ಉದಯ ಸೂರ್ಯನ ಮಸುಕಾಗಿಸುವುದೇ ಆರ್ಸಿಬಿ?
ಬೆಂಗಳೂರು: ಉದ್ಯಾನ ನಗರಿಯ ಕ್ರಿಕೆಟ್ ಅಭಿಮಾನಿಗಳಿಗೆ ಪ್ರಸಕ್ತ ಋತುವಿನ ಮೊದಲ ಐಪಿಎಲ್ ಪಂದ್ಯ ನೋಡುವಾಸೆ. ಈ ಪಂದ್ಯದಲ್ಲಿ ಭಾಗವಹಿಸುತ್ತಿರುವ ಉಭಯ ತಂಡಗಳಿಗೆ ಗೆದ್ದು ಬೀಗುವಾಸೆ. ಉಭಯ ತಂಡಗಳಲ್ಲೂ ರಾಜ್ಯದ ಆಟಗಾರರಿಲ್ಲವಾದ್ದರಿಂದ ಇಲ್ಲಿನ ಅಭಿಮಾನಿಗಳಿಗೆ ಪಂದ್ಯದಲ್ಲಿ ದಾಖಲಾಗುವ ಸಿಕ್ಸರ್, ಬೌಂಡರಿಗಳನ್ನು ನೋಡಿ ರಂಜಿಸುವ ಕಾತರ. ಇದುವರೆಗೂ ಯುಎಇಯಲ್ಲಿ ನಡೆದ ಮೊದಲ ಹಂತದ ಪಂದ್ಯಾವಳಿಯಲ್ಲಿ ಆಡಿರುವ ಪಂಚ ಪಂದ್ಯಗಳಲ್ಲಿ ತಲಾ ಎರಡರಲ್ಲಿ ಗೆದ್ದು, 3ರಲ್ಲಿ ಸೋತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಚಿನ್ನಸ್ವಾಮಿ ಅಂಗಣದಲ್ಲಿ ಭಾನುವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಪರಸ್ಪರ ಸೆಣಸಲು ಸಿದ್ಧವಾಗಿವೆ. ಹೆಚ್ಚಿನ ಪಂದ್ಯಗಳಲ್ಲಿ ಸೋಲನುಭವಿಸಿ ಪಾಯಿಂಟ್ ಪಟ್ಟಿಯ ತಳ ಸೇರಿರುವ ಉಭಯ ತಂಡಗಳು, ಈಗ ಹೆಚ್ಚಿನ ರನ್ ಪೇರಿಸಿ, ಗೆಲ್ಲುವ ಗುರಿ ಹೊದಿವೆ. ಉಭಯ ತಂಡಗಳೂ ಸಮಾನ ಅಂಕ ಹೊಂದಿದ್ದರೂ, ನೆಟ್ ರನ್ರೇಟ್ನಲ್ಲಿ ಕೊಂಚ ಮುನ್ನಡೆ ಸಾಧಿಸಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂಕಪಟ್ಟಿಯಲ್ಲಿ ಸನ್ರೈಸರ್ಸ್ ತಂಡಕ್ಕಿಂತ ಮೇಲಿದೆ. ಉಭಯ ತಂಡಗಳ ಶಕ್ತಿಯನ್ನು ವಿಮರ್ಶೆ ಮಾಡಿದಾಗ, ಬಲಿಷ್ಠ ಬ್ಯಾಟಿಂಗ್ ಪಾಳೆಯನ್ನು ಹೊಂದಿದ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಶಿಖರ್ ಧವನ್ ನಾಯಕತ್ವದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ಹೊಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಶಕ್ತಿ
- ನಾಯಕ ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಅದ್ಭುತ ಪ್ರದರ್ಶನ ನೀಡುವ ಸಾಮರ್ಥ್ಯ ಹೊಂದಿದ್ದಾರೆ.
- ಕಳೆದ ಐಪಿಎಲ್ನಲ್ಲಿ ಹೆಚ್ಚು ರನ್ ದಾಖಲಿಸಿರುವ ಕ್ರಿಸ್ ಗೇಯ್ಲ್ ಯಾವುದೇ ಸಂದರ್ಭದಲ್ಲಿ ಎದುರಾಳಿ ತಂಡದ ಬೌಲರ್ಗಳನ್ನು ಸಮರ್ಥವಾಗಿ ದಂಡಿಸಬಹುದು.
