ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಬಿಸಿಸಿಐ: ಶ್ರೀನಿ ಔಟ್ ಸುನಿಗೆ ಸ್ಥಾನ

ಐಪಿಎಲ್‌ನ ಭ್ರಷ್ಟಾಚಾರದ ತನಿಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ...

Rashmi Kasaragodu
Updated On : 29 Mar 2014, 2:31 am

ನವದೆಹಲಿ: ಐಪಿಎಲ್‌ನ ಭ್ರಷ್ಟಾಚಾರದ ತನಿಖೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದು ಹಾಕಲಾಗಿದೆ. ಅವರ ಸ್ಥಾನದಲ್ಲಿ 2014ರ ಐಪಿಎಲ್ ಪಂದ್ಯಾವಳಿ ಮುಕ್ತಾಯದವರೆಗೆ ಸುನಿಲ್ ಗವಾಸ್ಕರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.      ನಂತರ ಬಿಸಿಸಿಐ ಉಪಾಧ್ಯಕ್ಷ ಶಿವಾಲಾಲ್ ಯಾದವ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳಬೇಕು ಎಂದು ಆದೇಶ ನೀಡಿದೆ.   ನ್ಯಾ. ಮುಕುಲ್ ಮುದ್ಗಲ್ ಸಮಿತಿ ನೀಡಿದ ವರದಿಯ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ಮಧ್ಯಂತರ ಆದೇಶ ನೀಡಿದೆ.
ಎಂಟು ತಂಡಗಳಿಗೂ ಅನುಮತಿ: ಐಪಿಎಲ್‌ನ 7ನೇ ಆವೃತ್ತಿಯಲ್ಲಿ ಎಲ್ಲ 8 ತಂಡಗಳೂ ಭಾಗವಹಿಸಲು ನ್ಯಾಯಾಲಯ ಅನುಮತಿ ನೀಡಿದೆ. ಗುರುವಾರ ನಡೆದ ವಿಚಾರಣೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳಿಗೆ ಐಪಿಎಲ್‌ನಲ್ಲಿ ಭಾಗವಹಿಸಲು ಅನುಮತಿ ನೀಡಬಾರದು ಎಂದು ಸೂಚಿಸಿತ್ತು. ಆದರೆ, ಶುಕ್ರವಾರ ಎಲ್ಲ ತಂಡಗಳೂ ಭಾಗವಹಿಸಲು ಅನುಮತಿ ನೀಡಿದೆ. ಅಲ್ಲದೆ, ಯಾವುದೇ ಆಟಗಾರನನ್ನು ಪಂದ್ಯಾವಳಿಯಿಂದ ಕೈಬಿಡಲು ಕೋರ್ಟ್ ನಿರಾಕರಿಸಿದೆ.
ಪ್ರಸ್ತುತ ಐಪಿಎಲ್ ವೀಕ್ಷಕ ವಿಶ್ಲೇಷಣೆಕಾರರಾಗಿರುವ ಗವಾಸ್ಕರ್ ಅವರಿಗೆ, ಆ ಜವಾಬ್ದಾರಿಯ ಒಪ್ಪಂದದಿಂದ ಹೊರಬರುವಂತೆ ತಿಳಿಸಿದೆ. ಅಲ್ಲದೆ, ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಗವಾಸ್ಕರ್ ಅವರಿಗೆ ಸೂಕ್ತ ಸಂಭಾವನೆ ನೀಡಲು ಬಿಸಿಸಿಐಗೆ ಸೂಚಿಸಿದೆ.ಆದರೆ, ಶ್ರೀನಿವಾಸನ್ ಅವರು ಐಸಿಸಿ ಪ್ರವೇಶಿಸಲು ಯಾವುದೇ ರೀತಿಯಾದ ತೊಂದರೆಗಳನ್ನು ಸುಪ್ರೀಂ ಕೋರ್ಟ್ ಮಾಡಿಲ್ಲ.
