ರಾಯಲ್ಸ್ ಮುಂದೆ ರೈಡರ್ಸ್ಗೆ ಸೇಡಿನ ಕಿಚ್ಚು
ಅಹಮದಾಬಾದ್: ರಾಜಸ್ಥಾನ ರಾಯಲ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವಿನ ಮೊದಲ ಸುತ್ತಿನ ಮುಖಾಮುಖಿಯಲ್ಲಿ ಕಂಡುಬಂದ ರೋಚಕ ಕ್ಷಣಗಳು ಇನ್ನೂ ಹಚ್ಚ ಹಸಿರಾಗಿರುವಂತೆಯೆ ಉಭಯ ಪಡೆಗಳು ಎರಡನೇ ಬಾರಿಗೆ ಪರಸ್ಪರ ಹೋರಾಟಕ್ಕೆ ಸಜ್ಜಾಗಿವೆ.
ಅಬುಧಾಬಿಯಲ್ಲಿ ಏಪ್ರಿಲ್ 29ರಂದು ರಾಜಸ್ಥಾನ ರಾಯಲ್ಸ್ ಮತ್ತು ಕೊಲ್ಕತಾ ನೈಟ್ ರೈಡರ್ಸ್ ಸೆಣಸಿದಾಗ ನಿಗದಿತ 20 ಓವರುಗಳಲ್ಲಿ ಫಲಿತಾಂಶ ರೋಚಕ ಟೈನಲ್ಲಿ ಅಂತ್ಯಗೊಂಡಿತ್ತು. ಅಚ್ಚರಿ ಎಂದರೆ, ನಂತರದ ಸೂಪರ್ ಓವರ್ನಲ್ಲಿ ಸಹ ಸ್ಕೋರ್ ಸಮನಾಗುವುದರೊಂದಿಗೆ ಎರಡನೇ ಬಾರಿಗೆ ಪಂದ್ಯ ಟೈನಲ್ಲಿ ಮುಕ್ತಾಯಗೊಂಡಿತು. ಆದರೆ, ಅಂತಿಮವಾಗಿ ಅತಿ ಹೆಚ್ಚು ಬೌಂಡರಿಗಳಿಸಿದ ಆಧಾರದ ಮೇಲೆ ರಾಜಸ್ಥಾನ ರಾಯಲ್ಸ್ಗೆ ಗೆಲವು ಪ್ರಾಪ್ತಿಯಾಗಿತ್ತು.
ಈ ಗೆಲವು ರಾಜಸ್ಥಾನ ಆಟಗಾರರಲ್ಲಿ ಹೊಸ ಹುಮ್ಮಸ್ಸು ತುಂಬಿದೆ. ತನ್ನ ಕಳೆದ ಪಂದ್ಯದಲ್ಲಿ ರಾಜಸ್ಥಾನ ತಂಡ ಡೆಲ್ಲಿ ಡೇರ್ಡೆವಿಲ್ಸ್ ವಿರುದ್ಧ ಜಯಗಳಿಸಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಎದುರು ಕೋಲ್ಕತಾ ನೈಟ್ ರೈಡರ್ಸ್ ಸೋಲಿನ ಕಹಿ ಅನುಭವಿಸಿತ್ತು.
ಸದ್ಯ ರಾಜಸ್ಥಾನ ತಂಡ ಉತ್ತಮ ಸ್ಥಿತಿಯಲ್ಲಿದೆ. ಆಡಿದ 6 ಪಂದ್ಯಗಳ ಪೈಕಿ 4ರಲ್ಲಿ ಜಯ ಮತ್ತು 2ರಲ್ಲಿ ಸೋಲನುಭವಿಸಿದೆ. ಕೊಲ್ಕತಾ ಮಾತ್ರ 6 ಪಂದ್ಯಗಳನ್ನಾಡಿದ್ದು, ಕೇವಲ 2ರಲ್ಲಿ ಗೆಲವು ಮತ್ತು 4ರಲ್ಲಿ ಸೋತಿದೆ.
ಇದುವರೆಗಿನ ಅಂಕಿ-ಅಂಶ ಗಮನಿಸಿದರೆ, ರಾಜಸ್ಥಾನ ತಂಡ ಗೆಲ್ಲುವ ನೆಚ್ಚಿನ ತಂಡವೆನಿಸಿದೆ.
ಶೇನ್ ವ್ಯಾಟ್ಸನ್ ನಾಯಕತ್ವದಲ್ಲಿರುವ ರಾಜಸ್ಥಾನ ಪಡೆಯಲ್ಲಿ ಅಜಿಂಕ್ಯಾ ರಹಾನೆ, ಜೇಮ್ಸ್ ಫಾಕ್ನರ್, ಸ್ಟುವರ್ಟ್ ಬಿನ್ನಿ, ಸಂಜು ಸ್ಯಾಮ್ಸನ್, ಬ್ರಾಡ್ ಹಾಡ್ಜ್, ಸ್ಟೀವನ್ ಸ್ಮಿತ್, ಅಭಿಷೇಕ್ ನಾಯರ್, ಕೇನ್ ರಿಚರ್ಡ್ಸನ್, ಟಿಮ್ ಸೌಥಿ, ಉನ್ಮುಕ್ತ ಚಾಂದ್, ಅಮಿತ್ ಮಿಶ್ರಾ, ರಜತ್ ಭಾಟಿಯಾ, ಧವಳ್ ಕುಲಕರ್ಣಿ, ಪ್ರವೀಣ್ ತಾಂಬೆ ಹಾಗೂ ಕಳೆದ ಪಂದ್ಯದ ಹೀರೊ ಕರುಣ್ ನಾಯರ್ ಅವರಂತಹ ಭರವಸೆಯ ಪ್ರತಿಭೆಗಳು ಆಶಾಕಿರಣವಾಗಿದ್ದಾರೆ.