- ಎ.ಬಿ ಡಿವಿಲಿಯರ್ಸ್ ಹಾಗೂ ಯುವರಾಜ್ ಸಿಂಗ್ ಸಿಂಗ್ ಸಹ ಬೆಂಗಳೂರು ತಂಡದ ಪ್ರಮುಖ ಬ್ಯಾಟ್ಸ್ಮನ್ಗಳೆನಿಸಿದ್ದಾರೆ.
- ವರುಣ್ ಆರೋನ್, ಯಜುವೇಂದ್ರ ಚಹಾಲ್, ರವಿ ರಾಂಪಾಲ್ ಅವರು ತಂಡದ ಬೌಲಿಂಗ್ ವಿಭಾಗದ ಪ್ರಮುಖ ಶಕ್ತಿಯಾಗಿದ್ದಾರೆ.
- ತವರಿನ ಅಂಗಣ ಮತ್ತು ಅಭಿಮಾನಿಗಳ ಬೆಂಬಲ ತಂಡಕ್ಕೆ ಪಂದ್ಯದಲ್ಲಿ ಆಸರೆಯಾಗಬಹುದು.
ದೌರ್ಬಲ್ಯ
- ಬಲಿಷ್ಠ ಬ್ಯಾಟಿಂಗ್ ಲೈನಪ್ ಹೊಂದಿದ್ದರೂ, ಸ್ಥಿರ ಪ್ರದರ್ಶನ ನೀಡುವಲ್ಲಿ ಬೆಂಗಳೂರು ತಂಡ ವೈಫಲ್ಯ ಕಂಡಿದೆ.
- ಕ್ರಿಸ್ ಗೇಯ್ಲ್ ಸಂಪೂರ್ಣ ಚೇತರಿಸಿಕೊಂಡಿಲ್ಲ ಎಂದು ಹೇಳಿರುವುದು ಮತ್ತು ಅಲ್ಬೀ ಮಾರ್ಕೆಲ್ ಫಾರ್ಮ್ಗೆ ಮರಳದಿರುವುದು ತಂಡದಲ್ಲಿ ಮೂಡಿರುವ ಸಣ್ಣ ಆತಂಕಕ್ಕೆ ಕಾರಣವಾಗಿದೆ.
- ಅತಿ ಹೆಚ್ಚು ಹಣ ಕೊಟ್ಟ ಖರೀದಿಸಿರುವ ಯುವರಾಜ್ ಸಿಂಗ್ ಅವರು ನಿರೀಕ್ಷಿತ ಪ್ರದರ್ಶನ ನೀಡದಿರುವುದು ತಂಡದ ಮತ್ತೊಂದು ವೈಫಲ್ಯ.
- ಬೌಲಿಂಗ್ ವಿಭಾಗ ನಿರೀಕ್ಷಿತ ಪ್ರಮಾಣದಲ್ಲಿ ತಂಡಕ್ಕೆ ಆಸರೆಯಾಗುತ್ತಿಲ್ಲ. ಇದು ತಂಡದ ಗೆಲವಿನ ಹಾದಿಗೆ ಅಡ್ಡವಾಗುತ್ತಿದೆ.
- ಈ ಹಿಂದೆ ಆಡಿರುವ ಪಂದ್ಯಗಳಲ್ಲಿ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿರುವುದು ತಂಡಕ್ಕೆ ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ.
ಸನ್ರೈಸರ್ಸ್ ಹೈದರಾಬಾದ್
ಶಕ್ತಿ
- ನಾಯಕ ಶಿಖರ್ ಧವನ್ ಆರಂಭಿಕರಾಗಿ ಮಿಂಚುವ ಶಕ್ತಿ ಹೊಂದಿದ್ದು, ಈ ಪಂದ್ಯದಲ್ಲೂ ಪ್ರಮುಖ ಪಾತ್ರ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ.
- ಇದುವರೆಗಿನ ಪಂದ್ಯಗಳಲ್ಲಿ ಎರೋನ್ ಫಿಂಚ್ ಅತ್ಯಾಕರ್ಷಕ ಬ್ಯಾಟಿಂಗ್ ನಡೆಸಿದ್ದಾರೆ. ಫಿಂಚ್ ಬ್ಯಾಟಿಂಗ್ ಪಂಚ್ ಒತ್ತುವ ನಿರೀಕ್ಷೆಗಳಿವೆ.
