ಮಲೇಷ್ಯಾದಲ್ಲಿ ಹ್ಯಾಮಿಲ್ಟನ್ ದರ್ಬಾರ್
ಮರ್ಸಿಡೀಸ್ ಚಾಲಕ ಇಂಗ್ಲೆಂಡ್‌ನ ಲೂಯಿಸ್ ಹ್ಯಾಮಿಲ್ಟನ್ ಅವರು ಮಲೇಷ್ಯಾ ಗ್ರ್ಯಾನ್ ಪ್ರೀಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ...
ಸೆಪಾಂಗ್ (ಮಲೇಷ್ಯಾ): ಮರ್ಸಿಡೀಸ್ ಚಾಲಕ ಇಂಗ್ಲೆಂಡ್‌ನ ಲೂಯಿಸ್ ಹ್ಯಾಮಿಲ್ಟನ್ ಅವರು ಮಲೇಷ್ಯಾ ಗ್ರ್ಯಾನ್ ಪ್ರೀಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡರು. ಅರ್ಹತಾ ಸುತ್ತಿನಲ್ಲಿ ಪೋಲ್ ಪೋಸಿಷನ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಹ್ಯಾಮಿಲ್ಟನ್ ಅಂತಿಮವಾಗಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಅಚ್ಚರಿಯ ವಿಷಯವೆಂದರೆ ಹ್ಯಾಮಿಲ್ಟನ್ ತಮ್ಮ ತಂಡದ ಇನ್ನೊಬ್ಬ ಆಟಗಾರ ನಿಕೋ ರೋಸ್ಬರ್ಗ್ ಅವರನ್ನು ಹಿಂದಿಕ್ಕಿ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡಿದ್ದರು. ನಿಕೋ ರೋಸ್ಬರ್ಗ್ 2ನೇ ಸ್ಥಾನ ಪಡೆದರೆ, ನಾಲ್ಕು ಬಾರಿ ವಿಶ್ವ ಚಾಂಪಿಯನ್ ರೆಡ್‌ಬುಲ್ ಚಾಲಕ ಸೆಬಾಸ್ಟಿಯನ್ ವೆಟಲ್ ಅವರು 3ನೇ ಸ್ಥಾನ ಪಡೆದುಕೊಂಡರು.
1955ರ ನಂತರ ಇದೇ ಮೊದಲ ಬಾರಿಗೆ ಮರ್ಸಿಡಿಸ್ ಚಾಲಕರು ಮೊದಲ ಮತ್ತು ದ್ವಿತೀಯ ಸ್ಥಾನ ತಮ್ಮದಾಗಿಸಿಕೊಂಡರು. ಇದರೊಂದಿಗೆ, ಫಾರ್ಮುಲಾ 1ನಲ್ಲಿ ಮರ್ಸಿಡಿಸ್ ಹೊಸ ಯುಗ ಆರಂಭಿಸಿದೆ. ಫೆರಾರಿಯ ಫೆರ್ನಾಂಡೋ ಅಲಾನ್ಸೋ ಅವರು 4ನೇ ಸ್ಥಾನ ಪಡೆದರು. ಹ್ಯಾಮಿಲ್ಟನ್ ಅವರು ತಮ್ಮ ವಿಜಯವನ್ನು ನಿಗೂಢವಾಗಿ ಕಣ್ಮರೆಯಾದ ಎಂಎಚ್370 ಮಲೇಷ್ಯಾ ವಿಮಾನದಲ್ಲಿ ಬಲಿಯಾದವರಿಗೆ ಅರ್ಪಿಸಿದ್ದಾರೆ.
ಫೋರ್ಸ್ ಇಂಡಿಯಾಕ್ಕೆ 5ನೇ ಸ್ಥಾನ: ಸಹರಾ ಫೋರ್ಸ್ ಇಂಡಿಯಾದ ಚಾಲಕ ನಿಕೋ ಹಲ್ಕನ್‌ಬರ್ಗ್ ಅವರು 5ನೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾದರು. ಆದರೆ, ತಂಡದ ಇನ್ನೊಬ್ಬ ಚಾಲಕ ಸೆರ್ಗಿಯೋ ಪೆರೆಜ್ ಅವರು ರೇಸ್‌ಗೂ ಮುನ್ನವೇ ಸ್ಪರ್ಧೆ ಮುಕ್ತಾಯಗೊಳಿಸಿದ್ದು ತಂಡಕ್ಕೆ ಬೇಸರ ಉಂಟುಮಾಡಿತು. ಕಾರಿನಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಪೆರೆಜ್ ಸ್ಪರ್ಧೆಯಿಂದ ಹಿಂದೆ ಸರಿದರು.