ಸಾನಿಯಾ-ಕಾರಾ ಸೆಮೀಸ್ಗೆ
ಪೋರ್ಚುಗಲ್: ಭಾರತದ ಸಾನಿಯಾ ಮಿರ್ಜಾ ಮತ್ತು ಜಿಂಬಾಬ್ವೆಯ ಕಾರಾ ಬ್ಲ್ಯಾಕ್ ಅವರು ಪೋರ್ಚುಗಲ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಗುರುವಾರ ನಡೆದ ಮಹಿಳೆಯರ ಡಬಲ್ಸ್ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ಸಾನಿಯಾ ಮಿರ್ಜಾ ಮತ್ತು ಕಾರಾ ಬ್ಲ್ಯಾಕ್ 6-3, 6-4 ನೇರ ಸೆಟ್ಗಳಿಂದ ಸ್ಪೇನಿನ ಸಿಲ್ವಿಯಾ ಸೋಲರ್-ಎಸ್ಪಿನೋಸಾ ಮತ್ತು ಚೀನಾದ ಶುಯಿ ಝಾಂಗ್ ಅವರನ್ನು ಪರಾಭವಗೊಳಿಸಿದರು.
ಎರಡೂ ಸೆಟ್ಗಳಲ್ಲಿ ಅತ್ಯುತ್ತಮ ಹೊಂದಾಣಿಕೆ ಆಟ ಪ್ರದರ್ಶಿಸಿದ ಭಾರತ-ಜಿಂಬಾಬ್ವೆ ಜೋಡಿ ಸುಮಾರು ಒಂದೂವರೆ ಗಂಟೆ ಆಟದಲ್ಲಿ ಗೆಲವು ಸಾಧಿಸಿತು. ಹಿಂದಿನ ಪಂದ್ಯದಲ್ಲಿ ರೊಮೇನಿಯಾದ ಐರಿನಾ-ಕಾಮೆಲಿಯಾ ಬೇಗು ಮತ್ತು ಅರ್ಜೆಂಟೀನಾದ ಮಾರಿಯಾ ಐರಿಗೊವೆನ್ ಅವರ ವಿರುದ್ಧ ಮೂರು ಸೆಟ್ಗಳ ಹೋರಾಟದಲ್ಲಿ ರೋಚಕ ಗೆಲವು ದಾಖಲಿಸಿದ್ದ ಸಾನಿಯಾ ಮತ್ತು ಕಾರಾ ಇಲ್ಲಿಯೂ ಅದೇ ರೀತಿಯ ಪ್ರದರ್ಶನ ಮುಂದುವರಿಸಿದರು.