ಲಕ್ಷ್ಮಣ್ ಸಲಹೆ ನೆರವಾಯ್ತು: ಇರ್ಫಾನ್
ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಸನ್ರೈಸರ್ಸ್ ತಂಡದ ಮಧ್ಯಮವೇಗಿ ಇರ್ಫಾನ್ ಪಠಾಣ್, ತಂಡ ಸಲಹೆಗಾರ ವಿವಿಎಸ್ ಲಕ್ಷ್ಮಣ್ ಅವರು ನೀಡಿದ ಸಲಹೆ ಒಳ್ಳೆಯ ಪ್ರದರ್ಶನ ನೀಡಲು ನೆರವಾಯಿತು ಎಂದು ತಿಳಿಸಿದ್ದಾರೆ.
ಪಂದ್ಯದ ಅಂತಿಮ ಓವರ್ನಲ್ಲಿ ಅತ್ಯುತ್ತಮ ಲಯದಲ್ಲಿದ್ದ ಕಿರನ್ ಪೊಲಾರ್ಡ್ ಅವರ ವಿಕೆಟ್ ಪಡೆದು, ಅಂತಿಮ ಕ್ಷಣದಲ್ಲಿ ಸನ್ರೈಸರ್ಸ್ ತಂಡ ಮೇಲುಗೈ ಸಾಧಿಸಲು ನೆರವಾದರು.
ಪಂದ್ಯ ಆರಂಭವಾಗುವ ಮುನ್ನ ನಾನು ವಿವಿಎಸ್ ಲಕ್ಷ್ಮಣ್ ಅವರೊಂದಿಗೆ ಸಾಕಷ್ಟು ವಿಷಯ ಕುರಿತಂತೆ ಚರ್ಚೆ ನಡೆಸಿದ್ದೆ. ಮೈದಾನದ ಹೊರಗೆ ನೀನು ಏನು ಮಾಡುತ್ತೀಯ ಎಂಬುದು ಪರಿಗಣನೆಗೆ ಬರುವುದಿಲ್ಲ. ಆದರೆ 22 ಗಜದ ಅಂಗಣದಲ್ಲಿ ನೀವು ಆಕ್ರಮಣಕಾರಿ ಮನೋಭಾವದಿಂದ ಕಿಚ್ಚೆಬ್ಬಿಸುವ ಪ್ರದರ್ಶನ ನೀಡಬೇಕು. ಅದು ಪರಿಗಣನೆಗೆ ಬರುತ್ತದೆ ಎಂದು ತಿಳಿಸಿದ್ದರು. ಈ ಮಾತು ನನ್ನಲ್ಲಿ ಆಳವಾಗಿ ಉಳಿಯಿತು. ಅವರ ಸಲಹೆ ಎಂದಿನಂತೆ ಯಶಸ್ವಿಯಾಯಿತು ಎಂದು ಪಠಾಣ್ ತಿಳಿಸಿದರು.
ಕಳೆದ ಪಂದ್ಯಗಳಲ್ಲಿ ನಾನು ಹೆಚ್ಚಿನ ಪ್ರಮಾಣದಲ್ಲಿ ಬೌಲಿಂಗ್ ಮಾಡಿಲ್ಲ. ಹಾಗಾಗಿ ಈ ಪಂದ್ಯದಲ್ಲೂ ಹೆಚ್ಚಿನ ಬೌಲಿಂಗ್ ಮಾಡುವುದಿಲ್ಲವೆಂದು ಭಾವಿಸಿದ್ದೆ. ಆದರೆ ಪೊಲಾರ್ಡ್ ಅವರ ಅಬ್ಬರದ ಬ್ಯಾಟಿಂಗ್ ನಾನು ಬೌಲಿಂಗ್ ಮಾಡಲು ಅವಕಾಶ ಕಲ್ಪಿಸಿತು. ಈ ಪ್ರದರ್ಶನದಿಂದ ನಾನು ಮುಂದಿನ ಪಂದ್ಯಗಳಲ್ಲೂ ಉತ್ತಮ ರೀತಿಯಲ್ಲಿ ಬೌಲಿಂಗ್ ಮಾಡಲು ನೆರವಾಗಲಿದೆ.
ಗಾಯದ ಸಮಸ್ಯೆಯಿಂದ ಹೊರಬಂದು ಈ ರೀತಿಯಾದ ಪ್ರದರ್ಶನ ನೀಡುವುದು ಸುಲಭವಲ್ಲ ಹಾಗಾಗಿ ಇದು ಉತ್ತಮ ಸ್ಫೂರ್ತಿ ನೀಡಲಿದೆ ಎಂದು ಅಭಿಪ್ರಾಯಪಟ್ಟರು.