ತಾಂಬೆ ಹ್ಯಾಟ್ರಿಕ್, ನೈಟ್ ರೈಡರ್ಸ್ ತಲೆಕೆಳಗೆ
ಸ್ಪಿನ್ನರ್ ಪ್ರವೀಣ್ ತಾಂಬೆ ಹ್ಯಾಟ್ರಿಕ್ ಸಾಧನೆ ಮಾಡುತ್ತಿದ್ದಂತೆಯೇ ನಾಟಕೀಯ ತಿರುವು...
ಅಹಮದಾಬಾದ್: ಸ್ಪಿನ್ನರ್ ಪ್ರವೀಣ್ ತಾಂಬೆ ಹ್ಯಾಟ್ರಿಕ್ ಸಾಧನೆ ಮಾಡುತ್ತಿದ್ದಂತೆಯೇ ನಾಟಕೀಯ ತಿರುವು ಪಡೆದುಕೊಂಡ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ಆಟಗಾರರು ನಂಬಲರ್ಹ ಗೆಲವಿನೊಂದಿಗೆ ಅಚ್ಚರಿಗೊಳಗಾದರೆ, ಕೈಯಲ್ಲಿದ್ದ ಗೆಲವನ್ನು ನೆಲಕ್ಕೆ ಹಾಕಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವ ದುಸ್ಥಿತಿ ತಂದುಕೊಂಡ ಕೋಲ್ಕತಾ ನೈಟ್ ರೈಡರ್ಸ್ ಆಟಗಾರರು ಮಮ್ಮಲ ಮರಗುವಂತಾಗಿದೆ.
ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಐಪಿಎಲ್ ಟಿ-20 ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ 10 ರನ್ಗಳಿಂದ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ರೋಚಕ ಗೆಲವು ದಾಖಲಿಸಿತು. ಗೆಲ್ಲಲು 171 ರನ್ಗಳ ಗುರಿ ಪಡೆದಿದ್ದ ಕೋಲ್ಕತಾ 20 ಓವರುಗಳಲ್ಲಿ 6 ವಿಕೆಟ್ ನಷ್ಟಕ್ಕೆ 160 ರನ್ಗಳಿಸಲಷ್ಟೇ ಶಕ್ತವಾಯಿತು.
ಆರಂಭದ ಒಂದು ಹಂತದಲ್ಲಿ ಕೆಕೆಆರ್ಗೆ ಗೆಲವು ಸುಲಭವಾಗಿ ಕೈಗೆಟುಕುವುದು ಎಂದೇ ಭಾವಿಸಲಾಗಿತ್ತು. ಏಕೆಂದರೆ, ತಂಡದ ಇನಿಂಗ್ಸ್ ಆರಂಭಿಸಿದ ನಾಯಕ ಗೌತಮ್ ಗಂಭೀರ್ (54ರನ್, 34 ಎಸೆತ, 6 ಬೌಂಡರಿ, 1 ಸಿಕ್ಸರ್) ಮತ್ತು ರಾಬಿನ್ ಉತ್ತಪ್ಪ (65ರನ್, 52 ಎಸೆತ, 5 ಬೌಂಡರಿ, 3 ಸಿಕ್ಸರ್) ಮೊದಲ ವಿಕೆಟ್ಗೆ 14.1 ಓವರುಗಳಲ್ಲಿ 121 ರನ ಕಲೆಹಾಕಿದ್ದರು.
ಆರಂಭಿಕರು ಹಾಕಿಕೊಟ್ಟ ಭದ್ರ ಅಡಿಪಾಯದ ಮೇಲೆ ಗೆಲವಿನ ದಾರಿ ಕಂಡುಕೊಳ್ಳಲು ಕೆಕೆಆರ್ಗೆ ಕಷ್ಟವಾಗಿರಲಿಲ್ಲ. ಆದರೆ, ಈ ಇಬ್ಬರೂ ಆಟಗಾರರು ವೈಯಕ್ತಿಕ ಅರ್ಧಶತಕ ಸಿಡಿಸಿ ಪೆವಿಲಿಯನ್ಗೆ ತೆರಳಿದ ನಂತರ ಪಂದ್ಯದ ದಿಕ್ಕೇ ಬದಲಾಯಿತು.
ತಾಂಬೆ ಹ್ಯಾಟ್ರಿಕ್ಗೆ ಕೆಕೆಆರ್ ತತ್ತರ: ಈ ಹಂತದಲ್ಲಿ ಸೋತೇ ಬಿಟ್ಟೆವು ಎನ್ನುವ ಮನಸ್ಥಿತಿಯಲ್ಲಿದ್ದ ರಾಜಸ್ಥಾನ ರಾಯಲ್ಸ್ ತಂಡದ ಮಾನ ಉಳಿಸಿದವರು ಸ್ಪಿನ್ನರ್ ಪ್ರವೀಣ್ ತಾಂಬೆ ಹಾಗೂ ಶೇನ್ ವ್ಯಾಟ್ಸನ್.