ಇಂಡಿಯಾ ಸಿಮೆಂಟ್ ಉದ್ಯೋಗಿಗಳಿಗೆ ಬಿಸಿಸಿಐನಲ್ಲಿ ಜಾಗವಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ. ಆ ಸಂಸ್ಥೆಯ ಯಾವುದೇ ಉದ್ಯೋಗಿ ಬಿಸಿಸಿಐನ ಯಾವುದೇ ರೀತಿಯ ಕರ್ತವ್ಯದಲ್ಲಿ ಭಾಗವಹಿಸಬಾರದು ಎಂದಿದೆ.
ಐಪಿಎಲ್‌ನ 7ನೇ ಆವೃತ್ತಿಯ ಉದ್ಘಾಟನಾ ದಿನವಾದ ಏಪ್ರಿಲ್ 16ರಂದು ಮುಂದಿನ ವಿಚಾರಣೆ ನಡೆಯಲಿದೆ. ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಹೊರಬರುವರೆಗೂ ಮಧ್ಯಂತರ ಆದೇಶ ಜಾರಿಯಲ್ಲಿರಲಿದೆ.'ಸುನಿಲ್ ಗವಾಸ್ಕರ್ ಅವರು ಕ್ರಿಕೆಟ್ ಆಟಗಾರನಾಗಿ ದೊಡ್ಡ ಹೆಸರು ಮಾಡಿದ್ದಾರೆ. ಅಲ್ಲದೆ, ಭಾರತ ತಂಡದ ನಾಯಕನಾಗಿ ದೀರ್ಘ ಕಾಲ ಕಾರ್ಯನಿರ್ವಹಿಸಿದ್ದಾರೆ. ಕ್ರಿಕೆಟ್ ಚಟುವಟಿಕೆಗಳಿಗೆ ಸಂಬಂಧಿಸಿದಂತೆ  ಹೆಚ್ಚಿನ ಅನುಭವವನ್ನೂ ಹೊಂದಿದ್ದಾರೆ. ಹೀಗಾಗಿ, 2014 ಐಪಿಎಲ್ ಪಂದ್ಯಾವಳಿಯಲ್ಲಿ ಬಿಸಿಸಿಐ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲು ನಾವು ಅವರನ್ನು ನೇಮಕ ಮಾಡಿದ್ದೇವೆ' ಎಂದು ನ್ಯಾಯಮೂರ್ತಿ ಎ.ಕೆ ಪಟ್ನಾಯಕ್ ಮತ್ತು ಎಫ್.ಎಂ ಇಬ್ರಾಹಿಮ್ ಕಾಲಿಫುಲ್ಲಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿತು.
ಶ್ರೀನಿ ವಿರುದ್ಧ ಗಂಭೀರ ಆರೋಪ: ಪ್ರಕರಣದಲ್ಲಿ ಭಾಗಿಯಾಗಿರುವ ಮೇಯಪ್ಪನ್ ಸಂಬಂಧಿಯಾಗಿರುವ ಎನ್. ಶ್ರೀನಿವಾಸನ್ ಅವರು ಬಿಸಿಸಿಐ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯದಿದ್ದರೆ, ಐಪಿಎಲ್ ಭ್ರಷ್ಚಾಚಾರದ ಕುರಿತು ಮುಕ್ತ ಮತ್ತು ನ್ಯಾಯ ಸಮ್ಮತ ತನಿಖೆ ನಡೆಸಲು ಸಾಧ್ಯವೇ ಇಲ್ಲ, ಎಂದು ಮುಕುಲ್ ಮುದ್ಗಲ್ ಸಮಿತಿ ತನ್ನ ವರದಿಯಲ್ಲಿ ತಿಳಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಮಾನ ತೆಗೆದುಕೊಂಡಿದೆ.
100 ಪುಟಗಳ ಮುದ್ಗಲ್ ಸಮಿತಿಯ ವರದಿಯಲ್ಲಿ ಹಲವಾರು ಗಂಭೀರ ಆರೋಪಗಳನ್ನು ಮಾಡಲಾಗಿದ್ದು, ಭಾರತ ತಂಡದ ಪರ ಆಡಿದ 6 ಆಟಗಾರರು ಫಿಕ್ಸಿಂಗ್ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಭ್ರಷ್ಚಾಚಾರದಲ್ಲಿ ತೊಡಗಿರುವ ಬಗ್ಗೆ ಉಲ್ಲೇಖಿಸಲಾಗಿದೆ. ಇದು ಅಂತಿಮವಾಗಿ ನಡೆಯುವ ತನಿಖೆಯಲ್ಲಿ ಸ್ಪಷ್ಟವಾಗಲಿದೆ.
 


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement