ತಾತಂಡ ಹಾಕಿ: ಮಚ್ಚಮಾಡಕ್ಕೆ ಮುನ್ನಡೆ
ವಿರಾಜಪೇಟೆ: ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜಿನ ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಕೌಟುಂಬಿಕ ಹಾಕಿ ಕಪ್ನ 13ನೇ ದಿನವಾದ ಶುಕ್ರವಾರ ಮಚ್ಚಮಾಡ, ಪಾಲಂದಿರ ತಂಡಗಳು ಸೇರಿ 12 ತಂಡಗಳು ಮುನ್ನಡೆ ಸಾಧಿಸಿತು.
ತಾತಂಡ ಕಪ್ ಕೌಟುಂಬಿಕ ಹಾಕಿಗಾಗಿ ಶುಕ್ರವಾರ ಮೈದಾನ 1ರಲ್ಲಿ ಸೆಣಸಾಟ ಪ್ರಾರಂಭಿಸಿದ ಪಾಲಂದಿರ ತಂಡವು ಪರಂದಂಡ ತಂಡದ ಮುಂದೆ 1- 4 ಗೋಲಿನಿಂದ ಶರಣಾಯಿತು. ಪರಂದಂಡ ತಂಡದ ಪರವಾಗಿ ಧೀರಜ್ ಮುತ್ತಣ್ಣ ಹಾಗೂ ಸದಾ ನಾಣಯ್ಯ ತಲಾ 2 ಗೋಲು ದಾಖಲಿಸಿ ತಂಡದ ಮುನ್ನಡೆಗೆ ಕಾರಣರಾದರು. ಪಾಲಂದಿರ ತಂಡದ ಪರವಾಗಿ ಅಪ್ಪಚ್ಚು 1 ಗೋಲು ದಾಖಲಿಸಿದರು.
2ನೇ ಪಂದ್ಯದಲ್ಲಿ ಮಚ್ಚಮಾಡ ತಂಡವು ಶಿವಚಾರಿಯಂಡ ತಂಡವನ್ನು 3- 0 ಗೋಲುಗಳಿಂದ ಬಗ್ಗುಬಡಿಯಿತು. ಮಚ್ಚಮಾಡ ತಂಡದ ಪರವಾಗಿ ಯಕ್ಷಿತ್, ಗೌತಮ್ ಹಾಗೂ ರಾಜಮಣಿ ತಲಾ 1 ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು.
3ನೇ ಪಂದ್ಯದಲ್ಲಿ ತೀತಿಮಾಡ ತಂಡವು ಗೋಳುಕಾರಂಡ ತಂಡವನ್ನು 1- 0 ಗೋಲಿಗಳಿಂದ ಮಣಿಸಿತು. ತೀತಿಮಾಡ ತಂಡದ ಪರವಾಗಿ ಬೋಪಯ್ಯ 1 ಗೋಲು ದಾಖಲಿಸಿ, ತಂಡಕ್ಕೆ ಜಯ ತಂದುಕೊಟ್ಟರು.
4ನೇ ಪಂದ್ಯದಲ್ಲಿ ಕುಪ್ಪಂಡ (ಕೈಕೇರಿ) ತಂಡವು ಕಬ್ಬಚ್ಚಿರ ತಂಡವನ್ನು 4- 0 ಗೋಲುಗಳಿಂದ ಸೋಲಿಸಿ ಮುನ್ನಡೆಯಿತು. ಕುಪ್ಪಂಡ ತಂಡದ ಪರವಾಗಿ ಮಂದಣ್ಣ ಎಂದಿನಂತೆ ಆಟವಾಡಿ 2 ಗೋಲು ದಾಖಲಿಸಿದರೆ ನಾಚಪ್ಪ ಮತ್ತು ಸೋಮಣ್ಣ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಗೆಲವು ತಂದುಕೊಟ್ಟರು. 5ನೇ ಪಂದ್ಯದಲ್ಲಿ ಮೂಡೇರ ತಂಡವು ಕಾಂಡೇರ ತಂಡವನ್ನು 4- 2 ಅಂತರದಿಂದ ಮಣಿಸಿತು. ಕಾಂಡೇರ ತಂಡವು ಮೂಡೇರ ತಂಡಕ್ಕೆ ಉತ್ತಮ ಪೈಪೋಟಿ ನೀಡಿತ್ತಾದರೂ ಕೊನೆಯ ಕ್ಷಣದಲ್ಲಿ ಶರಣಾಯಿತು. ಮೂಡೇರ ತಂಡದ ಪರವಾಗಿ ಧರಣ್, ಹರೀಶ್, ಕಿರಣ್ ಹಾಗೂ ಪೊನ್ನಪ್ಪ ತಲಾ 1 ಗೋಲು ದಾಖಲಿಸಿದರು. ಕಾಂಡೇರ ತಂಡದ ಪರವಾಗಿ ಭವಿಷ್ ಮತ್ತು ತರುಣ್ ಉತ್ತಮ ಆಟವಾಡಿ ತಲಾ 1 ಗೋಲು ದಾಖಲಿಸಿದರು.
6ನೇ ಮುಕ್ಕಾಟಿರ (ಬೊಂದ) ತಂಡವು ನಾಮೇರ ತಂಡವನ್ನು ಭರ್ಜರಿ ಪ್ರದರ್ಶನ ನೀಡಿ 5- 1 ಅಂತರದಿಂದ ನಾಮೇರ ತಂಡವನ್ನು ಮಣಿಸಿತು. ಮುಕ್ಕಾಟಿರ ತಂಡದ ಪರವಾಗಿ ಗೋಲುಗಳ ಸರದಾರ ಪೂಣಚ್ಚ 3 ಗೋಲು ದಾಖಲಿಸಿದರೆ ವಸಂತ್ ಮತ್ತು ಸುಬ್ರಮಣಿ ತಲಾ 1 ಗೋಲು ದಾಖಲಿಸಿದರು. ನಾಮೇರ ತಂಡದ ಪರವಾಗಿ ಚಂಗಪ್ಪ 1 ಗೋಲು ದಾಖಲಿಸಿದರು.
ಅಲೆಮಂಗಡಕ್ಕೆ ಜಯ: ತಾತಂಡ ಕಪ್ಗಾಗಿ 2ನೇ ಮೈದಾನದಲ್ಲಿ ಶುಕ್ರವಾರ ಸೆಣಸಾಟ ಆರಂಭಿಸಿದ ಅಲೆಮಂಗಡ ತಂಡವು ಕರುವಟೀರ ತಂಡವನ್ನು 3- 1 ಅಂತರದಿಂದ ಮಣಿಸಿತು. ಅಲೆಮಂಗಡ ತಂಡದ ಪರವಾಗಿ ಸೋಮಯ್ಯ, ತಿಮ್ಮಯ್ಯ ಹಾಗೂ ದರ್ಶನ್ ತಲಾ 1 ಗೋಲು ದಾಖಲಿಸಿ ತಂಡವನ್ನು ಮುನ್ನಡೆಸಿದರು. ಕರುವಟೀರ ತಂಡದ ಪರವಾಗಿ ಚರ್ಮಣ್ಣ 1 ಗೋಲು ದಾಖಲಿಸಿದರು.
2ನೇ ಪಂದ್ಯದಲ್ಲಿ ಮಾಚಂಗಡ ತಂಡವು ಮುಂದಂಡ ತಂಡವನ್ನು 3- 0 ಅಂತರದಿಂದ ಮಣಿಸಿತು. ಮಾಚಂಗಡ ತಂಡದ ಪರವಾಗಿ ಅಯ್ಯಪ್ಪ 1 ಗೋಲು, ದರ್ಶನ್ 2 ಗೋಲು ದಾಖಲಿಸಿದರು. 3ನೇ ಪಂದ್ಯದಲ್ಲಿ ಸೋಮೆಯಂಡ ತಂಡವು ಪ್ರಬಲ ಅಮ್ಮಣ್ಣಿ ತಂಡವನ್ನು 4- 2 ಅಂತರದಿಂದ ಬಗ್ಗುಬಡಿಯಿತು. ಅಮ್ಮಣ್ಣಿ ತಂಡದ ಪರವಾಗಿ ಉತ್ತಮ ಆಟಗಾರ ಬೋಪಣ್ಣ 2 ಗೋಲು ದಾಖಲಿಸಿದರು. ಸೋಮೆಯಂಡ ತಂಡದ ಪರವಾಗಿ ಅಪ್ಪಯ್ಯ 2 ಗೋಲು ದಾಖಲಿಸಿ, ತಂಡದ ಗೆಲವಿನಲ್ಲಿ ಪ್ರಧಾನ ಪಾತ್ರ ವಹಿಸಿದರು. ಇದೇ ತಂಡದ ಅಪ್ಪಚ್ಚು ಮತ್ತು ರಾಜೇಶ್ ತಲಾ 1 ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಬಿದ್ದಂಡ ತಂಡವು ಚೋಯಮಾಡಂಡ ತಂಡವನ್ನು ಟೈಬ್ರೇಕರ್ನಲ್ಲಿ 6- 2 ಅಂತರದಿಂದ ಮಣಿಸಿತು. ಎರಡು ತಂಡಗಳು ಮೈದಾನದಲ್ಲಿ ಉತ್ತಮ ಆಟ ಪ್ರದರ್ಶಿಸಿ 2- 2 ಸಮನಾಂತರ ಗೋಲುಗಳಿಸಿದ ಕಾರಣ ಟೈಬ್ರೇಕರ್ನಲ್ಲಿ ಬಿದ್ದಂಡ ತಂಡವು 6- 2 ಗೋಲುಗಳಿಂದ ವಿಜಯಿಯಾಯಿತು. ಬಿದ್ದಂಡ ತಂಡದ ಆಟಗಾರ ಬೆಳ್ಯಪ್ಪ 2 ಗೋಲು, ಚೋಯಮಾಡಂಡ ತಂಡದ ಪರವಾಗಿ ಬಿಪಿನ್ ಮತ್ತು ಸನ್ನು ತಲಾ 1 ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಕುಂಚೇಟಿರ ತಂಡವು ಮಣವಟ್ಟಿರ ತಂಡವನ್ನು ಟೈ ಬ್ರೇಕರ್ನಲ್ಲಿ 5- 3ಗೋಲುಗಳಿಂದ ಮಣಿಸಿತು.
6ನೇ ಪಂದ್ಯದಲ್ಲಿ ಮುಕ್ಕಾಟಿರ (ಮಾದಾಪುರ) ತಂಡವು ನೆರವಂಡ ತಂಡವನ್ನು ಟೈ ಬ್ರೇಕರ್ನಲ್ಲಿ 6- 5 ಗೋಲುಗಳಿಂದ ಮಣಿಸಿ ಮುನ್ನಡೆಯಿತು. ಎರಡು ತಂಡಗಳು ಮೈದಾನದಲ್ಲಿ ಉತ್ತಮ ಆಟವಾಡಿ 1 -1 ಸಮಾನಂತರ ಗೋಲು ದಾಖಲಿಸಿತು. ಮುಕ್ಕಾಟಿರ ತಂಡದ ಪರವಾಗಿ ಬೋಪಣ್ಣ 1 ಗೋಲು ದಾಖಲಿಸಿದರೆ, ನೆರವಂಡ ತಂಡದ ಪರವಾಗಿ ಬೋಪಯ್ಯ 1 ಗೋಲು ದಾಖಲಿಸಿದರು.