ಮೊದಲಿಗೆ ವ್ಯಾಟ್ಸನ್ ಅವರು ಇನಿಂಗ್ಸ್ನ 15ನೇ ಓವರಿನ ಮೊದಲ, ಮೂರನೇ ಹಾಗೂ ಐದನೇ ಎಸೆತಗಳಲ್ಲಿ ಗಂಭೀರ್, ಉತ್ತಪ್ಪ ಮತ್ತು ರಸೆಲ್ ಅವರನ್ನು ಪೆವಿಲಿಯನ್ಗೆ ಕಳುಹಿಸಿದರು.
ವ್ಯಾಟ್ಸನ್ರ ಓವರ್ ಹ್ಯಾಟ್ರಿಕ್ ನಂತರದ ಮರು ಓವರಿನಲ್ಲಿಯೇ ಮತ್ತೊಂದು ಅಚ್ಚರಿ ಕಾದಿತ್ತು. ಇನಿಂಗ್ಸ್ 15ನೇ ಓವರ್ ಎಸೆಯಲು ಬಂದ ತಾಂಬೆ ಅವರು ಮೊದಲ ಎಸೆತವನ್ನು ವೈಡ್ ಎಸೆದಿದ್ದರು. ಆದರೆ, ಈ ಎಸೆತವನ್ನು ಕೆಣಕಲು ಮುಂದೆ ಬಂದ ಮನೀಷ್ ಪಾಂಡೆ ಸ್ಟಂಪಿಂಗ್ ಆಗಿ ನಿರ್ಗಮಿಸಿದರು. ಬಳಿಕ ನಂತರದ ಎರಡೂ ಎಸೆತಗಳಲ್ಲಿ ಯೂಸುಫ್ ಪಠಾಣ್ ಮತ್ತು ರಯಾನ್ ಟೆನ್ ಡಾಶ್ಕೇಟ್ ಈ ಎರಡೂ ವಿಕೆಟ್ಗಳನ್ನು ಉರುಳಿಸಿದ ತಾಂಬೆ ಋುತುವಿನ ಮೊದಲ ಹ್ಯಾಟ್ರಿಕ್ ಸಾಧನೆಗೆ ಭಾಜನರಾದರು. ಮತ್ತೊಂದೆಡೆ 121ರಿಂದ 123 ರನ್ಗಳ ಅಂತರದಲ್ಲಿ, ಅಂದರೆ ಕೇವಲ ಎರಡು ರನ್ಗಳಲ್ಲಿಯೇ 6 ವಿಕೆಟ್ಗಳನ್ನು ಕೈಚೆಲ್ಲಿದ ಕೋಲ್ಕತಾದ ಸ್ಥಿತಿಯನ್ನು ಯಾರೂ ನಂಬುವಂತಿರಲಿಲ್ಲ. ಕೊನೆಯಲ್ಲಿ ಶಕೀಬ್ ಅಲ್ ಹಸನ್ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ.
ರಾಜಸ್ಥಾನದ ಗೌರವ ಮೊತ್ತ: ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ರಾಜಸ್ಥಾನ ರಾಯಲ್ಸ್ 6 ವಿಕೆಟ್ ನಷ್ಟಕ್ಕೆ 170 ರನ್ಗಳ ಉತ್ತಮ ಮೊತ್ತ ಕಲೆಹಾಕಿತು. ರಾಜಸ್ಥಾನದ ಸಂಘಟಿತ ಬ್ಯಾಟಿಂಗ್ ಪ್ರದರ್ಶನ ತಂಡದ ಸ್ಪರ್ಧಾತ್ಮಕ ಮೊತ್ತಕ್ಕೆ ಕಾರಣವಾಯಿತು. ತಂಡದ ಅಗ್ರಕ್ರಮಾಂಕದ ನಾಲ್ವರು ದಾಂಡಿಗರಾದ ರಹಾನೆ (30ರನ್, 22 ಎಸೆತ, 3 ಬೌಂಡರಿ, 1 ಸಿಕ್ಸರ್), ಕರುಣ್ ನಾಯರ್ (44ರನ್, 35 ಎಸೆತ, 4 ಬೌಂಡರಿ, 1 ಸಿಕ್ಸರ್), ಸಂಜು ಸ್ಯಾಮ್ಸನ್ (37ರನ್, 31 ಎಸೆತ, 3 ಬೌಂಡರಿ) ಮತ್ತು ಶೇನ್ ವ್ಯಾಟ್ಸನ್ (31ರನ್, 20 ಎಸೆತ, 2 ಬೌಂಡರಿ, 2 ಸಿಕ್ಸರ್) ಉಪಯುಕ್ತ ಕಾಣಿಕೆ ನೀಡಿದರು.