ನಾಳಿನ ಪಂದ್ಯದಲ್ಲಿ ರಾಜಸ್ಥಾನ ತಂಡಕ್ಕೆ ಫಾರ್ಮ್ನಲ್ಲಿರುವ ಬ್ಯಾಟಿಂಗೇ ಶಕ್ತಿ. ಕಳೆದ ಮೂರೂ ಪಂದ್ಯಗಳಲ್ಲಿ ರೋಮಾಂಚಕಾರಿ ಗೆಲವು ದಾಖಲಿಸಿರುವ ರಾಜಸ್ಥಾನ ಈಗ ಸತತ ನಾಲ್ಕನೇ ಗೆಲವಿನ ನಿರೀಕ್ಷೆಯಲ್ಲಿದೆ.
ಮತ್ತೊಂದೆಡೆ ಕೋಲ್ಕತಾ ನೈಟ್ ರೈಡರ್ಸ್ ಕಳೆದ ಮೂರೂ ಪಂದ್ಯಗಳಲ್ಲಿ ಸತತ ಸೋಲಿನ ಕಹಿ ಉಂಡಿದ್ದು ಸಾಕಷ್ಟು ಒತ್ತಡದಲ್ಲಿದೆ.
ನಾಯಕ ಗೌತಮ್ ಗಂಭೀರ್, ಜಾಕ್ ಕಾಲಿಸ್, ರಾಬಿನ್ ಉತ್ತಪ್ಪ ಮತ್ತು ಯೂಸುಫ್ ಪಠಾಣ್ರಂತಹ ಸಾಕಷ್ಟು ಅನುಭವವುಳ್ಳ ಆಟಗಾರರಿದ್ದರೂ, ಇವರೆಲ್ಲ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಗಂಭೀರ್ ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ಮಿಂಚಿಲ್ಲದಿರುವುದು ತಂಡಕ್ಕೆ ದೊಡ್ಡ ಚಿಂತೆಯಾಗಿದೆ.
ಬೌಲಿಂಗ್ನಲ್ಲಿ ಮಾತ್ರ ಸುನೀಲ್ ನಾರಾಯಣ್ ಮತ್ತು ಶಕೀಬ್ ಉಲ್ ಹಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ, ದಾಳಿಯ ನೇತೃತ್ವ ವಹಿಸಿರುವ ವಿನಯ್ಕುಮಾರ್ ಎದುರಾಳಿ ಬ್ಯಾಟ್ಸ್ಮನ್ಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದು ಶಿಕ್ಷೆಗೆ ಗುರಿಯಾಗುತ್ತಿದ್ದಾರೆ.
ಉಳಿದಂತೆ, ಮನೀಷ್ ಪಾಂಡೆ, ಮನ್ವಿಂದರ್ ಬಿಸ್ಲಾ, ಸೂರ್ಯಕುಮಾರ್ ಯಾದವ್, ರಯಾನ್ ಟೆನ್ ಡಾಶ್ಕೇಟ್, ದೇಬಬ್ರತಾ ದಾಸ್, ಕ್ರಿಸ್ ಲಿನ್, ಪಿಯೂಶ್ ಚಾವ್ಲಾ, ಆ್ಯಂಡ್ರೆ ರಸೆಲ್ ತಂಡದಲ್ಲಿರುವ ಭರವಸೆ ಪ್ರತಿಭೆಗಳಾಗಿದ್ದರೂ, ಯಾರು ನೈಜ ಸವಾಲಿಗೆ ತಮ್ಮನ್ನು ಪರೀಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲ.
ಆದರೂ, ಕೋಲ್ಕತಾ ಪಡೆ ಮತ್ತೆ ಗೆಲವಿನ ಲಹರಿಗೆ ಮರಳಲು ಉತ್ತಮ ಹೋರಾಟ ನೀಡುವ ಗುರಿ ಹೊಂದಿದ್ದರೆ, ರಾಜಸ್ಥಾನ ರಾಯಲ್ಸ್ ತಂಡ ವಿಜಯೋತ್ಸವ ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ. ಹಾಗಾಗಿ, ಉಭಯ ತಂಡಗಳ ಮಧ್ಯೆ ಉತ್ತಮ ಕದನ ನಿರೀಕ್ಷಿಸಲಾಗಿದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಚೆನ್ನೈ ಸೂಪರ್ ಕಿಂಗ್ಸ್ 6 5 1 10 1.189
ಕಿಂಗ್ಸ್ ಇಲೆವೆನ್ ಪಂಜಾಬ್ 6 5 1 10 1.039
ರಾಜಸ್ಥಾನ ರಾಯಲ್ಸ್ 5 3 2 6 0.400
ಕೋಲ್ಕತಾ ನೈಟ್ ರೈಡರ್ಸ್ 6 2 4 4 -0.160
ರಾಯಲ್ ಚಾಲೆಂಜರ್ಸ್ ಬೆಂಗಳೂರು 5 2 3 4 -0.207
ಸನ್ರೈಸರ್ಸ್ ಹೈದರಾಬಾದ್ 5 2 3 4 -0.642
ಡೆಲ್ಲಿ ಡೇರ್ಡೆವಿಲ್ಸ್ 5 2 3 4 -1.116
ಮುಂಬೈ ಇಂಡಿಯನ್ಸ್ 6 1 5 2 -0.726