ಮ್ಯಾಕ್ಸ್‌ವೆಲ್ ಕಮಾಲ್
ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆದ ಐಪಿಎಲ್ ಪಂದ್ಯಾವಳಿಯ ಮೊದಲ ಹಂತ ಯಾವುದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಿದ್ದಾರೆ. ಹೀಗಾಗಿ ಯುಎಇಯಲ್ಲಿ ಪಂದ್ಯಾವಳಿಯನ್ನು ನಡೆಸಲು ತಾನು ತೆಗೆದುಕೊಂಡ ತೀರ್ಮಾನ ಸರಿಯಾಗಿದೆ ಎಂದು ಬಿಸಿಸಿಐ ಬೀಗುವಂತಾಗಿದೆ.ಹೀಗಾಗಿ ಸದಾ ವಿವಾದದಿಂದ ಕೂಡಿರುತ್ತಿದ್ದ ಐಪಿಎಲ್ ವಿವಾದ ರಹೀತವಾಗಿ ನಡೆದಿರುವ ಕೆಲ ಸ್ಮರಣೀಯ ಘಟನೆಗಳನ್ನು ನಾವು ಈಗ ನೆನೆಯಬಹುದು.
ಪಂಜಾಬ್ ಅಜೇಯ: ಪ್ರಸಕ್ತ ಸಾಲಿನ ಪಂದ್ಯಾವಳಿಯಲ್ಲಿ ಆಡಿದ ಐದೂ ಪಂದ್ಯಗಳಲ್ಲಿ ಗೆದ್ದಿರುವ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಅದ್ಭುತ ಪ್ರದರ್ಶನ ನೀಡಿದೆ. ಇದರೊಂದಿಗೆ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಪಂಜಾಬ್ ಅಗ್ರಸ್ಥಾನದಲ್ಲಿದೆ.
ಮರೆಯಲಾಗದ ಕ್ರಿಸ್ ಕ್ಯಾಚ್: ಯುಎಇಯಲ್ಲಿ ನಡೆದ 20 ಪಂದ್ಯಗಳಲ್ಲಿ ಮರೆಯಲಾರದ ಕೆಲ ಕ್ಯಾಚ್‌ಗಳನ್ನು ಆಟಗಾರರು ಹಿಡಿದಿದ್ದಾರೆ. ಆ ಕ್ಯಾಚ್‌ಗಳು ಪಂದ್ಯದಲ್ಲಿ ತಂಡಗಳು ಜಯ ಸಾಧಿಸಲು ನೆರವಾಗಿವೆ. ಅದರಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡದ ಕ್ರಿಸ್ ಲಿನ್ ಅವರು ಆರ್‌ಸಿಬಿ ವಿರುದ್ಧ ಏಪ್ರಿಲ್ 24ರಂದು ನಡೆದ ಪಂ ದ್ಯದಲ್ಲಿ ಪಡೆದ ಕ್ಯಾಚ್ ಅಭಿಮಾನಿಗಳಲ್ಲಿ ಕಚಗುಳಿ ಇಟ್ಟಿತ್ತು.
ಕೊಹ್ಲಿ ಸ್ವಯಂವರ: ಬಾಲಿವುಡ್‌ನ ಭಿನ್ನಾಣದ ತಾರೆಯರ ರಂಗಿಲ್ಲದೆ ಐಪಿಎಲ್ ಪಂದ್ಯಾವಳಿ ಯಾವತ್ತೂ ಪೂರ್ಣಗೊಳ್ಳುವುದೇ ಇಲ್ಲ. ಪಂದ್ಯಾವಳಿಯ ಉದ್ಘಾಟನೆಯ ದಿನ ಕೆಕೆಆರ್ ಮಾಲೀಕ ಶಾರೂಖ್ ಖಾನ್ ಅವರು ದೀಪಿಕಾ ಪಡಕೋಣೆ ಅವರೊಂದಿಗೆ ಸ್ಟೇಜ್ ಮೇಲೆ ಹೆಜ್ಜೆ ಹಾಕಿದರು. ಅಲ್ಲದೆ, ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ ಅವರನ್ನೂ ಸ್ಟೇಜ್ ಮೇಲೆ ಕರೆದಿದ್ದರು. ಅಲ್ಲದೆ, ಕೊಹ್ಲಿ ಸ್ವಯಂವರ ಏರ್ಪಡಿಸಲು ಶಾರೂಖ್ ತೀರ್ಮಾನಿಸಿದ್ದರು. ನಿಮ್ಮ ಪತ್ನಿ ಆಗುವ ಹುಡಿಗಿ ಹೇಗಿರಬೇಕು ಎಂದು ಕೊಹ್ಲಿ ಕೇಳಿದ್ದ ಶಾರೂಖ್, ನಂತರ ಅವರು ಕೊಹ್ಲಿ ಎದುರಿಗೆ ಕವರ್ ಇಲ್ಲದೆ ಒಂದು ಹುಡುಗಿಯ ಫೋಟೋವನ್ನು ಇಟ್ಟಾಗ, ಕೊಹ್ಲಿ ಮಾತನಾಡದಾಗಿದ್ದರು. ಅದು ಕೊಹ್ಲಿ ಪ್ರೀತಿಸುತ್ತಿದ್ದಾರೆ ಎನ್ನಲಾಗಿರುವ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅವರ ಭಾವಚಿತ್ರವಾಗಿತ್ತು.
