ವಿಶ್ವಾಸದಲ್ಲಿ ಭಾರತ, ಒತ್ತಡದಲ್ಲಿ ಆಸೀಸ್
ಹ್ಯಾಟ್ರಿಕ್ ಜಯ ಸಾಧಿಸಿ ಉಪಾಂತ್ಯಕ್ಕೆ ಸ್ಥಾನ ಭದ್ರಪಡಿಸಿಕೊಳ್ಳುವ ಮೂಲಕ ತುಂಬು ವಿಶ್ವಾಸದಲ್ಲಿರುವ ಭಾರತ ತಂಡ,...
ಮಿರ್ಪುರ: ಹ್ಯಾಟ್ರಿಕ್ ಜಯ ಸಾಧಿಸಿ ಉಪಾಂತ್ಯಕ್ಕೆ ಸ್ಥಾನ ಭದ್ರಪಡಿಸಿಕೊಳ್ಳುವ ಮೂಲಕ ತುಂಬು ವಿಶ್ವಾಸದಲ್ಲಿರುವ ಭಾರತ ತಂಡ, ಭಾನುವಾರ ನಡೆಯಲಿರುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಇನ್ನು ಗೆಲವಿನ ಹಳಿಗೆ ಮರಳಲು ಒದ್ದಾಡುತ್ತಿರುವ ಆಸ್ಟ್ರೇಲಿಯಾ ತಂಡ ಸೋಲಿನ ಭೀತಿಯಲ್ಲಿದೆ.
ಫಾರ್ಮ್ನಲ್ಲಿರುವ ಭಾರತ ಸತತವಾಗಿ ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶದ ಮೇಲೆ ಆಕರ್ಷಕ ಜಯ ಸಾಧಿಸಿದೆ. ಹೀಗಾಗಿ ಹೆಚ್ಚಿನ ಆತ್ಮವಿಶ್ವಾಸದಲ್ಲಿರುವ ತಂಡ ಈಗ ಸೋಲಿನ ಸುಳಿಯಲ್ಲಿ ಸಿಲುಕಿರುವ ಆಸ್ಟ್ರೇಲಿಯಾಕ್ಕೆ ದೊಡ್ಡ ಸವಾಲೊಡ್ಡಿದೆ. ಆಸ್ಟ್ರೇಲಿಯಾ, ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಆಡಿದ ಎರಡೂ ಪಂದ್ಯಗಳಲ್ಲೂ ಸೋಲನುಭವಿಸಿದೆ. ಹೀಗಾಗಿ ಸ್ಪರ್ಧೆಯಿಂದ ಹೊರಗುಳಿದಿದೆ.
ಪಾಕಿಸ್ತಾನ ಹಾಗೂ ವಿಂಡೀಸ್ ಮಾತ್ರ ಉಪಾಂತ್ಯಕ್ಕೆ ಅರ್ಹತೆ ಪಡೆಯುವ ಅವಕಾಶ ಹೊಂದಿವೆ. ಆದರೆ ಆಸೀಸ್ ಪಾಲಿಗೆ ಈ ಅವಕಾಶವಿಲ್ಲ. ಹಾಗಾಗಿ ಗೌರವ ಉಳಿಸಿಕೊಳ್ಳುವ ಸಲುವಾಗಿ ಆಸೀಸ್ಗೆ ಈ ಪಂದ್ಯದ ಗೆಲವು ಅನಿವಾರ್ಯ.
ಆದು ಸಾಧ್ಯವಾಗಬೇಕಾದರೆ, ಜಾರ್ಜ್ ಬೇಯ್ಲಿ ನಾಯಕತ್ವದ ತಂಡ ಮೊದಲ ಭಾರತದ ವಿರುದ್ಧ ಜಯ ಕಾಣಬೇಕಿದೆ. ಭಾರತ ತಂಡ ಆರಂಭದಿಂದಲೂ ಪ್ರತಿಯೊಂದು ಪಂದ್ಯದಲ್ಲೂ ಆಲ್ರೌಂಡ್ ಪ್ರದರ್ಶನ ನೀಡುತ್ತಿದೆ.
ಅಲ್ಲದೆ, ತನ್ನ ಪ್ರದರ್ಶನದಲ್ಲಿ ಚೇತರಿಕೆಯನ್ನೂ ಕಂಡಿದೆ. ಆದರೆ, ಆಸ್ಟ್ರೇಲಿಯಾ ಟಿ20 ಮಾದರಿಗೆ ಬೇಕಾದ ಪ್ರದರ್ಶನ ನೀಡುವಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡಿದೆ.ಭಾರತ ತಂಡಕ್ಕೆ ಸ್ಪಿನ್ ಬೌಲರ್ಗಳೇ ಪ್ರಮುಖ ಶಕ್ತಿಯಾಗಿದ್ದಾರೆ.
ಎಡಗೈ ಸ್ಪಿನ್ನರ್ ರವಿಂದ್ರ ಜಡೇಜಾ ವಿಕೆಟ್ ಪಡೆದರೂ, ರನ್ ಸೋರಿಕೆ ಮಾಡುವ ಮೂಲಕ ಕೊಂಚ ದುಬಾರಿ ಎನಿಸಿದ್ದಾರೆ. ರವಿಚಂದ್ರನ್ ಅಶ್ವಿನ್ ಮತ್ತು ಅಮಿತ್ ಮಿಶ್ರಾ ಇದುವರೆಗೂ ಸ್ಥಿರ ಪ್ರದರ್ಶನವನ್ನು ಮುಂದುವರಿಸಿಕೊಂಡು ಬಂದಿದ್ದಾರೆ.
ಆರ್. ಅಶ್ವಿನ್ ಮೂರು ಪಂದ್ಯಗಳಿಂದ ಕೇವಲ ಮೂರು ವಿಕೆಟ್ ಪಡೆದಿದ್ದಾರೆ. ಆದರೆ, ರನ್ ನೀಡುವಲ್ಲಿ ತುಂಬಾ ನಿಯಂತ್ರಣ ಸಾಧಿಸಿದ್ದಾರೆ. ಇದುವರೆಗೂ 12 ಓವರ್ ಬೌಲಿಂಗ್ ಮಾಡಿರುವ ಅವರು 5.16 ಎಕಾನಮಿಯಲ್ಲಿ ರನ್ ನೀಡಿದ್ದಾರೆ. ಈ ಸಾಧನೆ ಯಾವುದೇ ತಂಡದ ನಾಯಕನನ್ನು ಹೆಮ್ಮೆಪಡುವಂತೆ ಮಾಡುವಂತಹದ್ದಾಗಿದೆ.
ನಿಧಾನಗತಿಯ ಬೌಲರ್ಗಳಲ್ಲಿ ಶ್ರೇಷ್ಠ ಎಕಾನಮಿಯನ್ನು ಅವರು ಹೊಂದಿದ್ದಾರೆ. ಇನ್ನೂ ಮೂರು ಪಂದ್ಯಗಳಿಂದ 7 ವಿಕೆಟ್ ಕಬಳಿಸಿರುವ ಅಮಿತ್ ಮಿಶ್ರಾ ತಂಡಕ್ಕೆ ತಕ್ಕ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ. ಅವರು ಎಸೆಯುವ ಗೂಗ್ಲಿಯನ್ನು ಹೆಚ್ಚಿನ ಬ್ಯಾಟ್ಸ್ಮನ್ಗಳಿಗೆ ಅಂದಾಜು ಮಾಡಲೂ ಸಾಧ್ಯವಾಗುತ್ತಿಲ್ಲ.
ಮಿಶ್ರಾ ಇದುವರೆಗೂ ಮಾಡಿರುವ ಬೌಲಿಂಗ್ನಲ್ಲಿ 5.50 ಎಕಾನಮಿಯನ್ನು ಕಾಪಾಡಿಕೊಂಡು ಬಂದಿದ್ದಾರೆ. ಇನ್ನು ನಾಯಯಕ ಮಹೇಂದ್ರ ಸಿಂಗ್ ಧೋನಿ ಅವರು ತಂಡವನ್ನು ಅದ್ಭುತವಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ಅವರ ಬೌಲಿಂಗ್ ಕಾರ್ಯತಂತ್ರ ವಿಶೇಷವಾಗಿದೆ. ಆದರೆ, ವೇಗಿ ಮೊಹ್ಮದ್ ಶಮಿ ಅವರು 9 ಎಕಾನಮಿ ರೇಟ್ನಲ್ಲಿ ಬೌಲಿಂಗ್ ಮಾಡಿ ದುಬಾರಿ ಎನಿಸಿದ್ದಾರೆ.
ಶಮಿ ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿ ಬೌಲಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಬ್ಬ ವೇಗಿ ಭುವನೇಶ್ವರ ಕುಮಾರ್ ಮಾತ್ರ ತಂಡಕ್ಕೆ ನೆರವಾಗುವಂತ ರೀತಿಯಲ್ಲಿ ಬೌಲಿಂಗ್ ಪ್ರದರ್ಶಿಸುತ್ತಿದ್ದಾರೆ.
