ಕಿಂಗ್ಸ್ ಭೀತಿಯಲ್ಲಿ ಡೆವಿಲ್ಸ್
ನವದೆಹಲಿ: ಸಾಂಘಿಕ ಪ್ರದರ್ಶನ ನೀಡುವಲ್ಲಿ ವೈಫಲ್ಯ ಕಂಡಿರುವ ಡೆಲ್ಲಿ ಡೇರ್ಡೆವಿಲ್ಸ್ ತಂಡ ಸೋಮವಾರ ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಫಿರೋಜ್ ಶಾ ಕೋಟ್ಲಾ ಕಠಿಣ ಸವಾಲು ಎದುರಿಸುತ್ತಿದೆ.ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಐದು ಪಂದ್ಯಗಳಲ್ಲಿ ಜಯ ಕಾಣುವ ಮೂಲಕ ತುಂಬು ವಿಶ್ವಾಸದಲ್ಲಿದೆ. ಆದರೆ, ಇನ್ನೊಂದೆಡೆ ಡೆಲ್ಲಿ ತಂಡ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಸೋಲನುಭವಿಸುವ ಮೂಲಕ ಜಯದ ಹಾದಿಗೆ ಮರಳಲು ಒದ್ದಾಡುತ್ತಿದೆ.ದುಬೈನಿಂದ ತವರಿನ ಅಂಗಣಕ್ಕೆ ಮರಳಿದರೂ, ಡೆಲ್ಲಿ ತಂಡಕ್ಕೆ ಜಯದ ಹಾದಿಗೆ ಮರಳಲು ಸಾಧ್ಯವಾಗುತ್ತಿಲ್ಲ. ಶನಿವಾರ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲೇ ನಡೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಐದು ವಿಕೆಟ್ಗಳ ಅಂತರದಿಂದ ಸೋಲನುಭವಿಸಿತ್ತು.ಎದುರಾಳಿ ತಂಡದ ಸವಾಲುಗಳನ್ನು ಮೆಟ್ಟಿ ನಿಲ್ಲುವಲ್ಲಿ ಡೆಲ್ಲಿ ವಿಫಲವಾದರೆ, ಚೆನ್ನೈ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್ ಸೇರಿದಂತೆ ಎಲ್ಲ ವಿಭಾಗಗಳಲ್ಲೂ ಬಲಿಷ್ಠ ಹೋರಾಟ ನಡೆಸುತ್ತಿದೆ.ಬ್ಯಾಟಿಂಗ್ನಲ್ಲಿ ದಕ್ಷಿಣ ಆಫ್ರಿಕಾದ ಜೀನ್ ಪಾಲ್ ಡುಮಿನಿ ಮತ್ತು ಬೌಲಿಂಗ್ನಲ್ಲಿ ಭಾರತದ ಮೊಹ್ಮದ್ ಶಮಿ ಅವರು ವೇಯ್ನ್ ಪಾರ್ನೆಲ್ ಅವರು ಡೆಲ್ಲಿಗೆ ಕೊಂಚ ನೆರವಾಗುತ್ತಿದ್ದಾರೆ.