ಜಯ ದಾಖಲಿಸದ ಚಾಂಪಿಯನ್ನರು: ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ ಆಡಿದ ಐದೂ ಪಂದ್ಯಗಳಲ್ಲಿ ಸೋಲನುಭವಿಸುವ ಮೂಲಕ ಸೋಲಿನ ಹಾದಿಯಲ್ಲೇ ತವರಿಗೆ ಮರಳಿದೆ.
ವಿಶ್ವ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಆಸ್ಟ್ರೇಲಿಯಾದ ಖ್ಯಾತ ಬ್ಯಾಟ್ಸ್‌ಮನ್ ರಿಕಿ ಪಾಂಟಿಂಗ್ ಅವರೇ ಸಲಹೆಗಾರರಾಗಿ ತಂಡದ ಬೆನ್ನಿಗೆ ನಿಂತಿದ್ದರೂ ಮುಂಬೈಗೆ ಜಯ ಕಾಣಲು ಸಾಧ್ಯವಾಗಿಲ್ಲ.ಸೂಪರ್ ಓವರ್‌ನಲ್ಲೂ ಟೈ: ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಡೆದ ಐಪಿಎಲ್ ಪಂದ್ಯ ಟೈನಲ್ಲಿ ಅಂತ್ಯಗೊಂಡಾಗ, ಸೂಪರ್ ಓವರ್ ನಡೆಸಲಾಯಿತು. ಸೂಪರ್ ಓವರ್ ಸಹ ಟೈನಲ್ಲೇ ಅಂತ್ಯಗೊಂಡಿದ್ದು ಪಂದ್ಯಾವಳಿಯ ಮತ್ತೊಂದು ವಿಶೇಷವಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಕೋಲ್ಕತಾ 11 ರನ್ ಗಳಿಸಿತ್ತು. ನಂತರ ಈ ಗುರಿಯನ್ನು ಬೆನ್ನಟ್ಟಿದ್ದ ರಾಜಸ್ಥಾನ ಸಹ 11 ರನ್ ಗಳಿಸಿತ್ತು. ಆದರೆ, ಬೌಂಡರಿಗಳ ಆಧಾರದ ಮೇಲೆ ರಾಜಸ್ಥಾನ ಜಯ ಕಂಡಿತ್ತು.
ಸುದ್ದಿಯಾದ ಗಂಭೀರ್ ಡಕೌಟ್: ಕೋಲ್ಕತಾ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಅವರು ಆಡಿದ ಪಂದ್ಯಾವಳಿಯ ಮೊದಲ ಮೂರು ಪಂದ್ಯಗಳಲ್ಲಿ ಡಕೌಟ್ ಆಗಿ ಅಚ್ಚರಿ ಮೂಡಿಸಿದ್ದರು. ನಂತರ 4ನೇ ಪಂದ್ಯದಲ್ಲಿ 1 ರನ್‌ಗಳಿಸಿ ಮತ್ತಷ್ಟು ಹಾಸ್ಯಸ್ಪದಕ್ಕೆ ಕಾರಣರಾಗಿದ್ದರು. ಆದರೆ, ರಾಜಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಲಯ ಕಂಡುಕೊಂಡಿದ್ದರು.
ಮಿಂಚಿದ ಮ್ಯಾಕ್ಸ್‌ವೆಲ್
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಯಶಸ್ಸಿನ ಹಿಂದೆ, ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರಿಯುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಎಂಬ ಬ್ಯಾಟಿಂಗ್ ದಾಂಡಿಗನ ಮಿಂಚಿನ ಶಕ್ತಿ ಅಡಗಿದೆ. ಇದುವರೆಗೂ ಮ್ಯಾಕ್ಸ್‌ವೆಲ್ ಆಡಿರುವ 5 ಪಂದ್ಯಗಳಿಂದ 60 ಸರಾಸರಿಯೊಂದಿಗೆ 300 ರನ್ ಗಳಿಸಿದ್ದಾರೆ. ಯುಎಇಯಲ್ಲಿ ಯಶಸ್ವಿಯಾಗಿರುವ ಮ್ಯಾಕ್ಸ್‌ವೆಲ್ ಭಾರತದಲ್ಲಿ ಯಾವ ರೀತಿಯ ಪ್ರದರ್ಶನ ನೀಡಲಿದ್ದಾರೆ ಎಂಬದು ಕಾತರ ಮೂಡಿಸಿದೆ.