ಇದುವರೆಗೂ 9 ಓವರ್ಗಳ ಬೌಲಿಂಗ್ ಪ್ರದರ್ಶಿಸಿರುವ ಭುವನೇಶ್ವರ ಓವರ್ ಒಂದಕ್ಕೆ 5 ರನ್ ನೀಡಿದ್ದಾರೆ. ಅಲ್ಲದೆ ವೆಸ್ಟ್ ಇಂಡೀಸ್ ವಿರುದ್ಧ 3 ಓವರ್ಗಳಲ್ಲಿ ಕೇವಲ 3 ರನ್ ನೀಡಿ ಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದ್ದಾರೆ. 'ನೀವು ನಮ್ಮ ಬೌಲಿಂಗ್ ನೋಡಿದರೆ, ಬ್ಯಾಟಿಂಗ್ಗೆ ಅನುಕೂಲವಾಗಿರುವ ಪಿಚ್ನಲ್ಲಿ ನಾವು ಸೂಕ್ತ ಬೌಲಿಂಗ್ ಪ್ರದರ್ಶಿಸಿಲ್ಲ. ಪಿಚ್ಗಳು ಸ್ಪಿನ್ನರ್ಗಳಿಗೆ ಅನುಕೂಲವಾಗುತ್ತಿಲ್ಲ ಎಂದು ನನಗೆ ಅನಿಸುತ್ತಿದೆ. ಕಾರಣ ಸುರೇಶ್ ರೈನಾ ಹೊರತುಪಡಿಸಿ ನಮ್ಮ ಅರೆಕಾಲಿಕ ಬೌಲರ್ಗಳು ಒದ್ದಾಡುತ್ತಿದ್ದಾರೆ. ಹೀಗಾಗಿ ನಾವು ಬೌಲಿಂಗ್ನಲ್ಲಿ ಒದ್ದಾಡುತ್ತಿದ್ದೇವೆ' ಎಂದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಭಾರತದ ಬೌಲರ್ಗಳು ಪ್ರದರ್ಶನ ನೀಡಿದಂತೆ, ಬ್ಯಾಟ್ಸ್ಮನ್ಗಳು ಅದ್ಭುತ ಪ್ರದರ್ಶನವನ್ನೇ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರು ತಲಾ ಎರಡು ಅರ್ಧ ಶತಕ ದಾಖಲಿಸಿದ್ದಾರೆ. ಮೂರು ಪಂದ್ಯಗಳಿಂದ ಕೊಹ್ಲಿ 147 ರನ್ ಗಳಿಸಿದರೆ, ರೋಹಿತ್ 142 ರನ್ ಗಳಿಸಿದ್ದಾರೆ.
ಸುರೇಶ್ ರೈನಾ ಅವರು ಆಕರ್ಷಕ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ. ಆದರೆ, ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಅವರು ವೈಫಲ್ಯ ಕಾಣುತ್ತಿದ್ದಾರೆ. ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಬಾಂಗ್ಲಾದೇಶದ ವಿರುದ್ಧ ನಡೆದ ಪಂದ್ಯದಲ್ಲಿ ತಕ್ಕ ಬ್ಯಾಟಿಂಗ್ ಪ್ರದರ್ಶಿಸಿದ್ದು, ಆಸ್ಟ್ರೇಲಿಯಾದ ಡಗ್ ಬೋಲಿಂಜರ್, ಮಿಚೆಲ್ ಸ್ಟಾರ್ಕ್ ಹಾಗೂ ಫಾಕ್ನರ್ಗೆ ಅಗ್ನಿ ಪರೀಕ್ಷೆ ಎದುರಾಗಿದೆ. ಆಸ್ಟ್ರೇಲಿಯಾಕ್ಕೆ ಅಂತಿಮ ಓವರ್ಗಳಲ್ಲಿ ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ಭಾರತ ತಂಡ ತಮ್ಮ ಗೆಲವಿನ ಯಾತ್ರೆ ಮುಂದುವರಿಸಲು ಎದುರು ನೋಡುತ್ತಿದ್ದರೆ, ಆಸೀಸ್ಗೆ ಮಾನ ಉಳಿಸಿಕೊಳ್ಳುವ ಸವಾಲಾಗಿದೆ.
ತಂಡಗಳು
ಭಾರತ
ಮಹೇಂದ್ರ ಸಿಂಗ್ ಧೋನಿ (ನಾಯಕ), ವರುಣ್ ಎರಾನ್, ಸ್ಟುವರ್ಟ್ ಬಿನ್ನಿ, ಶಿಖರ್ ಧವನ್, ರವಿಂದ್ರ ಜಡೇಜಾ, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ, ಅಮಿತ್ ಮಿಶ್ರಾ, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ಸುರೇಶ್ ರೈನಾ, ಮೊಹ್ಮದ್ ಶಮಿ, ಮೋಹಿತ್ ಶರ್ಮಾ, ರೋಹಿತ್ ಶರ್ಮಾ, ಯುವರಾಜ್ ಸಿಂಗ್.
ಆಸ್ಟ್ರೇಲಿಯಾ
ಜಾರ್ಜ್ ಬೇಯ್ಲಿ (ನಾಯಕ), ಎರಾನ್ ಫಿಂಚ್, ಡೇವಿಡ್ ವಾರ್ನರ್, ಶೇನ್ ವ್ಯಾಟ್ಸನ್, ಜಾರ್ಜ್ ಬೇಯ್ಲಿ, ಗ್ಲೆನ್ ಮ್ಯಾಕ್ಸ್ವೆಲ್, ಬ್ರಾಡ್ ಹಾಡ್ಜ್, ನಥಾನ್ ಕಾಲ್ಟಿಯರ್-ನೀಲ್, ಮಿಚೆಲ್ ಸ್ಟಾರ್ಕ್, ಡಗ್ ಬೊಲಿಂಜರ್, ಜೇಮ್ಸ್ ಫಾಕ್ನರ್, ಬ್ರಾಡ್ ಹಾಗ್, ಜೇಮ್ಸ್ ಮುರಿಹೆಡ್, ಕೆಮರೂನ್ ವೈಟ್, ಡಾನ್ ಕ್ರಿಸ್ಟಿಯಾನ್.