ಮೇತಿಯಂಡ, ಚೆರಿಯಂಡ ಮುನ್ನಡೆ
ಕ.ಪ್ರ.ವಾರ್ತೆ , ವಿರಾಜಪೇಟೆ , ಮೇ 4
ಇಲ್ಲಿನ ಜ್ಯೂನಿಯರ್ ಕಾಲೇಜ್ ಮೈದಾನದಲ್ಲಿ ನಡೆಯುತ್ತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ 14ನೇ ದಿನ ಭಾನುವಾರ ಒಟ್ಟು 12 ತಂಡಗಳು ಉತ್ತಮ ಪ್ರದರ್ಶನ ನೀಡಿ ಮುನ್ನಡೆ ಸಾಧಿಸಿದವು.
ಮೈದಾನ 1: ಮೈದಾನ 1ರಲ್ಲಿ ನಡೆದ ಮೊದಲನೇ ಪಂದ್ಯದಲ್ಲಿ ಮೇತಿಯಂಡ ತಂಡವು ಅವರೇಮಾದಂಡ ತಂಡವನ್ನು ಟೈಬ್ರೇಕರ್ನಲ್ಲಿ 5-3 ಗೋಲುಗಳಿಂದ ಮಣಿಸಿತು. ಎರಡೂ ತಂಡಗಳೂ ಮೈದಾನದಲ್ಲಿ ಉತ್ತಮವಾಗಿ ಆಟವಾಡಿ 1-1 ಸಮಬಲ ಸಾಧಿಸಿದರು.
ಮೇತಿಯಂಡ ತಂಡದ ಪರವಾಗಿ ಚೆಂಗಪ್ಪ 1 ಗೋಲು ದಾಖಲಿಸಿದರೆ, ಅವರೆಮಾದಂಡ ತಂಡದ ಪರ ಬೋಪಯ್ಯ 1 ಗೋಲು ದಾಖಲಿಸಿದರು.
ಪೆಮ್ಮಾರ ಗೆಲವು: ಎರಡನೇ ಪಂದ್ಯದಲ್ಲಿ ಐನಂಡ ತಂಡವು ಪೆಮ್ಮಾರ ತಂಡದ ಮುಂದೆ ಶರಣಾಯಿತು. ಪೆಮ್ಮಾರ ತಂಡದ ಪರವಾಗಿ ಸೋಮಣ್ಣ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದೊದಗಿಸಿದರು.
ಮೂರನೇ ಪಂದ್ಯದಲ್ಲಿ ಹೊಟ್ಟೆಂಗಡ ಮುಕ್ಕಾಟಿರ ತಂಡವು (ಬೇತ್ರಿ) ಕೊಟ್ಟಂಗಡ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ಮುಕ್ಕಾಟಿರ ತಂಡದ ಪರವಾಗಿ ಪೆಮ್ಮಯ್ಯ 2 ಗೋಲು ದಾಖಲಿಸಿ ತಂಡಕ್ಕೆ ಜಯ ತಂದೊದಗಿಸಿದರು. ಹಾಗೂ ಕೊಟ್ಟಂಗಡ ತಂಡದ ಪರವಾಗಿ ಸೋಮಣ್ಣ 1 ಗೋಲು ದಾಖಲಿಸಿದರು.
ಏಕಮುಖ ಗೆಲವು: ನಾಲ್ಕನೇ ಪಂದ್ಯದಲ್ಲಿ ಕುಂಡ್ಯೋಳಂಡ ತಂಡವು ಉದ್ದಪಂಡ ತಂಡವನ್ನು 3-0 ಗೋಲುಗಳಿಂದ ಮಣಿಸಿ ಭರ್ಜರಿ ಜಯ ಗಳಿಸಿತು. ಕುಂಡ್ಯೋಳಂಡ ತಂಡದ ಪರವಾಗಿ ಬಿಪಿನ್ ಬೆಳ್ಯಪ್ಪ, ಸೋಮಯ್ಯ ಹಾಗೂ ಗಗನ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದುಕೊಟ್ಟರು. ಐದನೇ ಪಂದ್ಯದಲ್ಲಿ ತಂಬುಕುತ್ತಿರ ತಂಡವು ಕೇಳೇಟಿರ ತಂಡವನ್ನು ಟೈಬ್ರೇಕರ್ನಲ್ಲಿ 4-3 ಗೋಲುಗಳಿಂದ ಮಣಿಸಿತು. ಎರಡೂ ತಂಡಗಳು ಮೈದಾನದಲ್ಲಿ ಸಮ ಸಮ ಗೋಲು ದಾಖಲಿಸಿದವು.
ಕೊನೆಯ ಪಂದ್ಯದಲ್ಲಿ ಮೂಕಳೇರ ತಂಡವು ಅಪ್ಪನೆರವಂಡ ತಂಡವನ್ನು 4-1 ಗೋಲುಗಳಿಂದ ಟೈಬ್ರೇಕರ್ನಲ್ಲಿ ಮಣಿಸಿತು. ಎರಡು ತಂಡಗಳು ತಲಾ ಒಂದೊಂದು ಗೋಲು ದಾಖಲಿಸಿದವು.
ಮೈದಾನ 2: ಎರಡನೇ ಮೈದಾನದಲ್ಲಿ ಚೆರಿಯಂಡ ತಂಡವು ಪಾಡಂಡ ತಂಡವನ್ನು 1-0 ಗೋಲುಗಳಿಂದ ಬಗ್ಗು ಬಡಿಯಿತು. ಚೆರಿಯಂಡ ರೋಷನ್ 1 ಗೋಲು ದಾಖಲಿಸಿ, ತಂಡಕ್ಕೆ ಜಯ ತಂದೊದಗಿಸಿದರು.
