ 21 ರನ್ಗಳಿಗೆ 4 ವಿಕೆಟ್ ಪಡೆದು ತಂಡದ ಗೆಲವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಸಂಕ್ಷಿಪ್ತ ಸ್ಕೋರ್
ದಕ್ಷಿಣ ಆಫ್ರಿಕಾ 20 ಓವರ್ಗಳಲ್ಲಿ 9 ವಿಕೆಟ್ಗೆ 145
(ಆಮ್ಲಾ 43, ಡುಪ್ಲೆಸಿಸ್ 24, ಡಿವಿಲಿಯರ್ಸ್ 21, ಮಲಿಕ್ 19ಕ್ಕೆ5)
ನೆದರ್ಲ್ಯಾಂಡ್ಸ್ 18.4 ಓವರ್ಗಳಲ್ಲಿ 139
(ಮೈಬರ್ಗ್ 51, ಟಾಮ್ ಕೂಪರ್ 16, ವೆಸ್ಲೆ ಬರೆಸ್ಸಿ 14, ಇಮ್ರಾನ್ ತಾಹಿರ್ 21ಕ್ಕೆ4)
ಅಂಕಪಟ್ಟಿ
ಗುಂಪು-1
ತಂಡ ಪಂದ್ಯ ಜಯ ಸೋಲು ಅಂಕ ರನ್ಸರಾಸರಿ
ಶ್ರೀಲಂಕಾ 2 2 0 4 3.225
ದಕ್ಷಿಣ ಆಫ್ರಿಕಾ 3 2 1 4 0.050
ನ್ಯೂಜಿಲೆಂಡ್ 2 1 1 2 0.276
ಇಂಗ್ಲೆಂಡ್ 1 0 1 0 -1.688
ನೆದರ್ಲ್ಯಾಂಡ್ಸ್ 1 0 1 0 -6.050
ಗುಂಪು-2
ತಂಡ ಪಂದ್ಯ ಜಯ ಸೋಲು ಅಂಕ ರನ್ಸರಾಸರಿ
ಭಾರತ 2 2 0 4 0.363
ವೆಸ್ಟ್ ಇಂಡೀಸ್ 2 1 1 2 1.752
ಪಾಕಿಸ್ತಾನ 2 1 1 2 0.077
ಆಸ್ಟ್ರೇಲಿಯಾ 1 0 1 0 -0.800
ಬಾಂಗ್ಲಾದೇಶ 1 0 1 0 -3.650