ಟೆಸ್ಟ್‌ಗೆ ಕಾಂಗರೂ ಅಧಿಪತಿ, ಟಿ20ಗೆ ಭಾರತವೇ ಟೈಗರ್
ದುಬೈ: ಟೆಸ್ಟ್ ಕ್ರಿಕೆಟ್‌ನಲ್ಲಿ ಮತ್ತೆ ಗೆಲವಿನ ನಾಗಾಲೋಟದಲ್ಲಿ ತೇಲುತ್ತಿರುವ ಆಸ್ಟ್ರೇಲಿಯಾ ತಂಡ ಐದು ವರ್ಷಗಳ ನಂತರ ಮತ್ತೆ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.
ವಾರ್ಷಿಕ ಐಸಿಸಿ ರ್ಯಾಂಕಿಂಗ್ ಪರಿಷ್ಕೃತ ಪಟ್ಟಿ ಬಿಡುಗಡೆಯಾದ ನಂತರ ಆಸ್ಟ್ರೇಲಿಯಾ ತಂಡ ಟೆಸ್ಟ್ ಹಾಗೂ ಏಕದಿನ ರ್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.
ಈ ಮೂಲಕ 2008ರ ಡಿಸೆಂಬರ್‌ನಂತರ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಟೆಸ್ಟ್ ಹಾಗೂ ಏಕದಿನ ಮಾದರಿಯಲ್ಲಿ ಅಗ್ರಸ್ಥಾನಕ್ಕೇರಿದ ಸಾಧನೆ ಮಾಡಿದೆ.
ಪರಿಷ್ಕೃತ ಟೆಸ್ಟ್ ರ್ಯಾಕಿಂಗ್ ಪಟ್ಟಿಯಲ್ಲಿ ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ 123 ಅಂಕಗಳನ್ನು ಪಡೆದಿವೆಯಾದರೂ ಮ್ಯಾಚ್‌ಪಾಯಿಂಟ್‌ನಲ್ಲಿ ಆಸ್ಟ್ರೇಲಿಯಾ ಮೇಲುಗೈ ಸಾಧಿಸಿರುವ ಹಿನ್ನಲೆಯಲ್ಲಿ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
ಕಳೆದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧದ ಕ್ಲೀನ್‌ಸ್ವೀಪ್ ಗೆಲವು ಹಾಗೂ ದಕ್ಷಿಣ ಆಫ್ರಿಕಾ ತಂಡ ಕಳೆದ ಟೆಸ್ಟ್ ಸರಣಿಯಲ್ಲಿ ಸೋಲನುಭವಿಸಿದ್ದು, ಆಸ್ಟ್ರೇಲಿಯಾ ತಂಡ ಅಗ್ರಸ್ಥಾನಕ್ಕೇರಲು ಹಾದಿ ಸುಗಮವಾಗುವಂತೆ ಮಾಡಿದೆ.
ಇನ್ನು ಟೆಸ್ಟ್ ರ್ಯಾಂಕಿಂಗ್‌ನಲ್ಲಿ ಇಗ್ಲೆಂಡ್ ತಂಡ 104 ಅಂಕಗಳೊಂದಿಗೆ ತೃತೀಯ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಪಾಕಿಸ್ತಾನ ಹಾಗೂ ಭಾರತ ಕ್ರಮವಾಗಿ 103 ಹಾಗೂ 102 ಅಂಕಗಳನ್ನು ಪಡೆಯುವ ಮೂಲಕ ನಾಲ್ಕನೇ ಹಾಗೂ ಐದನೇ ಸ್ಥಾನದಲ್ಲಿದೆ.
ಇನ್ನು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ತಂಡ 115 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಭಾರತ ತಂಡ 112 ಅಂಕಗಳೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಶ್ರೀಲಂಕಾ 11 ಅಂಕಗಳೊಂದಿಗೆ ತೃತೀಯ ಹಾಗೂ ಇಂಗ್ಲೆಂಡ್ 110 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.
ಟಿ20ಯಲ್ಲಿ ಭಾರತ ನಂಬರ್1: ಇನ್ನು ವಾರ್ಷಿಕ ಟಿ20 ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ವಿಶ್ವಚಾಂಪಿಯನ್ ಶ್ರೀಲಂಕಾ ತಂಡವನ್ನು 1 ಅಂಕಗಳ ಅಂತರದಲ್ಲಿ ಹಿಂದಿಕ್ಕಿದೆ. 131 ಅಂಕಗಳೊಂದಿಗೆ ಭಾರತ ಅಗ್ರಸ್ಥಾನದಲ್ಲಿದ್ದರೆ, ಶ್ರೀಲಂಕಾ 130 ಅಂಕಗಳನ್ನು ಪಡೆದುಕೊಂಡಿದೆ.
ನಂತರದ ಸ್ಥಾನದಲ್ಲಿ ಪಾಕಿಸ್ತಾನ (123), ದಕ್ಷಿಣ ಆಫ್ರಿಕಾ (121) ಹಾಗೂ ಆಸ್ಟ್ರೇಲಿಯಾ (112) ತಂಡಗಳಿವೆ.
ಕೊಹ್ಲಿ ಏಕದಿನದಲ್ಲಿ ಅಗ್ರಸ್ಥಾನ: ಇನ್ನು ಆಟಗಾರರ ರ್ಯಾಂಕಿಂಗ್ ಪಟ್ಟಿಯನ್ನು ನೋಡುವುದಾದರೆ, ಏಕದಿನ ಕ್ರಿಕೆಟ್‌ನಲ್ಲಿ ಭಾರತದ ವಿರಾಟ್ ಕೊಹ್ಲಿ (881) ಅಗ್ರಸ್ಥಾನ ಪಡೆದಿದ್ದಾರೆ. ಬೌಲರ್‌ಗಳ ಪಟ್ಟಿಯಲ್ಲಿ ಪಾಕಿಸ್ತಾನದ ಸಯೀದ್ ಅಜ್ಮಲ್ (789), ಆಲ್ರೌಂಡರ್ ವಿಭಾಗದಲ್ಲಿ ಪಾಕಿಸ್ತಾನದ ಮಹಮದ್ ಹಫೀಜ್ (417) ಮೊದಲ ಸ್ಥಾನದಲ್ಲಿದ್ದಾರೆ.
ಟೆಸ್ಟ್‌ನಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (922) ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ, ಡೇಲ್ ಸ್ಟೇಯ್ನ್ (898) ಬೌಲರ್‌ಗಳ ವಿಭಾಗದಲ್ಲಿ ಹಾಗೂ ವರ್ನಾನ್ ಫಿಲ್ಯಾಂಡರ್ (376) ಅಗ್ರಸ್ಥಾನದಲ್ಲಿದ್ದಾರೆ.
ಟಿ20ಯ ಬ್ಯಾಟ್ಸ್‌ಮನ್ ವಿಭಾಗದಲ್ಲಿ ಆಸ್ಟ್ರೇಲಿಯಾದ ಎರಾನ್ ಫಿಂಚ್ (892), ಬೌಲರ್ ವಿಭಾಗದಲ್ಲಿ ವೆಸ್ಟ್ ಇಂಡೀಸ್‌ನ ಸ್ಯಾಮ್ಯುಯೆಲ್ ಬದ್ರಿ (846), ಆಲ್ರೌಂಡರ್ ವಿಭಾಗದಲ್ಲಿ ಮಹಮದ್ ಹಫೀಜ್ (400) ಅಗ್ರಸ್ಥಾನ ಪಡೆದಿದ್ದಾರೆ.