ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಕ್ರೀಡೆ

ಡೆಲ್ಲಿಗೆ ಮುತ್ತಿಗೆ ಹಾಕಲು ರಾಯಲ್ಸ್ ಸಿದ್ಧ

Vishwanath S
Updated On : 3 May 2014, 12:46 pm

ನವಹೆದಲಿ: ಯುಎಇಯಲ್ಲಿನ ಮೊದಲ ಹಂತದ ಐಪಿಎಲ್ 7ನೇ ಆವೃತ್ತಿಯ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರಾಜಸ್ಥಾನ ರಾಯಲ್ಸ್ ತಂಡವು ಸೋಲಿನ ಸುಳಿಯಲ್ಲಿ ಸಿಕ್ಕಿ ನರಳುತ್ತಿರುವ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ಗೆಲವು ದಾಖಲಿಸಲು ಸಜ್ಜಾಗಿದೆ.
ಶನಿವಾರ ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಪಂದ್ಯದಲ್ಲಿ ಉಭಯ ತಂಡಗಳು ಕಾದಾಟ ನಡೆಸುತ್ತಿದ್ದು, ರೋಚಕ ಹಣಾಹಣಿಯ ನಿರೀಕ್ಷೆಗಳಿವೆ.
ಉಭಯ ತಂಡಗಳು ಯುಎಇಯಲ್ಲಿನ ಹಂತದಲ್ಲಿ ತಲಾ 5 ಪಂದ್ಯಗಳನ್ನಾಡಿದ್ದು, ರಾಜಸ್ಥಾನ ರಾಯಲ್ಸ್ ತಂಡ ಹೆಚ್ಚು ಗೆಲವಿನ ಸಿಹಿಯನ್ನು ಸವಿದರೆ ಡೆಲ್ಲಿ ತಂಡ ಸೋಲಿನಿ ನಿರಾಸೆ ಅನುಭವಿಸಿದೆ. ಹಾಗಾಗಿ ರಾಜಸ್ಥಾನ ರಾಯಲ್ಸ್ ತಂಡ ಯುಎಇಯಲ್ಲಿ ನೀಡಿದ ಉತ್ತಮ ಪ್ರದರ್ಶನವನ್ನು ಇಲ್ಲೂ ಮುಂದುವರಿಸಲು ಎದುರು ನೋಡುತ್ತಿದ್ದರೆ, ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಯುಎಇಯಲ್ಲಿನ ಕಳಪೆ ಪ್ರದರ್ಶನವನ್ನು ಕೆಟ್ಟ ಕನಸಿನಂತೆ ಮರೆತು ಹೊಸ ಆರಂಭ ಪಡೆಯಲು ಚಿಂತನೆ ನಡೆಸಿದೆ.
ಲಯ ಕಾಣದ ಡೆವಿಲ್ಸ್: ಡೆಲ್ಲಿ ಡೇರ್‌ಡೆವಿಲ್ಸ್ ತಂಡ ಈ ಬಾರಿ ಉತ್ತಮ ಆಟಗಾರರನ್ನು ತಂಡದಲ್ಲಿ ಹೊಂದಿದೆಯಾದರೂ ಯಾವ ಆಟಗಾರನೂ, ಸಾಮರ್ಥ್ಯಕ್ಕೆ ತಕ್ಕ ಆಟ ಪ್ರದರ್ಶಿಸುತ್ತಿಲ್ಲ. ಅಲ್ಲದೆ ತಂಡ ಸಂಘಟಿತ ಪ್ರದರ್ಶನ ನೀಡಲು ಲಯ ಕಂಡುಕೊಳ್ಳಲು ವಿಫಲವಾಗುತ್ತಿದೆ.
ಆರಂಭಿಕರಾಗಿ ಮಾಯಾಂಕ್ ಅಗರ್‌ವಾಲ್, ಮುರಳಿ ವಿಜಯ್ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಸತತವಾಗಿ ಎಡವುತ್ತಿದ್ದಾರೆ.
ಕಾರ್ತಿಕ್, ಟೇಲರ್ ಸಹ ನಿರೀಕ್ಷೆಗೆ ತಕ್ಕಂತೆ ಬ್ಯಾಟಿಂಗ್ ಮಾಡುತ್ತಿಲ್ಲ. ಜೆ.ಪಿ ಡುಮಿನಿ ಏಕಾಂಗಿ ಹೋರಾಟ ನಡೆಸುತ್ತಿದ್ದರೂ, ಅವರಿಗೆ ಸರಿಯಾದ ಬೆಂಬಲ ದೊರೆಯದ ಹಿನ್ನೆಲೆಯಲ್ಲಿ ಅದು ಯಶಸ್ವಿಯಾಗುತ್ತಿಲ್ಲ. ಕೆವಿನ್ ಪೀಟರ್‌ಸನ್ ಅಬ್ಬರಿಸಬೇಕಾಗಿದೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಶಮಿ, ಜಯ್‌ದೇವ್ ಉನದ್ಕತ್ ಹಾಗೂ ಪಾರ್ನೆಲ್ ವೇಗದ ಅಸ್ತ್ರಗಳಾಗಿದ್ದರೆ, ರಾಹುಲ್ ಶರ್ಮಾ ಸ್ಪಿನ್ ವಿಭಾಗದ ಜವಾಬ್ದಾರಿ ಹೊತ್ತಿದ್ದಾರೆ.
ಆತ್ಮ ವಿಶ್ವಾಸದಲ್ಲಿ ರಾಯಲ್ಸ್: ರಾಜಸ್ಥಾನ ತಂಡವನ್ನು ನೋಡಿದರೆ, ಎಲ್ಲಾ ಆಟಗಾರರು ತಂಡಕ್ಕೆ ಅಗತ್ಯ ಸಮಯದಲ್ಲಿ ನೆರವಾಗುತ್ತಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ ಅಜಿಂಕ್ಯ ರಹಾನೆ, ಸಂಜು ಸ್ಯಾಮ್ಸನ್, ಶೇನ್ ವ್ಯಾಟ್ಸನ್ ಪ್ರಮುಖ ಆಟಗಾರರಾಗಿದ್ದರೆ, ಜೇಮ್ಸ್ ಫಾಕ್ನರ್, ಸ್ಟುವರ್ಟ್ ಬಿನ್ನಿ, ರಜತ್ ಭಾಟಿಯಾ ಪ್ರಮುಖ ಆಲ್ರೌಂಡರ್‌ಗಳಾಗಿದ್ದಾರೆ. ಹಾಗಾಗಿ ತಂಡ ಸಮತೋಲನದಿಂದ ಕೂಡಿದೆ ಎನ್ನಬಹುದು.
ಇಂದಿನ ಪಂದ್ಯಗಳು
ಮುಂಬೈ ಇಂಡಿಯನ್ಸ್ - ಕಿಂಗ್ಸ್ ಇಲೆವೆನ್ ಪಂಜಾಬ್
ಸಮಯ: ಸಂಜೆ 4 ಗಂಟೆ
ಸ್ಥಳ: ಮುಂಬೈ
ಡೆಲ್ಲಿ ಡೇರ್‌ಡೆವಿಲ್ಸ್-ರಾಜಸ್ಥಾನ ರಾಯಲ್ಸ್
ಸಮಯ: ರಾತ್ರಿ8 ಗಂಟೆ
ಸ್ಥಳ: ದೆಹಲಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement