ನಾಯಕತ್ವ ತ್ಯಜಿಸುವ ಧೋನಿ?
ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ...
ನವದೆಹಲಿ: ಬೆಟ್ಟಿಂಗ್ ಮತ್ತು ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದಿರುವ ಹಿನ್ನೆಲೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿಗೆ ತೀವ್ರ ಬೇಸರ ಕಾಡಿರಬಹುದು ಎನ್ನಲಾಗುತ್ತಿದೆ.
ಕಾರಣ, ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ತ್ಯಜಿಸಲು ಮಹೇಂದ್ರ ಸಿಂಗ್ ಧೋನಿ ಅವರು ಚಿಂತನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಫಿಕ್ಸಿಂಗ್ ಪ್ರಕರಣದಲ್ಲಿ ತಮ್ಮ ಹೆಸರು ತಳಕು ಹಾಕಿಕೊಂಡ ಹಿನ್ನೆಲೆಯಲ್ಲಿ ಧೋನಿ ಮುನಿಸಿಕೊಡಿದ್ದು, ತಂಡದ ಮಾಲೀಕರಾದ ಎನ್. ಶ್ರೀನಿವಾಸನ್ ಅವರೊಂದಿಗೆ ನಾಯಕತ್ವ ತ್ಯಜಿಸುವ ಕುರಿತು ಮಾತುಕತೆ ನಡೆಸಿದ್ದಾರೆ ಎಂಬ ವದಂತಿಗಳು ಹರಡಿವೆ. ನಾಯಕತ್ವ ತ್ಯಜಿಸುವುದರೊಂದಿಗೆ ಇಂಡಿಯಾ ಸಿಮೆಂಟ್ಸ್ನ ಉಪಾಧ್ಯಕ್ಷ ಸ್ಥಾನ ತ್ಯಜಿಸಲೂ ಧೋನಿ ಸಜ್ಜಾಗಿದ್ದಾರೆ ಎನ್ನಲಾಗಿದೆ.
ಧೋನಿ ಅವರು ಸ್ವಹಿತಾಸಕ್ತಿಯಲ್ಲಿ ತೊಡಗಿದ್ದಾರೆ ಎಂದು ಈ ಹಿಂದೆ ಆರೋಪ ಮಾಡಲಾಗಿತ್ತು. ಸಿಎಸ್ಕೆ ತಂಡದ ಮಾಲೀಕತ್ವ ಹೊಂದಿರುವ ಇಂಡಿಯಾ ಸಿಮೆಂಟ್ಸ್ನಲ್ಲಿ ಧೋನಿ ಉದ್ಯೋಗಿಯಾಗಿದ್ದಾರೆ. ಶ್ರೀನಿವಾಸನ್ ಅವರು ಈ ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ.
ಪ್ರತಿ ಬಾರಿಯಂತೆ ಪಂದ್ಯದ ನಂತರ ಮಾತನಾಡುವಂತೆ, ಬಾಂಗ್ಲಾ ವಿರುದ್ಧದ ಪಂದ್ಯದ ನಂತರ ಧೋನಿ ನನ್ನೊಂದಿಗೆ ಮಾತನಾಡಿದ್ದಾರೆ. ಆದರೆ, ಚೆನ್ನೈ ತಂಡದ ನಾಯಕತ್ವ ತ್ಯಜಿಸುವ ಕುರಿತು ಧೋನಿ ಯಾವುದೇ ರೀತಿಯ ಮಾತುಕತೆ ನಡೆಸಿಲ್ಲ ಎಂದು ಶ್ರೀನಿವಾಸನ್ ತಿಳಿಸಿದ್ದಾರೆ.
ಐಪಿಎಲ್ನ ಕಳೆದ ಆರು ಆವೃತ್ತಿಯಲ್ಲಿ ಧೋನಿ ಚೆನ್ನೈ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ಅಲ್ಲದೆ, ಅವರ ನಾಯಕತ್ವದಲ್ಲೇ ಚೆನ್ನೈ ಎರಡು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ. ಚಾಂಪಿಯನ್ಸ್ ಟ್ರೋಫಿಯಲ್ಲೂ ಚೆನ್ನೈ ತಂಡವನ್ನು ಧೋನಿ ಮುನ್ನಡೆಸಿದ್ದಾರೆ.
ಗುರುವಾರ ಸುಪ್ರೀಂ ಕೋರ್ಟ್ನಲ್ಲಿ ಐಪಿಎಲ್ ಫಿಕ್ಸಿಂಗ್ ಪ್ರಕರಣದ ಕುರಿತು ವಿಚಾರಣೆ ನಡೆಸುತ್ತಿದ್ದಾಗ ಧೋನಿ ಹೆಸರು ಪ್ರಸ್ತಾಪವಾಗಿತ್ತು.
'ಧೋನಿ ಸುಪ್ರೀಂ ಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಎದುರು, ಚೆನ್ನೈ ತಂಡದ ಪ್ರಿನ್ಸಿಪಾಲ್ ಆಗಿದ್ದ ಗುರುನಾಥ್ ಮೇಯಪ್ಪನ್ ಬಗ್ಗೆ ತಪ್ಪು ಮಾಹಿತಿ ನೀಡಿದ್ದಾರೆ' ಎಂದು ಬಿಹಾರ ಕ್ರಿಕೆಟ್ ಸಂಸ್ಥೆ ಪರ ವಾದಿಸಿದ ವಕೀಲ ಹರೀಶ್ ಸಾಳ್ವೆ ಸುಪ್ರೀಂ ಕೋರ್ಟ್ನಲ್ಲಿ ವಾದಿಸಿದ್ದರು.
ಆದರೆ, ಶುಕ್ರವಾರ ನಡೆದ ವಿಚಾರಣೆ ಸಂದರ್ಭ ಸುಪ್ರೀಂ ಕೋರ್ಟ್ ಎದುರಿಗೆ ಬಿಸಿಸಿಐ ಪರ ವಕೀಲರು, ಧೋನಿ ತನಿಖಾ ತಂಡದ ಎದುರು ಯಾವುದೇ ರೀತಿಯ ಸುಳ್ಳು ಹೇಳಿಲ್ಲ. ಧೋನಿ ಸುಳ್ಳು ಹೇಳಿದ್ದಾರೆ ಎಂದು ಹೇಳುವುದೇ ಅಪರಾಧ' ಎಂದು ಅವರು ಧೋನಿಯನ್ನು ಸಮರ್ಥಿಸಿಕೊಂಡಿದ್ದರು.