ಕೆಕೆಆರ್ ಬೌಲಿಂಗ್ ಪಡೆಯಲ್ಲಿ ವಿನಯ್ಕುಮಾರ್ ಮತ್ತು ಸುನೀಲ್ ನಾರಾಯಣ್ ತಲಾ 2 ವಿಕೆಟ್ ಉರುಳಿಸಿದರು.
ಸ್ಕೋರ್ ವಿವರ
ರಾಜಸ್ಥಾನ ರಾಯಲ್ಸ್ 20 ಓವರುಗಳಲ್ಲಿ 6 ವಿಕೆಟ್ಗೆ 170
ಅಜಿಂಕ್ಯಾ ರಹಾನೆ ರನೌಟ್ 30, ಕರುಣ್ ನಾಯರ್ ಸ್ಟಂಪ್ ಉತ್ತಪ್ಪ ಬಿ ಶಕೀಬ್ 44, ಸಂಜು ಸ್ಯಾಮ್ಸನ್ ಸಿ ಪಾಂಡೆ ಬಿ ನಾರಾಯಣ್ 37, ಶೇನ್ ವ್ಯಾಟ್ಸನ್ ಸಿ ಯಾದವ್ ಬಿ ನಾರಾಯಣ್ 31, ಸ್ಟುವರ್ಟ್ ಬಿನ್ನಿ ಸಿ ಡಾಶ್ಕೇಟ್ ಬಿ ವಿನಯ್ಕುಮಾರ್ 11, ಸ್ಟೀವನ್ ಸ್ಮಿತ್ ಸಿ ಯಾದವ್ ಬಿ ವಿನಯ್ಕುಮಾರ್ 3, ಜೇಮ್ಸ್ ಫಾಕ್ನರ್ ಅಜೇಯ 1, ರಜತ್ ಭಾಟಿಯಾ ಅಜೇಯ 6. ಇತರೆ: (ಲೆಗ್ಬೈ-3, ವೈ-3, ನೋಬಾಲ್-1) 7.
ವಿಕೆಟ್ ಪತನ: 1-52, 2-105, 3-136, 4-153, 5-163, 6-163.
ಬೌಲಿಂಗ್ ವಿವರ: ವಿನಯ್ಕುಮಾರ್ 4-0-42-2, ಉಮೇಶ್ ಯಾದವ್ 3-0-31-0, ಶಕೀಬ್ ಅಲ್ ಹಸನ್ 4-0-25-1, ಸುನೀಲ್ ನಾರಾಯಣ್ 4-0-28-2, ಆ್ಯಂಡ್ರೆ ರಸೆಲ್ 3-0-27-0, ರಯಾನ್ ಟೆನ್ ಡಾಶ್ಕೇಟ್ 2-0-14-0.
ಕೋಲ್ಕತಾ ನೈಟ್ ರೈಡರ್ಸ್ 20 ಓವರುಗಳಲ್ಲಿ 6 ವಿಕೆಟ್ಗೆ 160
ರಾಬಿನ್ ಉತ್ತಪ್ಪ ಸಿ ಭಾಟಿಯಾ ಬಿ ವ್ಯಾಟ್ಸನ್ 65, ಗೌತಮ್ ಗಂಭೀರ್ ಸಿ ಸ್ಯಾಮ್ಸನ್ ಬಿ ವ್ಯಾಟ್ಸನ್ 54, ಆ್ಯಂಡ್ರೆ ರಸೆಲ್ ಬಿ ವ್ಯಾಟ್ಸನ್ 1, ಮನೀಷ್ ಪಾಂಡೆ ಸ್ಟಂಪ್ ಸ್ಯಾಮ್ಸನ್ ಬಿ ತಾಂಬೆ 0, ಶಕೀಬ್ ಅಲ್ ಹಸನ್ ಅಜೇಯ 21, ಯೂಸುಫ್ ಪಠಾಣ್ ಸಿ ಅಂಡ್ ಬಿ ತಾಂಬೆ 0, ರಯಾನ್ ಟೆನ್ ಡಾಶ್ಕೇಟ್ ಎಲ್ಬಿ ಬಿ ತಾಂಬೆ 0, ಸೂರ್ಯಕುಮಾರ್ ಯಾದವ್ ಅಜೇಯ 9. ಇತರೆ: (ಲೆಗ್ಬೈ-5, ವೈ-3, ನೋಬಾಲ್-2) 9.
ವಿಕೆಟ್ ಪತನ: 1-121, 2-122, 3-122, 4-123, 5-123, 6-123.
ಬೌಲಿಂಗ್ ವಿವರ: ವ್ಯಾಟ್ಸನ್ 4-0-21-3, ಟಿಮ್ ಸೌಥಿ 3-0-33-0, ಪ್ರವೀಣ್ ತಾಂಬೆ 4-0-26-3, ಜೇಮ್ಸ್ ಫಾಕ್ನರ್ 4-0-27-0, ರಜತ್ ಭಾಟಿಯಾ 3-0-30-0, ರಾಹುಲ್ ಟಿವಾಟಿಯಾ 2-0-18-0.