ತೀವ್ರ ಹಣಾಹಣಿ: 2ನೇ ಪಂದ್ಯದಲ್ಲಿ ಕೋಡಿಮಣಿಯಂಡ ತಂಡವು ಟೈಬ್ರೇಕರ್ನಲ್ಲಿ ಬೋಳ್ಳೆಪಂಡ ತಂಡವನ್ನು 7-6 ಗೋಲುಗಳಿಂದ ಮಣಿಸಿತು. ಮೂರನೇ ಪಂದ್ಯದಲ್ಲಿ ಅಪ್ಪಚ್ಚಿರ ತಂಡವು ಅಣ್ಣಾಡಿಯಂಡ ತಂಡವನ್ನು 3-1 ಗೋಲುಗಳಿಂದ ಮಣಿಸಿತು. ಅಣ್ಣಾಡಿಯಂಡ ತಂಡವು ಅಪ್ಪಚ್ಚೀರ ತಂಡದ ಎದುರು ಉತ್ತಮ ಪ್ರದರ್ಶನ ತೋರಿದರೂ ಕೊನೆಯಲ್ಲಿ ಅಪ್ಪಚ್ಚಿರ ತಂಡವು 3-1 ಗೋಲುಗಳಿಂದ ಅಣ್ಣಾಡಿಯಂಡ ತಂಡವನ್ನು ಮಣಿಸಿತು. ಅಪ್ಪಚ್ಚೀರ ತಂಡದ ಪರವಾಗಿ ಜೆಸಿನ್ ಬೋಪಣ್ಣ ಹಾಗೂ ದರ್ಶನ್ ಹಾಗೂ ಆಶಿತ್ ತಲಾ 1 ಗೋಲು ದಾಖಲಿಸಿ ತಂಡಕ್ಕೆ ಜಯ ತಂದು ಕೊಡುವಲ್ಲಿ ಸಫಲರಾದರು. ಅಣ್ಣಾರಿಯಂಡ ತಂಡದ ಪರವಾಗಿ ಬಿಪಿನ್ ಚರ್ಮಣ್ಣ ಏಕೈಕ ಗೋಲು ದಾಖಲಿಸಿದರು.
4ನೇ ಪಂದ್ಯದಲ್ಲಿ ಕಂಬೀರಂಡ ತಂಡವು ಕುಪ್ಪಣಮಾಡ ತಂಡವನ್ನು ಮೈದಾನದಲ್ಲಿ ಭರ್ಜರಿಯಾಗಿ 5-0 ಗೋಲುಗಳಿಂದ ಮಣಿಸಿತು. ಕಂಬೀರಂಡ ತಂಡದ ಪರವಾಗಿ ಮಿಂಚಿನ ಆಟಗಾರರಾದ ಯೋಗೇಶ್ ಹಾಗೂ ರಾಯ್ ತಲಾ ಎರಡು ಗೋಲು ದಾಖಲಿಸಿದರು. ಸತೀಶ್ ಒಂದು ಗೋಲು ದಾಖಲಿಸಿದರು.
5ನೇ ಪಂದ್ಯದಲ್ಲಿ ಕಾಯಪಂಡ ತಂಡವು ಚರ್ಮಣಂಡ ತಂಡವನ್ನು 1-0 ಗೋಲುಗಳಿಂದ ಮಣಿಸಿತು. ಕಾಯಪಂಡ ತಂಡದ ಪರವಾಗಿ ದೇವಯ್ಯ ದಾಖಲಿಸಿದ ಏಕೈಕ ಗೋಲು ಕಾಯಪಂಡ ತಂಡ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಸಹಕಾರಿಯಾಯಿತು.
ಕೊನೆಯ ಪಂದ್ಯದಲ್ಲಿ ಮುರುವಂಡ ತಂಡವು ಚೊಟ್ಟೇರ ತಂಡವನ್ನು 6-1 ಗೋಲುಗಳಿಂದ ಮಣಿಸಿತು. ದಿನದ ಕೊನೆಯ ಪಂದ್ಯದಲ್ಲಿ ಮುರುವಂಡ ತಂಡವು ಉತ್ತಮ ಪ್ರದರ್ಶನ ನೀಡಿ ಜನರಿಗೆ ಮನರಂಜನೆಯ ರಸದೌತಣ ನೀಡಿತು. ಮುರುವಂಡ ತಂಡದ ಪರವಾಗಿ ಅಣ್ಣಯ್ಯ ಗೋಲುಗಳ ಮೇಲೆ ಗೋಲಿನಂತೆ 3 ಗೋಲು ದಾಖಲಿಸಿದರೆ, ಅಪ್ಪಣ್ಣ ಎರಡು ಗೋಲು ದಾಖಲಿಸಿದರು. ಕಾರ್ಯಪ್ಪ ಏಕೈಕ ಗೋಲು ದಾಖಲಿಸಿ ಭರ್ಜರಿ ಜಯ ತಂದುಕೊಡುವಲ್ಲಿ ಕಾರಣರಾದರು. ಚಟ್ಟೇರ ತಂಡದ ಪರವಾಗಿ ಕವನ್ ದಾಖಲಿಸಿದ ಏಕೈಕ ಗೋಲು ಚಟ್ಟೇರ ತಂಡವು ಖಾತೆ ತೆರೆಯುವಲ್ಲಿ ಸಹಕಾರಿಯಾಯಿತು.