- ಹೆನ್ರಿಕ್ಸ್, ವಾರ್ನರ್, ಸಾಮಿ ಬ್ಯಾಟಿಂಗ್ ವಿಭಾಗದಲ್ಲಿ ಸನ್ರೈಸರ್ಸ್ ಪರ ಮಿಂಚುವ ಸಾಮರ್ಥ್ಯ ಹೊಂದಿದ್ದಾರೆ.
- ಬೌಲಿಂಗ್ನಲ್ಲಿ ಸ್ಟೇಯ್ನ್ ದೊಡ್ಡ ಆಸ್ತಿ.
- ಇನ್ನು ಭುವನೇಶ್ವರ್, ಅಮಿತ್ ಮಿಶ್ರಾ ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್ ಅವರು ಸಹ ತಂಡಕ್ಕೆ ನೆರವಾಗುವ ಶಕ್ತಿ.
ದೌರ್ಬಲ್ಯ
- ಟಿ20 ಕ್ರಿಕೆಟ್ನಲ್ಲಿ ಮಿಂಚಿನ ಬ್ಯಾಟಿಂಗ್ ಬೀಸುವ ನಾಯಕ ಶಿಖರ್ ಧವನ್ ಸ್ಥಿರ ಪ್ರದರ್ಶನ ನೀಡದಿರುವುದು.
- ಅಲ್ಲದೆ, ಸನ್ರೈಸರ್ಸ್ ತಂಡದ ಬ್ಯಾಟಿಂಗ್ ಪಾಳೆಯ ಇದುವರೆಗೂ ನಿರೀಕ್ಷೆಗೆ ತಕ್ಕ ಯಶಸ್ಸು ಸಾಧಿಸಿಲ್ಲ.
- ಅದ್ಭುತ ಬೌಲಿಂಗ್ ಪ್ರದರ್ಶಿಸುತ್ತಿರುವ ಸ್ಪಿನ್ನರ್ ಅಮಿತ್ ಮಿಶ್ರಾ ಅವರು ಸಹ ಕೆಲವೊಮ್ಮೆ ರನ್ ಸೋರಿಕೆ ಮರಾಡುತ್ತಿದ್ದಾರೆ.
- ಒಟ್ಟಾರೆಯಾಗಿ ಸ್ಥಿರ ಪ್ರದರ್ಶನ ನೀಡದಿರುವ ತಂಡ ಗೆಲುವಿನ ಹಳಿಗೆ ಮರಳಲು ಒದ್ದಾಡುತ್ತಿದೆ.
- ಸ್ಫೋಟಕ ಬ್ಯಾಟಿಂಗ್ ಮೂಲಕ ದೊಡ್ಡ ಮೊತ್ತ ಕಲೆ ಹಾಕಿ ತಂಡಕ್ಕೆ ಆಸರೆಯಾಗುವ ಬ್ಯಾಟ್ಸ್ಮನ್ಗಳ ಕೊರತೆ.
ಪಂದ್ಯದ ಸಮಯ ರಾತ್ರಿ 8 ಗಂಟೆ
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಚೆನ್ನೈ ಸೂಪರ್ ಕಿಂಗ್ಸ್ 6 5 1 10 +1.189
ಕಿಂಗ್ಸ್ ಇಲೆವೆನ್ ಪಂಜಾಬ್ 6 5 1 10 +1.039
ರಾಜಸ್ಥಾನ ರಾಯಲ್ಸ್ 5 3 2 6 +0.400
ಕೋಲ್ಕತಾ ನೈಟ್ ರೈಡರ್ಸ್ 6 2 4 4 -0.160
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 2 3 4 -0.207
ಸನ್ರೈಸರ್ಸ್ ಹೈದರಾಬಾದ್ 5 2 3 4 -0.642
ಡೆಲ್ಲಿ ಡೇರ್ಡೆವಿಲ್ಸ್ 5 2 3 4 -1.116
ಮುಂಬೈ ಇಂಡಿಯನ್ಸ್ 6 1 5 2 -0.726
-ಮಲ್ಲಿಕಾರ್ಜುನ ಕರಿಯಪ್ಪನವರ