ಕರುಣ್ಗೆ ದ್ರಾವಿಡ್, ವ್ಯಾಟ್ಸನ್ ಸ್ಫೂರ್ತಿ
ನವದೆಹಲಿ: ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ರಾಜಸ್ಥಾನ ರಾಯಲ್ಸ್ಗೆ ರೋಚಕ ಗೆಲುವು ತಂದುಕೊಟ್ಟ ಬ್ಯಾಟ್ಸ್ಮನ್ ಕರುಣ್ ನಾಯರ್, ತಮ್ಮ ಈ ಯಶಸ್ಸಿಗೆ ತಂಡದ ನಾಯಕ ಶೇನ್ ವ್ಯಾಟ್ಸನ್ ಮತ್ತು ಮಾರ್ಗದರ್ಶಕ ರಾಹುಲ್ ದ್ರಾವಿಡ್ ಅವರ ಸ್ಫೂರ್ತಿಯೇ ಕಾರಣ ಎಂದು ಹೇಳಿದ್ದಾರೆ.
ಕರ್ನಾಟಕದ ಈ ಬ್ಯಾಟ್ಸ್ಮನ್ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಕೇವಲ 50 ಎಸೆತಗಳಲ್ಲಿ 73 ರನ್ ಬಾರಿಸಿ ರಾಜಸ್ಥಾನದ ಗೆಲವಿನಲ್ಲಿ ಮಿಂಚಿದ್ದರು. ಪಂದ್ಯದ ಬಳಿಕ ಮಾತನಾಡಿದ ಕರುಣ್, ತಂಡದ ಸಿಬ್ಬಂದಿ ನೀಡಿದ್ದ ಸಲಹೆಯಿಂದ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯಿತು. ಅದರಲ್ಲೂ ದ್ರಾವಿಡ್ ಮತ್ತು ವ್ಯಾಟ್ಸನ್ ಪ್ರೋತ್ಸಾಹ ನನ್ನಲ್ಲಿ ಆತ್ಮವಿಶ್ವಾಸ ಹೆಚ್ಚಿಸಿತು ಎಂದರು. ಬ್ಯಾಟಿಂಗ್ಗೆ ತೆರಳುವ ವೇಳೆ, ಆತ್ಮವಿಶ್ವಾಸದಿಂದ ಚೆಂಡನ್ನು ಎದುರಿಸು ಮತ್ತು ಹೆಚ್ಚು ಸಮಯ ಪಿಚ್ನಲ್ಲಿ ನಿಲ್ಲಲು ಪ್ರಯತ್ನಿಸು ಎಂದು ದ್ರಾವಿಡ್ ತಮಗೆ ಕಿವಿಮಾತು ಹೇಳಿದ್ದರು ಎಂದು 22ರ ಕರುಣ್ ತಿಳಿಸಿದರು. ಕಳೆದ ವರ್ಷವಷ್ಟೇ ರಣಜಿ ಋುತುವಿಗೆ ಪದಾರ್ಪಣೆ ಮಾಡಿದ್ದ ಅವರು ಮೂರು ಶತಕ ಬಾರಿಸಿದ್ದಲ್ಲದೇ 15 ವರ್ಷಗಳ ನಂತರ ಕರ್ನಾಟಕಕ್ಕೆ ರಣಜಿ ಟ್ರೋಫಿ ಗೆದ್ದುಕೊಳ್ಳಲು ನೆರವಾಗಿದ್ದರು. ಕರ್ನಾಟಕದ ಪರ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸುವ ನೀವು, ಇಲ್ಲಿ ಆರಂಭಿಕ ಆಟಗಾರನಾಗಿ ಯಶಸ್ಸು ಕಂಡಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಕರುಣ್ ನಾಯರ್, ಜೂನಿಯರ್ ಮಟ್ಟದಲ್ಲಿ ಇನಿಂಗ್ಸ್ ಆರಂಭಿಸಿದ ಅನುಭವ ನನಗಿತ್ತು. ಹಾಗಾಗಿ, ಇಲ್ಲಿ ಉತ್ತಮ ರೀತಿಯಲ್ಲೇ ಹೊಂದಿಕೊಳ್ಳಲು ಸಾಧ್ಯವಾಯಿತು ಎಂದು ಪ್ರತಿಕ್ರಿಯಿಸಿದರು.