ಸದಾ ಗಂಭೀರ ಚಿಂತನೆಯಲ್ಲಿ ನಾನಿರುವೆ: ವಿರಾಟ್ ಕೊಹ್ಲಿ
ಐಪಿಎಲ್ 7ನೇ ಆವೃತ್ತಿಯಲ್ಲಿ ಮತ್ತೆ ಗೆಲವಿನ ಲಯಕ್ಕೆ ಮರಳಲು...
ಬೆಂಗಳೂರು: ಐಪಿಎಲ್ 7ನೇ ಆವೃತ್ತಿಯಲ್ಲಿ ಮತ್ತೆ ಗೆಲವಿನ ಲಯಕ್ಕೆ ಮರಳಲು ಪ್ರಯತ್ನಿಸುತ್ತಿರುವ ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ, ತಾನು ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗಲೂ ಗೆಂಭೀರವಾಗಿ ಚಿಂತನೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ನಾನು ಬಸ್‌ನಲ್ಲಿ ಮೈದಾನಕ್ಕೆ ತೆರಳುವಾಗಲೂ ಯಾವ ಬೌಲರ್‌ಗಳಿಗೆ ಯಾವ ರೀತಿ ಹೊಡೆತಗಳ ಆಯ್ಕೆ ಮಾಡಬೇಕು ಎಂಬುದನ್ನು ಚಿಂತಿಸುತ್ತೇನೆ. ಒಂದು ಬಾರಿ ಮಾನಸಿಕವಾಗಿ ಸಜ್ಜಾದ ನಂತರ ಪಂದ್ಯದ ವೇಳೆ ಉತ್ತಮ ರೀತಿಯಲ್ಲಿ ಆಡಲು ಸಾಧ್ಯವಾಗುತ್ತದೆ ಎಂದು ವಿರಾಟ್ ಕೊಹ್ಲಿ ಆರ್‌ಸಿಬಿಯ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ.
ನಾನು ಹೆಚ್ಚಿನ ಪ್ರಮಾಣದಲ್ಲಿ ಏನು ಮಾಡಬೇಕು ಎಂಬುದನ್ನು ಆಲೋಚಿಸುತ್ತೇನೆ. ಪ್ರತಿ ಪಂದ್ಯಕ್ಕೂ ಮುನ್ನ ಯಾವ ರೀತಿ ಆಡಬೇಕು ಎಂಬುದರ ಬಗ್ಗೆ ಸಿದ್ಧತೆ ನಡೆಸುತ್ತೇನೆ. ಯಾವ ಯಾವ ಬೌಲರ್‌ಗಳನ್ನು ಎದುರಿಸುತ್ತೇನೆ ಎಂಬುದನ್ನು ಅರಿತು ಅದಕ್ಕೆ ತಕ್ಕಂತೆ ಪರಿಹಾರ ನಡೆಸುತ್ತೇನೆ. ಮೈದಾನದಲ್ಲಿ ಆಕ್ರಮಣಕಾರಿಯಾಗಿ ಆಡುವುದು ನನ್ನ ಶಕ್ತಿ. ಆದರೆ ಈಗ ನಾನು ಆಕ್ರಮಣಕಾರಿ ಮನೋಭಾವವನ್ನು ನಿಯಂತ್ರಿಸುತ್ತಿದ್ದೇನೆ. ಹಾಗಾಗಿ ಮೈದಾನದಲ್ಲಿ ಆಕ್ರಮಣಕಾರಿ ಮನೋಭಾವವನ್ನು ಬೇಕಾದಾಗ ವ್ಯಕ್ತಪಡಿಸಿ ನಂತರ ಅದನ್ನು ನಿಯಂತ್ರಿಸುವಂತೆ ಪ್ರಯತ್ನಿಸುತ್ತಿದ್ದೇನೆ ಎಂದು ಕೊಹ್ಲಿ ತಿಳಿಸಿದ್ದಾರೆ. ನಾನು ಉತ್ತಮ ರೀತಿಯಲ್ಲಿ ರನ್ ದಾಖಲಿಸಿದಾಗ ಜನರು, ನಾನು ವೃತ್ತಿಜೀವನದ ಶ್ರೇಷ್ಠ ಲಯದಲ್ಲಿದ್ದೇನೆ ಎಂದು ಹೇಳುತ್ತಾರೆ. ಆ ಮಾತಿನ ಕಡೆ ನಾನು ಹೆಚ್ಚಿನ ಗಮನ ಹರಿಸುವುದಿಲ್ಲ. ನೀವು ಚೆನ್ನಾಗಿ ಆಡದಿದ್ದಾಗ ಒಂದೆರಡು ಪಂದ್ಯಗಳಲ್ಲಿ ಉತ್ತಮ ರನ್ ಗಳಿಸಿದರೆ, ಪರಿಸ್ಥಿತಿ ಸಂಪೂರ್ಣವಾಗಿ ಬದಲಾಗುತ್ತದೆ. ನಾನು ಈ ಹಿಂದೆ ಏನು ಮಾಡಿದ್ದೇನೆ ಎಂಬುದರ ಬಗ್ಗೆ ಚಿಂತನೆ ನಡೆಸುವುದಿಲ್ಲ. ಮುಂದಿನ ದಿನಗಳಲ್ಲಿ ಬರುವ ಪಂದ್ಯಗಳಲ್ಲಿ ನಾನು ಯಾವರೀತಿ ಆಡುತ್ತೇನೆ ಎಂಬುದರ ಬಗ್ಗೆ ಯೋಚಿಸುತ್ತೇನೆ ಎಂದು ತಿಳಿಸಿದರು.