8 ತಂಡಗಳು ಭಾಗವಹಿಸಿರುವ ಪಂದ್ಯಾವಳಿಯಲ್ಲಿ ಸತತ ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯಿಂದ ಎರಡನೇ ಸ್ಥಾನ ಪಡೆದುಕೊಂಡಿರುವ ದೆಹಲಿ ತಂಡ, ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಬೇಕಾದರೆ, ಈಗ ಗೆಲ್ಲಲೇಬೇಕಾದ ಅಗತ್ಯವಿದೆ.ಯುಎಇಯಲ್ಲಿ ನಡೆದ ಪಂದ್ಯದಲ್ಲಿ ದೆಹಲಿ ತಂಡ ಚೆನ್ನೈ ವಿರುದ್ಧ 93 ರನ್ಗಳ ಅಂತರದಿಂದ ಹೀನಾಯವಾಗಿ ಸೋಲನುಭವಿಸಿದೆ. 178 ರನ್ಗಳ ಗುರಿಯನ್ನು ಬೆನ್ನಟ್ಟಿದ್ದ ಡೆಲ್ಲಿ ಕೇವಲ 84 ರನ್ ಗಳಿಸುವಷ್ಟರಲ್ಲೇ ಆಲೌಟ್ ಆಗುವ ಮೂಲಕ 93 ರನ್ಗಳ ಅಂತರದಿಂದ ಪರಾಭವ ಹೊಂದಿದೆ.ರಾಸ್ ಟೇಲರ್, ದಿನೇಶ್ ಕಾರ್ತಿಕ್ ಹಾಗೂ ಪ್ರಮುಖವಾಗಿ ನಾಯಕ ಕೆವಿನ್ ಪೀಟರ್ಸನ್ ಅವರು ದೆಹಲಿ ತಂಡದ ಪರ ಗುಡುಗಿದರೆ ಮಾತ್ರ ಪಂದ್ಯಾವಳಿಯ ಇತರ ಪಂದ್ಯಗಳಲ್ಲಿ ಡೆಲ್ಲಿ ಡೇರ್ಡೆವಿಲ್ಸ್ ಜಯದ ಲಯ ಕಂಡುಕೊಳ್ಳಲು ಸಾಧ್ಯವಿದೆ. ಖಿಂಟಾನ್ ಡಿ ಕಾಕ್ ಮತ್ತು ಮುರಳಿ ವಿಜಯ್ ಕೊಂಚ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಆದರೆ, ದೊಡ್ಡ ಮೊತ್ತ ಪೇರಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಹೀಗಾಗಿ ಡೆಲ್ಲಿ ಬ್ಯಾಟ್ಸ್ಮನ್ಗಳು ಜವಾಬ್ದಾರಿಯುತ ಪ್ರದರ್ಶನ ನೀಡುವ ಅಗತ್ಯವಿದೆ.
ಇನ್ನೊಂದೆಡೆ, ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ಡೆಲ್ಲಿ ವಿರುದ್ಧ ಗೆಲ್ಲುವ ಕಾತರದಲ್ಲಿದೆ. ಅಗ್ರ ಕ್ರಮಾಂಕದಿಂದ ಮಧ್ಯಮ ಹಾಗೂ ಕೆಳ ಕ್ರಮಾಂಕದವರೆಗೂ ಚೆನ್ನೈ ಬ್ಯಾಟಿಂಗ್ ಬಲಾಢ್ಯವಾಗಿದೆ. ಅಗ್ರ ಕ್ರಮಾಂಕದಲ್ಲಿ ಡ್ವೈನ್ ಸ್ಮಿತ್, ಬ್ರೆಂಡಾನ್ ಮೆಕಲಂ, ಮಧ್ಯಮ ಕ್ರಮಾಂಕದಲ್ಲಿ ಸುರೇಶ್ ರೈನಾ, ನಾಯಕ ಧೋನಿ ಹಾಗೂ ಫಫ್ ಡು ಪ್ಲೆಸಿಸ್ ಚೆನ್ನೈ ಶಕ್ತಿಯಾಗಿದ್ದಾರೆ.
ಇನ್ನು ಬೌಲಿಂಗ್ ವಿಭಾಗದಲ್ಲಿ ಮಿಂಚುತ್ತಿರುವ ಬೆನ್ ಹಿಲ್ಫೆನ್ಹಾಸ್ ಅವರು ಎದುರಾಳಿ ಬ್ಯಾಟ್ಸ್ಮನ್ಗಳನ್ನು ಕಾಡುತ್ತಿದ್ದಾರೆ. ಮೋಹಿತ್ ಶರ್ಮಾ ಸಹ ತಕ್ಕ ಬೌಲಿಂಗ್ ಪ್ರದರ್ಶಿಸುತ್ತಿದ್ದರೆ, ರವೀಚಂದ್ರನ್ ಅಶ್ವಿನ್ ಅವರು ತಂಡದ ಜಯದಲ್ಲಿ ತಮ್ಮ ಹೆಚ್ಚಿನ ಕೊಡುಗೆಯನ್ನು ನೀಡುತ್ತಿದ್ದಾರೆ.ಇದು ಸಾಲದು ಎಂಬಂತೆ ಆಲ್ರೌಂಡ್ ಆಟಗಾರ ರವೀಂದ್ರ ಜಡೇಜಾ ಎಲ್ಲ ರೀತಿಯ ಪ್ರದರ್ಶನ ನೀಡುವ ಆಟಗಾರ ಎನಿಸಿದ್ದಾರೆ.